ವಿಟ್ಲ: ಉತ್ತಮ ವಿಚಾರಗಳತ್ತ ಪ್ರಭಾವಿತರಾಗುವ ಜತೆಗೆ ಅದನ್ನು ಜೀವನದಲ್ಲಿ ಅನುಸರಿಸುವ ಕಾರ್ಯ ನಡೆಯಬೇಕು. ದೇವರನ್ನು ಭಕ್ತಿ ಶ್ರದ್ಧೆಯಿಂದ ಪೂಜಿಸಿದವರಿಗೆ ಬದುಕಿನುದ್ದಕ್ಕೂ ಯಶಸ್ಸು ಲಭಿಸುತ್ತದೆ ಎಂದು ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ ಹೇಳಿದರು.
ಅವರು ಗುರುವಾರ ಮಾಣಿಲ ಶ್ರೀಧಾಮ ಶ್ರೀ ಮಹಾಲಕ್ಷ್ಮೀ ಕ್ಷೇತ್ರದಲ್ಲಿ ಶ್ರೀ ಮಹಾಲಕ್ಷ್ಮೀ, ವಿಠೋಭ ರುಕ್ಮಯಿ, ನಾಗದೇವರ ಪ್ರತಿಷ್ಠಾ ವರ್ಧಂತ್ಯುತ್ಸವದ ಸಂದರ್ಭ ನಡೆದ ಧರ್ಮ ಸಭೆಯಲ್ಲಿ ಆಶೀರ್ವಚನ ನೀಡಿದರು. ಗುರು ಶಿಷ್ಯರ ಸಂಬಂಧ ಅವಿನಾಭಾವಾಗಿದ್ದಾಗ ಸಮಾಜದಲ್ಲಿ ಉತ್ತಮ ಕಾರ್ಯಗಳು ನಡೆಯಲು ಸಾಧ್ಯವಿದೆ. ಪ್ರತಿಯೊಬ್ಬರು ಸಾತ್ವಿಕ ಆಹಾರ ಸೇವನೆ ಮಾಡಿ ಶ್ರೇಷ್ಠರಾಗಬೇಕೆಂದು ತಿಳಿಸಿದರು.
ಶ್ರೀ ಕ್ಷೇತ್ರ ಕಟೀಲು ವೇದಮೂರ್ತಿ ಶ್ರೀ ಕಮಲಾದೇವಿಪ್ರಸಾದ ಅಸ್ರಣ್ಣ ಇವರ ವೈದಿಕತ್ವದಲ್ಲಿ ಪ್ರತಿಷ್ಠಾ ಮಹೋತ್ಸವ ಜರುಗಿತು. ಟ್ರಸ್ಟಿ ಮಂಜು ವಿಟ್ಲ ಅವರ ಸಂಪಾದಕತ್ವದ ಕ್ಷೇತ್ರದ ಮಾಸಪತ್ರಿಕೆ ಪುನರುತ್ಥಾನದ ತಿಂಗಳ ಸಂಚಿಕೆಯನ್ನು ಬಿಡುಗಡೆ ಮಾಡಲಾಯಿತು.
ಧರ್ಮ ಸಭೆಯನ್ನು ಉದ್ಘಾಟಿಸಿದ ಶ್ರೀ ಕ್ಷೇತ್ರ ಕಟೀಲು ವೇದಮೂರ್ತಿ ಶ್ರೀ ಹರಿನಾರಾಯಣ ಅಸ್ರಣ್ಣ ಮಾತನಾಡಿ ಮಾಣಿಲ ಶ್ರೀಗಳು ಕುಗ್ರಾಮದಲ್ಲಿ ಧರ್ಮ ಕ್ಷೇತ್ರವನ್ನು ನಿರ್ಮಿಸಿ, ದೇವಿಯನ್ನು ಪ್ರತಿಷ್ಠಾಪಿಸಿ ಇಂದು ಸುಗ್ರಾಮವಾಗಿಸಿದ್ದಾರೆ. ಶ್ರೀಧಾಮಕ್ಕೆ ಇಂದುದೇಶ ವಿದೇಶದಭಕ್ತರನ್ನು ಆಕರ್ಷಿಸುವಂತೆ ಮಾಡಿರುವುದು ಶ್ಲಾಘನೀಯ ಎಂದರು.
