ಕೈಕಂಬ: ಗ್ರಾಮೀಣ ಮಹಿಳೆ ಸಹ ಸಕಾಲಿಕವಾಗಿ ಶಿಕ್ಷಣ ಪಡೆದು ಕೀಳರಿಮೆಯನ್ನು ಬೆಳೆಸಿಕೊಳ್ಳದೆ ಆತ್ಮವಿಶ್ವಾಸದಿಂದ ಸ್ವಸಾಮರ್ಥ್ಯವನ್ನು ಬೆಳೆಸಿಕೊಂಡು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರೀಯವಾಗಿ, ಇಂತಹ ಸೇವಾ ಸಂಸ್ಥೆಗಳ ಮಾರ್ಗದರ್ಶನದ ಮೂಲಕ ಮುಂದೆ ಬರಬೇಕಾಗಿದೆ. ಇಂದು ಅನೇಕ ಮಹಿಳೆಯರು ದೈಹಿಕವಾಗಿ ಅಂಗವಿಕಲರಾಗಿದ್ದರು. ಆತ್ಮಸ್ಥೆರ್ಯದಿಂದ ಸ್ವಾವಲಂಬಿ ಬದುಕು ನಡೆಸುತ್ತಿದ್ದಾರೆ. ಸಾಮಾನ್ಯ ಮಹಿಳೆ ಆಲಸ್ಯ ತೊರೆದು ಆಸಕ್ತಿ ವಹಿಸಿ ಕ್ರೀಯಾಶೀಲರಾದರೆ ಅದ್ಭುತ ಸಾಧನೆ ಮಾಡುವ ಅವಕಾಶವಿದೆ. ಎಂದು ರೋಶನಿ ನಿಲಯದ ಉಪನ್ಯಾಸಕಿ ಹಾಗು ಕಿರುತೆರೆಯ ಕಲಾವಿದೆ ಶೈಲಜಾ ಸಂತೋಷ ಮಹಿಳೆಯರನ್ನು ಉದ್ದೇಶಿಸಿ ಮಾತನಾಡಿದರು.
ಅವರು ವಾಮಂಜೂರಿನ ಧರ್ಮ ಜ್ಯೋತಿ ಸಮಾಜ ಸೇವಾ ಸಂಸ್ಥೆಯ ಮಹಿಳಾ ಸೌಹರ್ದ ಒಕ್ಕೂಟದ ಆಶ್ರಯದಲ್ಲಿ ನಡೆದ ಮಹಿಳಾ, ದಿನಾಚರಣೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಹೇಳಿದರು.
ಹೊಸದಾಗಿ ಆಯ್ಕೆಗೊಂಡ ಜಿಲ್ಲಾ ಪಂಚಾಯತ್ ಸದಸ್ಯೆ ಸೀಮಾ ಮೆಲ್ವಿನ್ ಡಿ’ಸೋಜಾ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಕಸ್ತೂರಿ ಸಾಲಿಯನ್ ಅಧ್ಯಕ್ಷೆ ನೀರು ಮಾರ್ಗ ಗ್ರಾಮಪಂಚಾಯತ್ ಇವರು ಮಹಿಳೆ ತನ್ನ ಹಕ್ಕು-ಮತ್ತು ಸಮಪಾಲು-ಸಮಬಾಳಿಗಾಗಿ ಪ್ರತಿನಿತ್ಯ ಹೋರಾಡ ಬೇಕಾಗಿದೆ. ಇದಕ್ಕಾಗಿ ಮಹಿಳೆ ಸದಾ ಜಾಗೃತಳಾಗಿರಬೇಕು ಮಾತ್ರವಲ್ಲ ಸ್ವಾವಲಂಬಿಯಾಗಬೇಕೆಂದು ತಿಳಿಸಿದರು.
ಸ್ಥಳೀಯ ತಿರುವೈಲು ವಾರ್ಡ್ನ ಕಾರ್ಪೊರೆಟರ್ ಹೇಮಲತ ಹಾಗೂ ಮೂಡುಶೆಡ್ಡೆ ತಾಲೂಕ್ ಪಂಚಾಯತ್ ಸದಸ್ಯೆ ಕವಿತ ದಿನೇಶ್ ಮತ್ತು ಭಗಿನಿ ಲೀನೆಟ್ ಉಪಸ್ಥಿತರಿದ್ದರು.
ಸಂಸ್ಥೆಯ ನಿರ್ಧೇಶಕಿ ಭಗಿನಿ ಡ್ಯಾಪ್ನಿ ಡಿ’ಸೋಜಾ ಅಧ್ಯಕ್ಷತೆ ವಹಿಸಿದ್ದರು. ಒಕ್ಕೂಟದ ಅಧ್ಯಕ್ಷೆ ಅಸುಂಪ್ತಾ ಕ್ರಾಸ್ತಾ ಸ್ವಾಗತಿಸಿದರು. ತಿಲಕ ವಂದಿಸಿದರು. ಅಮುದಾ ನಿರೂಪಿಸಿದರು.


