ಕಲ್ಲಡ್ಕ: ಮಂಗಳೂರಿನಿಂದ ಅನಿಲ ಸಾಗಿಸುತ್ತಿದ್ದ ಬುಲೆಟ್ ಟ್ಯಾಂಕರ್ ಒಂದು ಮಂಗಳೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಕಲ್ಲಡ್ಕದ ಸೂರಿಕುಮೇರು ಎಂಬಲ್ಲಿ ಸೋಮವಾರ ತಡರಾತ್ರಿ ರಸ್ತೆಗೆ ಉರುಳಿಬಿದ್ದ ಪರಿಣಾಮ ಟ್ಯಾಂಕರ್‌ನಿಂದ ಅನಿಲ ಸೋರಿಕೆಯಾದ ಘಟನೆ ವರದಿಯಾಗಿದೆ.

ಗ್ಯಾಸ್ ತುಂಬಿದ್ದ ಟ್ಯಾಂಕರ್ ಉರುಳಿಬಿದ್ದ ಪರಿಣಾಮ ಘಟನಾ ಸ್ಥಳದಲ್ಲಿ ಗ್ಯಾಸ್ ಸೋರಿಕೆಯಾಗುತ್ತಿರು ಕಾರಣ ಹೆದ್ದಾರಿಯ ಈ ಭಾಗದಲ್ಲಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ಸುತ್ತಮುತ್ತಲಿನ ಜನರನ್ನು ಮನೆಯಿಂದ ಹೊರಬರುವಂತೆ ಸೂಚನೆಯನ್ನು ನೀಡಲಾಗಿದೆ. ಮಂಗಳೂರಿನಿಂದ ಅಗ್ನಿಶಾಮಕ ದಳದ ವಾಹನ ಹಾಗೂ ಸಿಬಂದಿಗಳು ಘಟನಾ ಸ್ಥಳಕ್ಕೆ ಧಾವಿಸಿದ್ದು ಸಂಭಾವ್ಯ ಅಗ್ನಿ ಅನಾಹುತಗಳನ್ನು ತಪ್ಪಿಸಲು ಸ್ಥಳದಲ್ಲಿ ಕಾರ್ಯಪ್ರವೃತ್ತವಾಗಿವೆ.
ರಾತ್ರಿ ಸಮಯದಲ್ಲಿ ಈ ಘಟನೆ ಸಂಭವಿಸಿರುವುದರಿಂದ ಹಾಗೂ ಅನಿಲ ಸೋರಿಕೆಯಾಗುತ್ತಿರುವ ಕಾರಣ ಸ್ಥಳೀಯರಲ್ಲಿ ಆತಂಕದ ವಾತಾವರಣ ಮನೆಮಾಡಿದ್ದು ಮುಂದೇನಾಗುತ್ತದೆಯೋ ಎಂಬ ಭೀತಿಯ ವಾತಾವರಣ ನೆಲೆಸಿದೆ.