ಕೊಂಡೆವೂರು ನಿತ್ಯಾನಂದ ಯೋಗಾಶ್ರಮದ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ದಿವ್ಯ ಉಪಸ್ಥಿತಿ ವಹಿಸಿದ್ದರು.
ಉದ್ಯಮಿ ರಾಜೇಶ್ ಪಾಟೀಲ್ ಮುಂಬಯಿ, ಉದ್ಯಮಿ ಭಾಸ್ಕರ ಶೆಟ್ಟಿ ಪುಣೆ, ಮುಂಬಯಿ ಮಂಜುನಾಥ ಮೋಟಾರ್ಸ್ ಪಾಲುದಾರ ರಾಜೇಂದ್ರ ದೇವಾಡಿಗ, ಉದ್ಯಮಿ ಬಿ.ಎಂ.ಪುಟ್ಟಮದಾಯ್ಯ ಬೆಂಗಳೂರು, ಪುರುಷೋತ್ತಮ ಚೇಂಡ್ಲ ಬೆಂಗಳೂರು, ಮಾಣಿಲ ಯುವ ವೇದಿಕೆ ಅಧ್ಯಕ್ಷ ಯೋಗೀಶ್, ಶ್ರೀ ಮಹಾಲಕ್ಷ್ಮೀ ಮಹಿಳಾ ಸೇವಾ ಸಮಿತಿ ಅಧ್ಯಕ್ಷೆ ವನಿತಾ ವಿ.ಶೆಟ್ಟಿ ಸುಣ್ಣಂಬಳ, ಟ್ರಸ್ಟಿಗಳಾದ ಚಂದ್ರಶೇಖರ ತುಂಬೆ, ಅಶೋಕ್ ಕುಮಾರ್ ರೈ ಅರ್ಪಿಣಿಗುತ್ತು ಮತ್ತಿತರರು ಉಪಸ್ಥಿತರಿದ್ದರು.
ಟ್ರಸ್ಟಿ ಉಮೇಶ್ ಪಿ.ಕೆ.ನಾಗಲಚ್ಚಿಲು ಸ್ವಾಗತಿಸಿದರು. ಟ್ರಸ್ಟಿ ತಾರಾನಾಥ ಕೊಟ್ಟಾರಿ ಪ್ರಸ್ತಾವನೆಗೈದರು. ಶಿಕ್ಷಕಿ ನಳಿನಿ ಶ್ರೀಧಾಮ ವಂದಿಸಿದರು.ಟ್ರಸ್ಟಿ ದಾಮೋದರ ಬಿ.ಎಂ.ಮಾರ್ನಬÉೈಲು ಕಾರ್ಯಕ್ರಮ ನಿರೂಪಿಸಿದರು.
ಧಾರ್ಮಿಕ ಕಾರ್ಯಕ್ರಮ:
ಪ್ರಾತಃಕಾಲ ಗಣಪತಿ ಹೋಮ, ಶ್ರೀ ಮಹಾಲಕ್ಷ್ಮೀ ದೇವರಿಗೆ 25 ಕಲಶಾಧಿವಾಸ ಹೋಮ, ಶ್ರೀ ವಿಠೋಭ ರುಕ್ಮಯಿ ಮತ್ತು ಶ್ರೀ ನಾಗದೇವರಿಗೆ ನವಕಲಶಾಧಿವಾಸ, ಅಧಿವಾಸ ಹೋಮ, ಪಂಚಾಮೃತಾಭಿಷೇಕ, ಶ್ರೀ ಮಹಾಲಕ್ಷ್ಮೀ ಸನ್ನಿಧಾನದಲ್ಲಿ ದೀಪ ಪ್ರಜ್ವಲನೆ, ಪುರಸ್ಸರ, ತ್ರಿಕಾಲ ಪೂಜಾರಂಭ, ಚಂಡಿಕಾಯಾಗ, ವಿಷ್ಣುಸಹಸ್ರನಾಮ ಹೋಮ, ಪೂರ್ಣಾಹುತಿ, ಮಧ್ಯಾಹ್ನ ಸಾಮೂಹಿಕ ಗೋಮಾತಾ ಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ ಅಷ್ಟಾವಧಾನ ಸೇವೆ, ನಾಗತನು ಪ್ರಸನ್ನ ಪೂಜೆ, ತನು ತರ್ಪಣ, ಮಹಾಪೂಜೆ, ಪ್ರಸಾದ ವಿತರಣೆ ನಡೆಯಿತು.


