ಬಂಟ್ವಾಳ:ತಾಲ್ಲೂಕಿನಲ್ಲಿ ಒಟ್ಟು 34 ತಾಲ್ಲೂಕು ಮತ್ತು 9ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ ಶನಿವಾರ ನಡೆದ ಚುನಾವಣೆಗೆ ಸಂಬಂಧಿಸಿದಂತೆ ಇದೇ 23ರಂದು ಬೆಳಿಗ್ಗೆ ಇಲ್ಲಿನ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮಾಧ್ಯಮ ಶಾಲೆ ಆವರಣದಲ್ಲಿ ಮತ ಎಣಿಕೆ ಪ್ರಕ್ರಿಯೆ ನಡೆಯಲಿದ್ದು, ಸುತ್ತಲೂ ಬಿಗಿ ಬಂದೋಬಸ್ತು ಏರ್ಪಡಿಸಲಾಗಿದೆ. ಒಂದು ಜಿಲ್ಲಾ ಪಂಚಾಯಿತಿ ಕ್ಷೇತ್ರಕ್ಕೆ ತಲಾ ಮೂರು ಟೇಬಲ್ನಂತೆ ಒಟ್ಟು 27 ಮತ್ತು ಒಂದು ತಾಲ್ಲೂಕು ಪಂಚಾಯಿತಿ ಕ್ಷೇತ್ರಕ್ಕೆ ತಲಾ ಒಂದು ಟೇಬಲ್ನಂತೆ ಒಟ್ಟು 34 ಟೇಬಲ್ ಸಿದ್ಧಪಡಿಸಲಾಗಿದೆ. ಈ ಬಾರಿ ಮತಯಂತ್ರದಲ್ಲಿ ಚುನಾವಣೆ ನಡೆದಿರುವ ಪರಿಣಾಮ ಮತ ಎಣಿಕೆ ತ್ವರಿತವಾಗಿ ನಡೆದು ಮಧ್ಯಾಹ್ನದೊಳಗೆ ಪೂರ್ಣ ಫಲಿತಾಂಶ ಪ್ರಕಟಗೊಳ್ಳಲಿದೆ. ಇದಕ್ಕಾಗಿ ಈಗಾಗಲೇ ತರಬೇತಿ ನೀಡಿ ಸಿಬ್ಬಂದಿಗಳನ್ನು ನಿಯೋಜಿಸಲಾಗಿದ್ದು, ಸುತ್ತಲೂ ಪೊಲೀಸ್ ಭದ್ರತೆ ಅಳವಡಿಸಲಾಗಿದೆ ಎಂದು ತಹಶೀಲ್ದಾರ್ ಪುಂದರ ಹೆಗ್ಡೆ ಸುದ್ದಿ9 ಗೆ ತಿಳಿಸಿದ್ದಾರೆ.

ತಾಲ್ಲೂಕಿನ ಒಟ್ಟು 9 ಜಿಲ್ಲಾ ಪಂಚಾಯಿತಿ ಸ್ಥಾನಗಳಿಗೆ 25 ಮಂದಿ ಮತ್ತು ಒಟ್ಟು 34 ತಾಲ್ಲೂಕು ಪಂಚಾಯಿತಿ ಸ್ಥಾನಗಳಿಗೆ 92 ಮಂದಿ ಅಭ್ಯರ್ಥಿಗಳು ಚುನಾವಣೆ ಎದುರಿಸಿದ್ದು, ಹೀಗೆ ಒಟ್ಟು 117 ಮಂದಿ ಅಭ್ಯರ್ಥಿಗಳ ಭವಿಷ್ಯ ಇಂದು ನಿರ್ಧಾರಗೊಳ್ಳಲಿದೆ. ತಾಲ್ಲೂಕಿನಲ್ಲಿ ಶೇ. 71.69 ಮತದಾನವಾಗಿದ್ದು, ಸಂಗಬೆಟ್ಟು ಕ್ಷೇತ್ರದಲ್ಲಿ ಗರಿಷ್ಟ ಮತ್ತು ಪುಣಚ ಕ್ಷೇತ್ರದಲ್ಲಿ ಕನಿಷ್ಟ ಶೇಕಡಾವಾರು ಪ್ರಮಾಣದಲ್ಲಿ ಮತದಾನವಾಗಿದೆ.
