ಬಂಟ್ವಾಳ: ಮಂಗಳ ಗ್ರಹಕ್ಕೂ ಕಾಲಿಡುವ ಬಗ್ಗೆ ನಾವು ಯೋಚಿಸುತ್ತಿದ್ದೇವೆ, ಆದರೆ ನೆರೆಮನೆಯ ಅಂಗಳಕ್ಕೆ ಹೋಗಲು ನಮಗೆ ಸಾಧ್ಯವಾಗುತ್ತಿಲ್ಲ, ನಮ್ಮ ಮನಸ್ಸನ್ನು ಒತ್ತಡದತ್ತ ತಳ್ಳಿ ನಮ್ಮನ್ನು ನಾವೇ ಕಟ್ಟಿ ಹಾಕಿಕೊಂಡ ಸ್ಥಿತಿಯಲ್ಲಿ ನಾವಿದ್ದೇವೆ ಎಂದು ಹಿರಿಯ ಪತ್ರಕರ್ತ ಮನೋಹರ ಪ್ರಸಾದ್ ಆತಂಕ ವ್ಯಕ್ತಪಡಿಸಿದರು.
ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ, ಕ್ಷೇತ್ರ ಸಂಪನ್ಮೂಲ ಕೇಂದ್ರ ಬಂಟ್ವಾಳ ಇದರ ಆಶ್ರಯದಲ್ಲಿ ಗೂಡಿನ ಬಳಿಯ ಕ್ಷೇತ್ರ ಸಂಪನ್ಮೂಲ ಕೇಂದ್ರದಲ್ಲಿ ಶನಿವಾರ ಆಯೋಜಿಸಲಾದ ಹೊಸ ಬಣ್ಣ ಹೊಸ ನೋಟ ಕಾರ್ಯಕ್ರಮದಲ್ಲಿ ಅವರು ವಿಶೇಷ ಉಪನ್ಯಾಸ ನೀಡುತ್ತಿದ್ದರು.
ವರ್ಲಿ ಕಲಾಕೃತಿಗಳಿಂದ ಸರ್ಕಾರಿ ಕಛೇರಿಯನ್ನು ಸಿಂಗಾರ ಗೊಳಿಸಿರುವುದು ರಾಜ್ಯಕ್ಕೇ ಮಾದರಿಯಾದ ಸಂಗತಿ ಎಂದ ಅವರು, ಇಂತಹಾ ವಾತಾವರಣ ನಮ್ಮ ಸದಭಿರುಚಿಯ ಬದುಕಿಗೆ ಪ್ರೇರಣೆಯಾಗುತ್ತದೆ ಎಂದರು. ಮಾನವೀಯತೆ ಮರೆಯಾಗುತ್ತಿದೆ, ಸಾಮಾಜಿಕ ಜಾಲತಾಣಗಳು ಸಾಮಾಜಿಕ ಸ್ವಾಸ್ಥ್ಯ ಕೆಡಿಸುತ್ತಿದೆ ಇಂತಹಾ ಕಾಲಘಟ್ಟದಲ್ಲಿ ಸಮಾಜವನ್ನು ತಿದ್ದುವ ನಿಟ್ಟಿನಲ್ಲಿ ಶಿಕ್ಷಕರ ಪಾತ್ರ ಮಹತ್ತರವಾದುದು ಎಂದವರು ಅಭಿಪ್ರಾಯಿಸಿದರು.
ಬಂಟ್ವಾಳ ಪುರಸಭೆಯ ನೂತನ ಅಧ್ಯಕ್ಷ ರಾಮಕೃಷ್ಣ ಆಳ್ವ ಅಧ್ಯಕ್ಷತೆ ವಹಿಸಿದ್ದರು. ಸರ್ಕಾರಿ ಕಚೇರಿಗಳಿಗೆ ಹೊಸ ರೂಪ ನೀಡುವ ಮೂಲಕ ಬಂಟ್ವಾಳ ಕ್ಷೇತ್ರ ಸಂಪನ್ಮೂಲ ಕೇಂದ್ರ ರಾಜ್ಯಕ್ಕೆ ಮಾದರಿಯಾಗಿದೆ. ಅಧಿಕಾರಿಗಳಲ್ಲಿ ಸೃಜನಶೀಲ ಮನೋಭಾವ ಇದ್ದಾಗ ಇಂತಹ ಹೊಸತನಗಳು ರೂಪುಗೊಳ್ಳಲು ಸಾಧ್ಯವಿದೆ ಎಂದು ಅವರು ಹೇಳಿದರು.
