ಬಜ್ಪೆ: ಗಂಡನ ಮನೆಯವರು ತನಗೆ ವರದಕ್ಷಿಣೆ ಕಿರುಕುಳ ನೀಡಿ ಶಾರೀರಿಕ ಮಾನಸಿಕ ಹಿಂಸೆ ನೀಡಿ ಚಿನ್ನಾಭರಣಗಳನ್ನು ಕಸಿದುಕೊಂಡು ಕೊಲೆಬೆದರಿಕೆಯೊಡ್ಡಿದ್ದಾರೆಂದು ಆರೋಪಿಸಿ ಬಜ್ಪೆಯ ಕಿನ್ನಿಪದವು ಜುಮಾ ಮಸೀದಿ ಸಮೀಪದ ನಿವಾಸಿ ಮಹಮ್ಮದ್ ಹನೀಫ್ ಎಂಬವರ ಪುತ್ರಿ ನೌಶಿದಾ ಬಾನು(21) ಎಂಬವರು ಬಜ್ಪೆ ಠಾಣೆಗೆ ದೂರು ನೀಡಿದ್ದಾರೆ.
ಜೋಕಟ್ಟೆ ನಿವಾಸಿ ಮಹಮ್ಮದ್ ಮನ್ಸೂರು ಪ್ರಕರಣದ ಪ್ರಮುಖ ಆರೋಪಿ. ಇವರ ಜೊತೆ ಜೋಕಟ್ಟೆ ನಿವಾಸಿಗಳಾದ ಗಂಡನ ತಂದೆ ಶೇಖಬ್ಬ, ತಾಯಿ ಖತೀಜ, ನಾದಿನಿಯರಾದ ರುಕಿಯಾ ಹಾಗೂ ಶಕೀನಾ ಎಂಬವರ ವಿರುದ್ಧವೂ ದೂರು ನೀಡಿದ್ದಾರೆ.
ಮದುವೆಯ ಸಂದರ್ಭ ತನ್ನ ತಂದೆ 55 ಪವನ್ ಚಿನ್ನ ವರದಕ್ಷಿಣೆ ನೀಡಿದ್ದರು. ಅದಲ್ಲದೆ 35 ಸಾವಿರ ಬೆಲೆಯ ಟಿಸ್ಸೋಟ್ ವಾಚ್, 20 ಸಾವಿರ ರೂ. ಮೌಲ್ಯದ ಉಂಗುರ, ಮದುವೆಯ ಹಾಲ್ನ ಅರ್ಧ ಖರ್ಚು ಒಂದೂವರೆ ಲಕ್ಷ ರೂ. ನೀಡಲಾಗಿದೆ. ಆದರೆ ಮದುವೆಯ ಬಳಿಕ ಗಂಡನ ತಂದೆ, ತಾಯಿ ಹಾಗೂ ನಾದಿನಿಯರು ವರದಕ್ಷಿಣೆ ಹಣ ಸಾಲದೆ ಇನ್ನೂ 10 ಲಕ್ಷ ರೂ. ಹಣ ತರಬೇಕು ಎಂದು ಮಾನಸಿಕ ಹಿಂಸೆ ನೀಡಿದ್ದಾರೆ. ತನ್ನ 12 ಪವನ್ ಬಳೆಗಳನ್ನು ಮೋಸದಿಂದ ಪಡೆದು ನಾದಿನಿಯರಿಗೆ ನೀಡಿದ್ದಾರೆ. ಅಲ್ಲದೆ ನನಗೆ ಮಕ್ಕಳಾಗುವುದು ಬೇಡ ಎಂದು ಅತ್ತೆ ಮಾವ ಹಿಂಸೆ ನೀಡಿ ಗರ್ಭ ತೆಗೆಸುವಂತೆ ಹೇಳಿ ಹೊಡೆಯುತ್ತಿದ್ದರು ಎಂದು ನೌಶಿದಾ ಆರೋಪಿಸಿದ್ದಾರೆ.
ಇದಲ್ಲದೆ ತನ್ನ ಅತ್ತೆ, ನಾದಿನಿಯರು, ಮಾವ ಕೂಡಾ ಮಾನಸಿಕ ಹಾಗೂ ಶಾರೀರಿಕ ಹಿಂಸೆ ನೀಡಿದ್ದಾರೆ. ಗಂಡ ಇದಕ್ಕೆ ಮೂಖಪ್ರೇಕ್ಷಕನಾಗಿ ಪ್ರಚೋದನೆ ನೀಡಿದ್ದಾರೆ. ತಲಾಖ್ ಕೊಡದೆ ಬೇರೆ ಮದುವೆಯಾಗುವುದಾಗಿ ಬೆದರಿಸಿದ ಗಂಡ ಅದನ್ನು ನೋಡಿ ನೀನು, ನಿನ್ನ ಮನೆಯವರು ನೇಣು ಬಿಗಿದು ಸಾಯಬೇಕು ಎಂದು ಜೀವಬೆದರಿಕೆಯೊಡ್ಡಿದ್ದಾರೆಂದು ಅವರು ದೂರಲ್ಲಿ ಆಪಾದಿಸಿದ್ದಾರೆ.
ಆರೋಪಿಗಳ ವಿರುದ್ಧ ಬಜ್ಪೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
