ಬಂಟ್ವಾಳ: ಬಂಟ್ವಾಳ ತಾಲೂಕಿನ ಕೆದ್ದಳಿಕೆ ದ.ಕ.ಜಿ.ಪಂ. ಹಿ.ಪ್ರಾ.ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವವನ್ನು ಕೆದ್ದಳಿಕೆ ಉತ್ಸವ ಎನ್ನುವ ಹೆಸರಿನಲ್ಲಿ ಊರ ಹಬ್ಬವಾಗಿ ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು.
ಮಗುವಿಗೊಂದು ಗಿಡ-ಮನೆಗೊಂದು ಮರ ಯೋಜನೆಗೆ ಚಾಲನೆ, ಮಕ್ಕಳ ವೈಭವದ ದಿಬ್ಬಣ-ಕನ್ನಡಾಭಿಮಾನಿ ಮಕ್ಕಳಿಗೆ ಅದ್ದೂರಿಯ ಔತಣ, ಪೋಚಕರಿಗೆ ಗೌರವಾರ್ಪಣೆ-ಶಾಲಾ ದೇಗುಲಕ್ಕೆ ಹೊರೆಕಾಣಿಕೆ ಸಮರ್ಪಣೆ ಕಾರ್ಯಕ್ರಮಗಳೊಂದಿಗೆ ಕೆದ್ದಳಿಕೆ ಉತ್ಸವ ಅರ್ಥಪೂರ್ಣವಾಗಿ ಸಂಪನ್ನಗೊಂಡಿತು.
ವಾದ್ಯ-ಬ್ಯಾಂಡ್ಗಳ ನಿನಾದ, ವಿವಿಧ ವೇಷ ಭೂಷಣಗಳ ಕುಣಿತ, ವಿವಿಧ ಘೋಷಣೆಗಳ ಆಕರ್ಷಣೆಯೊಂದಿಗೆ ಕೆದ್ದಳಿಕೆ ಅಂಗನವಾಡಿ ಕೇಂದ್ರದ ಬಳಿಯಿಂದ ನೂತನವಾಗಿ ಒಂದನೇ ತರಗತಿಗೆ ಸೇರುವ ಮಕ್ಕಳನ್ನು ಮೆರವಣಿಗೆ ಮೂಲಕ ಶಾಲೆಗೆ ಬರಮಾಡಿಕೊಳ್ಳಲಾಯಿತು.

ರಾಜ್ಯ ಅರಣ್ಯ, ದ.ಕ.ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಅವರು ಒಂದನೇ ತರಗತಿಗೆ ದಾಖಲಾದ ಮಕ್ಕಳಿಗೆ ಮಾಲಾರ್ಪಣೆ ಮಾಡಿ ಸ್ವಾಗತಿಸುವ ಮೂಲಕ ಕೆದ್ದಳಿಕೆ ಉತ್ಸವಕ್ಕೆ ಚಾಲನೆ ನೀಡಿದರು. ಜಿಲ್ಲೆಯಾಧ್ಯಾಂತ ಇಂದು ಶಾಲಾ ಪ್ರಾರಂಭೋತ್ಸವ ನಡೆಯುತ್ತಿದ್ದು ಕೆದ್ದಳಿಕೆ ಶಾಲೆಯ ಸಮಾರಂಭದಲ್ಲಿ ಭಾಗವಹಿಸುವ ಮೂಲಕ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಗಿದೆ. ಶಾಲಾ ಕಾರ್ಯಕ್ರಮವನ್ನು ಊರಿನ ಉತ್ಸವವಾಗಿ ಆಚರಿಸುವ ಮೂಲಕ ಶೈಕ್ಷಣಿಕ ಜಾಗೃತಿ ಮೂಡಿಸುವ ಇಲ್ಲಿನ ಕಾರ್ಯಕ್ರಮ ಇತರೆಡೆಗಳಿಗೆ ಮಾದರಿಯಾಗಿದೆ. ಶೈಕ್ಷಣಿಕ ಪ್ರಗತಿಗಾಗಿ ಸರಕಾರ ಹಲವಾರು ಮಹತ್ವಾಕಾಂಕ್ಷಿ ಯೋಜನೆಗಳನ್ನು ಜಾರಿಗೊಳಿಸುತ್ತಿದ್ದು ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದು ಉತ್ತಮ ಪ್ರಜೆಗಳಾಗುವ ಮೂಲಕ ಸದೃಢ ದೇಶವನ್ನು ಕಟ್ಟುವಂತಾಗಬೇಕು ಎಂದು ಹೇಳಿದರು.
