ಸಂಗೀತಪ್ರೇಮಿಗಳನ್ನು ಮಂತ್ರ ಮುಗ್ಧರನ್ನಾಗಿಸಿದ ತಾಳಲಯಗಳ ಸಮ್ಮಿಲನ
ಮುಂಬಯಿ: ಬೃಹನ್ಮುಂಬಯಿಯಲ್ಲಿ ಸುಮಾರು ಒಂಭತ್ತು ದಶಕಗಳ ಅವಿರತ ಸೇವಾ ಇತಿಹಾಸವುಳ್ಳ, ಗೋಕುಲ ಪ್ರಸಿದಿಯ ಬಿಎಸ್‍ಕೆಬಿ ಅಸೋಸಿಯೇಶನ್ ಸಾಯನ್ ಸಂಸ್ಥೆಯು ತನ್ನ ಬೃಹತ್ತರ ಯೋಜನೆ `ಗೋಕುಲ ವಿಶನ್ 2020′ ಸಹಾಯಾರ್ಥ ಕಳೆದ ಭಾನುವಾರ ಸಂಜೆ ಸಯಾನ್ ಕಿಂಗ್‍ಸರ್ಕಲ್ ಅಲ್ಲಿನ ಶ್ರೀ ಷಣ್ಮುಖಾನಂದ ಚಂದ್ರಶೇಖರೇಂದ್ರ ಸರಸ್ವತಿ ಸಭಾಗೃಹದಲ್ಲಿ ಸಂಗೀತ ಲೋಕದ ಜಗತ್ಪಸಿದ್ಧ ದಿಗ್ಗಜರು ಹಾಗೂ ವಿಶ್ವಖ್ಯಾತರೂ ಆದ, ಬಹುಮುಖ ಪ್ರತಿಭೆ ಕಲೈಮಾಮಣಿ ಶಿವಮಣಿ ಮತ್ತು ತಂಡದ `ತಾಳಲಯಗಳ ಸಮ್ಮಿಲನ’ ತಾಳವಾದ್ಯ ಕಾರ್ಯಕ್ರಮ ಪ್ರಸ್ತುತ ಪಡಿಸಿತು. ಪಂಡಿತ್ ವಿಶ್ವ ಮೋಹನ್ ಭಟ್, ಗುರು ಕರೈಕುಡಿ ಮಣಿ, ಲೂಯಿಸ್ ಬ್ಯಾಂಕ್ಸ್, ಹಾಗೂ ವಿದ್ವಾನ್ ಅಮೃತ್ ಕಾರ್ಯಕ್ರಮಕ್ಕೆ ಸಹಯೋಗವನ್ನೀಡಿ ಪ್ರೇಕ್ಷಕಸಂಗೀತ ಪ್ರೇಮಿಗಳನ್ನು ಮಂತ್ರ ಮುಗ್ಧರನ್ನಾಗಿಸಿತು. ಕಾರ್ಯಕ್ರಮದ ಆದಿಯಲ್ಲಿ, ಚರಿಷ್ಮಾ ಬಿಲ್ಡರ್‍ನ ಆಡಳಿತ ನಿರ್ದೇಶಕ ಸುಧೀರ್ ವಿ.ಶೆಟ್ಟಿ ಸಿಂಗಾರದ ಹೂವನ್ನು ಅರಳಿಸುವುದರ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಶುಭ ಚಾಲನೆಗೈದರು. ಈ ಸಂದರ್ಭದಲ್ಲಿ ಅತಿಥಿ ಅಭ್ಯಾಗತರುಗಳಾಗಿ ಉದ್ಯಮಿಗಳಾದ ಮನೀಶ್ ಶ್ಹಾ, ಎಂ.ಹೆಚ್ ಮುರಳೀಧರ್, ಕಳತ್ತೂರು ವಿಶ್ವನಾಥ್ ಶೆಟ್ಟಿ, ಸಮೀರ್ ಸಾಂಘ್ವಿ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದರ ಮಾಜಿ ಆಡಳಿತ ನಿರ್ದೇಶಕ ಪ್ರದೀಪ್ ಕುಮಾರ್ ಐಎಫ್‍ಡಿಸಿ ಕಾರ್ಯ ನಿರ್ವಹಣಾಧಿಕಾರಿ
ಸದಾಶಿವ ರಾವ್ ಉಪಸ್ಥಿತರಿದ್ದು, ಟೈಟನ್ ಇಂಡಸ್ಟ್ರೀಸ್‍ನ ಆಡಳಿತ ನಿರ್ದೇಶಕ ಭಾಸ್ಕರ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದು, ರಿಲಯನ್ಸ್ ಇಂಡಸ್ಟ್ರೀಸ್‍ನ ಮಾಜಿ ಆಡಳಿತ ನಿರ್ದೇಶಕ ಬಿ. ನಾರಾಯಣ್ ಅವರು ಅಸೋಸಿಯೇಶನ್ ಪ್ರಕಾಶಿತ ಸ್ಮರಣ ಸಂಚಿಕೆಯನ್ನು, ಬಿಡುಗಡೆ ಗೊಳಿಸಿದರು. ಬಿಎಸ್‍ಕೆಬಿ ಅಸೋಸಿಯೇಶನ್ ಅಧ್ಯಕ್ಷಡಾ| ಸುರೇಶ್ ಎಸ್.ರಾವ್ ಕಟೀಲು, ಉಪಾಧ್ಯಕ್ಷರಾದ ವಾಮನ್ ಹೊಳ್ಳ, ಉಮೇಶ್ ರಾವ್ ಅವರು ಅತಿಥಿಗಳನ್ನು ಶಾಲು ಹೊದಿಸಿ ಹೂಗುಚ್ಚವನ್ನಿತ್ತು ಗೌರವಿಸಿದರು.
ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಸ್ವಾಗತವನ್ನು ಕೋರಿದರು.ಜಗದೀಶ್ ಆಚಾರ್ಯ, ಚಿತ್ರಾ ಮೇಲ್ಮನೆ, ಪ್ರಶಾಂತ್ ಹೆರ್ಲೆ, ಹರಿದಾಸ್ ಭಟ್, ವಿನೋದಿನಿ ರಾವ್, ಕುಸುಮ್ ಶ್ರೀನಿವಾಸ್ ಕಾರ್ಯಕ್ರಮದ ನಿರೂಪಣೆಗೈದರು. ಚಂದ್ರಶೇಖರ್ ಭಟ್ ಧನ್ಯವಾದ ಸಮರ್ಪಿಸಿದರು. ಡಾ| ಸುರೇಶ್ ರಾವ್ ಅವರು ಕಾರ್ಯಕ್ರಮವನ್ನೀಡಿದ ಸರ್ವ ಕಲಾವಿದರಿಗೆ ಶಾಲು ಹೊದಿಸಿ
ಹೂಗುಚ್ಚವನ್ನಿತ್ತು ಗೌರವಿಸಿದರು. ವಿಶ್ವಮೋಹನ್ ಭಟ್ ಅವರು ತಮ್ಮ ಮೋಹನ ವೀಣೆಯಲ್ಲಿ ರಾಷ್ಟ್ರ ಗೀತೆಯನ್ನು ಬಾರಿಸುವುದರೊಂದಿಗೆ ಕಾರ್ಯಕ್ರಮ ಸಂಪನ್ನಗೊಂಡಿತು. ಕೈಗೆ ಸಿಕ್ಕಿದ ಪ್ರತಿಯೊಂದು ಉಪಕರಣಗಳಿಂದ ಸಂಗೀತದ ನಾದಲಯ ಹೊರಹೊಮ್ಮಿಸುವ ಪ್ರತಿಭಾ ವಂತ ಕಲಾವಿದರಾದ ಕಲೈಮಾಮಣಿ ಶಿವಮಣಿಯವರ ಕೈ ಬೆರಳುಗಳು ತನ್ನ ಮುಂದಿಟ್ಟು ಕೊಂಡಂತಹ ವಿಧ ವಿಧದ ಸಂಗೀತ ಉಪಕರಣಗಳ ಮೇಲೆ ಅದ್ಭುತವಾಗಿ ನರ್ತಿಸಿದಾಗ ಹಾಗೂ ನೀರಿನ ಪ್ಲಾಸ್ಟಿಕ್ ಡ್ರಮ್ (ಬಿಸ್ಲೇರಿ ಡಬ್ಬ) ಹಿಡಿದುಕೊಂಡು ಲಯ ಬದ್ಧವಾಗಿ ನಾದ ಹೊರಡಿಸುತ್ತಾ, ಸಭಾಗೃಹದಲ್ಲಿ ಉಪಸ್ಥಿತರಿದ್ದ ಶ್ರೋತೃಗಳಿಂದಲೂ ನಾದ ಹೊರಡಿಸಿದಾಗ ತುಂಬಿದ ಸಭಾಗೃಹದ ಪ್ರೇಕ್ಷಕ ವರ್ಗ ಅನಂದಾತಿರೇಕದಿಂದ ನಲಿಯಿತು. ತನ್ನದೇ ಹೆಸರಿನ ವೀಣೆಯ ಸೃಷ್ಟಿಕರ್ತರೆನಿಸಿದ ಪಂಡಿತ್ ವಿಶ್ವ ಮೋಹನ ಭಟ್ ರವರ ಮೋಹನ ವೀಣಾವಾದನ, ಫ್ಯೂಶನ್ ಗುರು ಲೂಯಿಸ್
ಬ್ಯಾಂಕ್ಸ್ ಅವರ ಕೀ ಬೋರ್ಡ್, ವಿದ್ವಾನ್ ಕರೈಕುಡಿ ಮಣಿಯವರ ಮೃದಂಗ ವಾದನ, ಹಾಗೂ ಬೆಂಗಳೂರು ಅಮೃತ್ ರವರ ಖಂಜಿರಗಳಿಂದ ಹೊರ ಹೊಮ್ಮಿದ ಭಾರತೀಯ ಹಾಗೂ ಪಾಶ್ಚಾತ್ಯ ಸಂಗಿತ ಸಮ್ಮಿಲನದ ನಾದರಸಧಾರೆ ಸಭಾಗೃಹದಲ್ಲಿ ತುಂಬಿ ತುಳುಕಿ ಸಂಗೀತ ಪ್ರೇಮಿಗಳ ಪ್ರಚಂಡ ಕರತಾಡನದ ಮೆಚ್ಚುಗೆಯನ್ನು ಪಡೆಯಿತು.