ಜಿ.ಪಂ.ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ, ಎಂ.ಎಸ್.ಮಹಮ್ಮದ್, ಮಂಜುಳಾ ಮಾಧವ ಮಾವೆ, ಮಮತಾ ಡಿ.ಎಸ್.ಗಟ್ಟಿ, ಪುರಸಭೆಯ ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಸದಸ್ಯ ಮಹಮ್ಮದ್ ಇಕ್ಬಾಲ್ ಗೂಡಿನಬಳಿ, ತಾ.ಪಂ.ಸದಸ್ಯರಾ ಪದ್ಮಶ್ರೀ ಡಿ.ಶೆಟ್ಟಿ, ಸವಿತಾ, ಬೇಬಿ, ರೋಟರಿ ಕ್ಲಬ್ನ ಅಧ್ಯಕ್ಷ ಕರುಣಾಕರ ಶೆಟ್ಟಿ, ಡಾ. ರಮೇಶಾನಂದ ಸೋಮಯಾಜಿ, ಚಿತ್ರಕಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹಾಬಲ ಕುಳ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಉಮನಾಥ ಕೋಟ್ಯಾನ್, ರಾಷ್ಟ್ರಪ್ರಶಸ್ತಿ ಪುರಸ್ಕøತ ಶಿಕ್ಷಕ ರಮೇಶ್ ನಾಯಕ್ ರಾಯಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಶಿವಪ್ರಸಾದ್ ಶೆಟ್ಟಿ ವೇದಿಕೆಯಲ್ಲಿದ್ದರು.
ಕ್ಷೇತ್ರ ಶಿಕ್ಷಣಾಧಿಕಾರಿ ಶೇಷಶಯನ ಕಾರಿಂಜ ಸ್ವಾಗತಿಸಿದರು, ಕ್ಷೇತ್ರ ಸಂಪನ್ಮೂಲ ಕೇಂದ್ರದ ಸಮನ್ವಯಾಧಿಕಾರಿ ರಾಜೇಶ್ ವಂದಿಸಿದರು. ಶಿಕ್ಷಕ ಬಿ.ರಾಮಚಂದ್ರ ರಾವ್ ಕಾರ್ಯಕ್ರಮ ನಿರೂಪಿಸಿದರು.
ಆರಂಭದಲ್ಲಿ ನಡೆದ ಚಿಂತನೆಯ ಹೊತ್ತು ಕಾರ್ಯಕ್ರಮದಲ್ಲಿ ರಾಷ್ಟ್ರೀಯ ತರಬೇತಿದಾರ ರಾಜೇಂದ್ರ ಭಟ್ ಮಾತನಾಡಿ, ಸರ್ಕಾರಿ ಶಾಲೆಗಳಲ್ಲಿ ತರಗತಿಗೊಬ್ಬ ಶಿಕ್ಷಕರ ನೇಮಕಾತಿಯಾಗಲಿ, ಆಂಗ್ಲಮಾಧ್ಯಮ ಶಾಲೆಗಳಲ್ಲೂ ಕನ್ನಡವೇ ಪ್ರಥಮ ಭಾಷೆಯಾಗಲಿ, ಶಿಕ್ಷಕರ ಪಠ್ಯೇತರ ಕೆಲಸಗಳ ಹೊರೆ ಕಡಿಮೆ ಮಾಡಲಿ, ಆಗ ಕನ್ನಡ ನಾಡಿನ ಶಾಲೆಗಳಲ್ಲಿ ಮಹತ್ವದ ಬದಲಾವಣೆ ಸಾಧ್ಯ ಎಂದರು. ಶಿಕ್ಷಕರು ತಮ್ಮ ಮನೋಭಾವವನ್ನು ವಿದ್ಯಾರ್ಥಿಗಳನ್ನು ನೋಡುವ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಬೇಕು ಎಂದ ಅವರು ಶಿಕ್ಷಕರ ನಡುವೆ ಅಂತಸ್ತು ಭೇದಭಾವ ಹೋಗದೆ ಸಮಾಜ ಉದ್ದಾರವಾಗುವುದಿಲ್ಲ ಎಂದರು.
ಶಿಕ್ಷಕರು ಮಕ್ಕಳನ್ನು ಕೇವಲವಾಗಿ ಕಾಣದೆ, ಅವರೊಳಗಿನ ಪ್ರತಿಭೆ ಅನಾವರಣ ಗೊಳ್ಳಲು ವೇದಿಕೆ ರೂಪಿಸಬೇಕು ಎಂದು ಹಲವು ಉದಾಹರಣೆಗಳ ಮೂಲಕ ವಿವರಿಸಿದ ಅವರು, ಜ್ಞಾನದ ಬಟ್ಟಲು ಆಗಿದ್ದ ಶಿಕ್ಷಣ ವ್ಯವಸ್ಥೆ ಇಂದು ಅನ್ನದ ಬಟ್ಟಲಿಗೆ ಮೀಸಲಾಗಿರುವುದು ವಿಷಾಧನೀಯ ಎಂದರು. ಕ್ಷೇತ್ರ ಸಂಪನ್ಮೂಲ ಕೇಂದ್ರ ವರ್ಲಿಯ ಮೂಲಕ ಶೃಂಗಾರಗೊಂಡಿರುವುದು ಉಳಿದ ಶಾಲೆಗಳಿಗೆ ಮಾದರಿ, ಎಲ್ಲಾ ಶಾಲೆಗಳು ಮಕ್ಕಳ ಆಕರ್ಷಣೆಯ ಕೇಂದ್ರವಾಗಲಿ ಎಂದರು.
ಈ ಸಂದರ್ಭ ಪುರಸಭೆಯ ನಿರ್ಗಮನ ಅಧ್ಯಕ್ಷೆ ವಸಂತಿ ಚಂದಪ್ಪ ಹಾಗೂ ಮತ್ತಿತರರು ವೇದಿಕೆಯಲ್ಲಿದ್ದರು.