ದಿಬ್ಬಣ ಮೆರವಣಿಗೆಯಲ್ಲಿ ಬಂದ ಮಕ್ಕಳನ್ನು ಶಾಲಾ ಬಳಿ ಶಿಕ್ಷಕರು ಹಾಗೂ ಹಿರಿಯ ವಿದ್ಯಾರ್ಥಿಗಳು ಪನ್ನೀರು, ಹೂ ಚೆಲ್ಲಿ ಸ್ವಾಗತಿಸಿದರು. ಬಳಿಕ ಹೊಸ ಮಕ್ಕಳಿಗೆ ಆರತಿ ಬೆಳಗಿ, ಹಣ್ಣು ಹಂಪಲು ನೀಡಿ ಗೌರವಿಸಲಾಯಿತು. ನೂತನವಾಗಿ ಸರಕಾರಿ ಶಾಲೆಗೆ ಮಕ್ಕಳನ್ನೂ ದಾಖಲಿಸಿದ ಪೋಚಕರಿಗೂ ಹೂ ನೀಡಿ ಅಬಿನಂದಿಸಲಾಯಿತು. ಈ ಸಂದರ್ಭದಲ್ಲಿ ಊರವರಿಂದ ಶಾಲೆಗೆ ಹೊರೆಕಾಣಿಕೆ ನೀಡಲಾಯಿತು. ತರಕಾರಿಗಳು, ಅಕ್ಕಿ, ತೆಂಗಿನಕಾಯಿ ಮೊದಲಾದ ಹೊರೆಕಾನಿಕೆ ಶಾಲೆಗೆ ಸಮರ್ಪಣೆಯಾಯಿತು.
ಬಂಟ್ವಾಳ ತಾಲೂಕು ಅರಣ್ಯ ಇಲಾಖೆಯ ಸಹಯೋಗದೊಂದಿಗೆ ಪ್ರತಿ ಮಗುವಿನ ಹೆಸರಿನಲ್ಲಿ ಶಾಲೆಯಲ್ಲಿ ಒಂದೊಂದು ಗಿಡ ನೆಡುವ ಹಾಗೂ ಪ್ರತಿ ಮನೆಗೊಂದು ಗಿಡ ನೀಡುವ ಯೋಜನೆಗೆ ಇದೇ ಸಂದರ್ಭ ಸಚಿವರು ಚಾಲನೆ ನೀಡಿದ್ದು ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವ ಈ ವಿಶಿಷ್ಠ ಯೋಜನೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ವಲಯ ಅರಣ್ಯಾಧಿಕಾರಿ ಕೆ.ಸಿ.ಮ್ಯಾಥ್ಯೂ ಅರಣ್ಯ ಸಂರಕ್ಷಣೆಯ ಬಗ್ಗೆ ಮಾಹಿತಿ ನೀಡಿದರು. ಎಲ್ಲ ವಿದ್ಯಾರ್ಥಿ ಗಳಿಗೆ ಉಚಿತವಾಗಿ ಬರೆಯುವ ಪುಸ್ತಕಗಳನ್ನು ವಿತರಿಸಲಾಯಿತು.
ಕ್ಷೇತ್ರ ಶಿಕ್ಷನಾದಿಕಾರಿ ಶೇಷಶಯನ ಕಾರಿಂಜ ಉಗ್ರಾಣವನ್ನು ಉದ್ಘಾಟಿಸಿ ಮಾತನಡಿ ಇವತ್ತು ತಾಲುಕಿನಾಧ್ಯಾಂತ 196 ಸರಕಾರಿ ಪ್ರಾಥಮಿಕ ಹಾಗೂ 35 ಸರಕಾರಿ ಪ್ರೌಡ ಮತ್ತು 54 ಅನುದಾನಿತ ಪ್ರಾಥಮಿಕ ಹಾಗೂ 15 ಅನುದಾನಿತ ಪ್ರೌಡಶಾಲೆಗಳಲ್ಲಿ ಶಾಲಾ ಪ್ರಾರಂಭೊತ್ಸವವನ್ನು ವಿಶಿಷ್ಠವಾಗಿ ಆಚರಿಸಲಾಗುತ್ತಿದೆ ಎಂದರು.
ತಾ.ಪಂ.ಸದಸ್ಯ ಬಿ.ಪದ್ಮಶೇಖರ ಜೈನ್, ಕಾವಳಮೂಡೂರು ಗ್ರಾ.ಪಂ.ಅಧ್ಯಕ್ಷ ಯಾಕೂಬ್ ಸಾಹೇಬ್, ಪಂಚಾಯತು ಸದಸ್ಯೆ ಚಂದ್ರಾವತಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ದಿವಾಕರದಾಸ್,ಸಮನ್ವಯಾಧಿಕಾರಿ ಕಮಲಾಕ್ಷ, ಶಿಕ್ಷಣ ಸಂಯೋಜಕ ರಮಾನಂದ, ಶಿಕ್ಷಣ ಸಂಪನ್ಮೂಲ ವ್ಯಕ್ತಿ ಜಯ, ಬಾಲವಿಕಾಸ ಅಕಾಡೆಮಿ ಸದಸ್ಯ ಮೌನೇಶ್ ವಿಶ್ವಕರ್ಮ ಮೊದಲಾದವರು ಉಪಸ್ಥಿತರಿದ್ದರು.
ಮುಖ್ಯ ಶಿಕ್ಷಕ ರಮೇಶ ನಾಯಕ್ ರಾಯಿ ಸ್ವಾಗತಿಸಿದರು. ಶಾಲಾ ಸಂಪನ್ಮೂಲ ವ್ಯಕ್ತಿ ಗೋಪಾಲ ಅಂಚನ್ ಕೆದ್ದಳಿಕೆ ಉತ್ಸವದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಚಂದಪ್ಪ ವಂದಿಸಿದರು. ಶಿಕ್ಷಕ ವಿಠಲ ಕಾರ್ಯಕ್ರಮ ನಿರೂಪಿಸಿದರು




