ಬಂಟ್ವಾಳ:ಕಳೆದ ಐದು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಿ. ಪಂ. ಮತ್ತು ತಾ. ಪಂ. ಚುನಾವಣೆಗೆ ಸಂಬಂಧಿಸಿ
ತಾತ್ಕಾಲಿಕ ಮೀಸಲಾತಿ ಪ್ರಕಟವಾಗಿ ಆಕ್ಷೇಪಣೆಗಳನ್ನು ಸ್ವೀಕರಿಸಿ ಒಂದು ತಿಂಗಳಾದರೂ ಚುನಾವಣಾ ಆಯೋಗ ಅಂತಿಮ ಮೀಸಲಾತಿ ಪ್ರಕಟಿಸಲು ವಿಫಲವಾಗಿರುವ ಹಿನ್ನಲೆಯಲ್ಲಿ ಬಾರೀ ಪ್ರಮಾಣದಲ್ಲಿ ಮೀಸಲಾತಿ ಬದಲಾಗಬಹುದೆಂಬ ಆತಂಕ ಚುನಾವಣಾ ಸ್ಪರ್ಧೆಯ ಸಂಭಾವನೀಯ ಅಭ್ಯರ್ಥಿಗಳಲ್ಲಿ ಮನೆ ಮಾಡಿದೆ.


ಈ ನಿಟ್ಟಿನಲ್ಲಿ  ರಾಜ್ಯ ಚುನಾವಣಾ ಆಯೋಗವು ತಕ್ಷಣ ಅಂತಿಮ ಮೀಸಲಾತಿ ಪ್ರಕಟಿಸಿ, ಚುನಾವಣೆ ದಿನಾಂಕವನ್ನು ಶೀಘ್ರದಲ್ಲಿಯೇ ಘೋಷಿಸುವುದರೊಂದಿಗೆ ಸ್ಥಳೀಯ ಸಂಸ್ಥೆಗಳಿಗೆ ಮರು ಜೀವ ನೀಡಬೇಕು ಎಂದು ಬಂಟ್ವಾಳ ತಾ.ಪಂ.ಮಾಜಿ ಸದಸ್ಯ ಪ್ರಭಾಕರ ಪ್ರಭು ಅವರು ರಾಜ್ಯ ಚುನಾವಣಾ ಆಯೋಗದ ಆಯಕ್ತರಿಗೆ ಮನವಿ ಮಾಡಿದ್ದಾರೆ.


ಹೈಕೋರ್ಟ್ ಮಧ್ಯ ಪ್ರವೇಶದಿಂದ ಸರಕಾರವು ಶೀಘ್ರದಲ್ಲಿ ಚುನಾವಣೆ ನಡೆಸಲು ಒಪ್ಪಿಗೆ ನೀಡುವುದರೊಂದಿಗೆ ಚುನಾವಣೆಗೆ ಬೇಕಾದ ಆರ್ಥಿಕ ಸಂಪನ್ಮೂಲವನ್ನೂ ನೀಡಿದ್ದು, ಚುನಾವಣಾ ಆಯೋಗ ಚುನಾವಣೆ ನಡೆಸಲು ಎಲ್ಲಾ ಸಿದ್ದತೆ ನಡೆಸಿ ಕ್ಷೇತ್ರವಾರು ತಾತ್ಕಾಲಿಕ ಮೀಸಲಾತಿ ಪ್ರಕಟಿಸಿ ಆಕ್ಷೇಪಣೆಗೆ ಒಂದು ತಿಂಗಳು ಅವಕಾಶ ಕಲ್ಪಿಸಿತ್ತು.ಇದೀಗ ತಿಂಗಳಾದರೂ ಮೀಸಲಾತಿ ಪಟ್ಟಿಯನ್ನು ಅಧಿಕೃತಗೊಳಿಸದಿರುವುದರಿಂದ ಸಂಭವನೀಯ ಆಕಾಂಕ್ಷಿಗಳಲ್ಲಿ ಅನುಮಾನಕ್ಕೆಡೆ ಮಾಡಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಬಾರಿ ಕ್ಷೇತ್ರ ಪುನರ್ ವಿಂಗಡಣೆ ಮಾಡಿರುವುದರಿಂದ ಈಗಾಗಲೇ ಪ್ರಕಟಿಸಲಾದ ಮೀಸಲಾತಿಯಲ್ಲು ಬದಲಾವಣೆಯ ಅಗತ್ಯವಿಲ್ಲ ಎಂದು ಕಾನೂನು ತಜ್ಞರ ಅಭಿಪ್ರಾಯಪಟ್ಟಿದ್ದು,ಇದರ ಬೆನ್ನಲ್ಲೆ ಆಯೋಗ
ಚುನಾವಣಾಧಿಕಾರಿಗಳು, ಸಹಾಯಕ ಚುನಾವಣಾಧಿಕಾರಿಗಳ ನೇಮಕಕ್ಕೆ ಆಯಾ ಜಿಲ್ಲಾಧಿಕಾರಿಗಳಿಂದ ಪ್ರಸ್ತಾವನೆ ತರಿಸಿಕೊಂಡಿರುವುದು ಕ್ರಮ ಶ್ಲಾಘನೀಯವಾಗಿದೆ ಎಂದು ಪ್ರಭು ತಿಳಿಸಿದ್ದಾರೆ.

ಈ ನಿಟ್ಟಿನಲ್ಲಿ ತಾತ್ಕಾಲಿಕವಾಗಿ ಪ್ರಕಟಿಸಿದ ಮೀಸಲಾತಿಯಲ್ಲಿ ಗಣನೀಯವಾಗಿ ವ್ಯತ್ಯಾಸಗಳು ಕಂಡು ಬಂದರೆ ಸಾರ್ವಜನಿಕ ವಲಯದಲ್ಲಿ ಆಯೋಗದ ಘನತೆಗೂ ಕುಂದು ಬರಬಹುದು ಎಂಬ ಅಭಿಪ್ರಾಯ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದ್ದು,
ಈ ಹಿನ್ನೆಲೆಯಲ್ಲಿ ರಾಜ್ಯ ಚುನಾವಣಾ ಆಯೋಗವು ಅಂತಿಮ ಮೀಸಲಾತಿ ಪ್ರಕಟಿಸಿ, ಚುನಾವಣೆ ದಿನಾಂಕವನ್ನು ಶೀಘ್ರದಲ್ಲಿ ಘೋಷಿಸುವಂತೆ ಮನವಿ ಮೂಲಕ ಆಯುಕ್ತರನ್ನು ಪ್ರಭು ಒತ್ತಾಯಿಸಿದ್ದಾರೆ

By Suddi9