ಬಂಟ್ವಾಳ: ಕರಾವಳಿಯ ನೆಲ, ಸಂಸ್ಕೃತಿ, ಭಾಷೆ ಹಾಗೂ ಬದುಕಿನ ಸೊಗಡನ್ನು ಕಥಾವಸ್ತುವಾಗಿಸಿಕೊಂಡು ಪ್ರೇಕ್ಷಕರ ಮನಗೆದ್ದ ‘ ಸೂ ಫ್ರಂ ಸೋ’ ಚಲನಚಿತ್ರದ ಬಳಿಕ, ಇದೀಗ ಮದುವೆಯ ಸುತ್ತ ಹೆಣೆಯಲಾದ ವಿಭಿನ್ನ ಕಥಾಹಂದರದೊಂದಿಗೆ ಮತ್ತೊಂದು ಹೊಸ ಕನ್ನಡ ಚಲನಚಿತ್ರ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.

ಕರಾವಳಿಯ ಪರಿಸರ, ಜನಜೀವನ ಮತ್ತು ಇಲ್ಲಿನ ವಿಶಿಷ್ಟ ಸಂಸ್ಕೃತಿಯ ಹಿನ್ನೆಲೆಯೊಂದಿಗೆ ಮೂಡಿಬರಲಿರುವ ಈ ಚಿತ್ರಕ್ಕೆ ಸುಂದರ ರೈ ಮಂದಾರ ನಿರ್ದೇಶನ ಮಾಡಲಿದ್ದಾರೆ. ಎಂಪೀರಿಯಾ ಪ್ರೊಡಕ್ಷನ್ ಕಂಪನಿಯ ನಿರ್ಮಾಣದಲ್ಲಿ ಚಿತ್ರ ರೂಪುಗೊಳ್ಳಲಿದ್ದು, ಚಿತ್ರ ಸೆಟ್ಟೇರಲು ಪೂರ್ವಸಿದ್ಧತೆಗಳು ನಡೆಯುತ್ತಿವೆ.
ಚಿತ್ರಕ್ಕೆ ಸೂಕ್ತ ಕಲಾವಿದರನ್ನು ಆಯ್ಕೆ ಮಾಡುವ ಉದ್ದೇಶದಿಂದ ಗುರುವಾರ ಬಿ.ಸಿ.ರೋಡ್ನ ಸ್ಪರ್ಶಾ ಕಲಾ ಮಂದಿರದಲ್ಲಿ ಆಡಿಷನ್ ಕಾರ್ಯಕ್ರಮ ನಡೆಯಿತು. ಹೊಸ ಪ್ರತಿಭೆಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಡೆದ ಈ ಆಯ್ಕೆ ಪ್ರಕ್ರಿಯೆಯಲ್ಲಿ ವಿವಿಧ ಕ್ಷೇತ್ರಗಳ ಆಸಕ್ತರು ಭಾಗವಹಿಸಿದ್ದರು.
ಸಾಮಾನ್ಯವಾಗಿ ಪ್ರೇಕ್ಷಕರಿಗೆ ಪರಿಚಿತವಾಗಿರುವ ಕಥಾ ನಿರೂಪಣೆಯಿಂದ ಭಿನ್ನವಾಗಿ, ಮದುವೆಯ ಸುತ್ತ ನಡೆಯುವ ಘಟನೆಗಳು, ಸಂಬಂಧಗಳ ಭಾವನಾತ್ಮಕ ಆಯಾಮಗಳು ಹಾಗೂ ಕರಾವಳಿಯ ಬದುಕಿನ ವೈಶಿಷ್ಟ್ಯಗಳನ್ನು ಒಳಗೊಂಡ ಕಥಾವಸ್ತುವನ್ನು ಚಿತ್ರ ಹೊಂದಿರಲಿದೆ. ಸ್ಥಳೀಯ ಪ್ರತಿಭೆಗಳಿಗೆ ಆದ್ಯತೆ ನೀಡುವುದರೊಂದಿಗೆ ಕರಾವಳಿಯ ಕಲಾವಿದರು ಮತ್ತು ತಂತ್ರಜ್ಞರನ್ನು ಒಳಗೊಳ್ಳುವ ಆಶಯವೂ ಚಿತ್ರತಂಡದ್ದಾಗಿದೆ.
ಕಾರ್ಯಕ್ರಮದಲ್ಲಿ ಎಂಪೀರಿಯಾ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ನಿಶಾನ್ ಕೃಷ್ಣ ಭಂಡಾರಿ, ಎಂಪೀರಿಯಂ ಎಂಟರ್ಟೈನ್ಮೆಂಟ್ ನಿರ್ದೇಶಕ ದೀಪಕ್ ಶೆಟ್ಟಿ, ಗೋವರ್ಧನ ಗಿರಿ ಸೊಸೈಟಿಯ ಉಪಾಧ್ಯಕ್ಷ ಹಾಗೂ ಗೋಕುಲ್ ನ್ಯೂಟ್ರೋದ ಸಿಇಒ ರೋಹಿತ್ ಶೆಟ್ಟಿ, ಎಂಪೀರಿಯಂ ಎಂಟರ್ಟೈನ್ಮೆಂಟ್ನ ಸಿಇಒ ಹೇಮಂತ್ ಕುಲಾಲ್, ಪಿಆರ್ಒ ಕೇಶವ ಬಂಗೇರ, ಹಮೀದ್ ಪುತ್ತೂರು, ರಾಜ್ಯ ಪ್ರಶಸ್ತಿ ಪುರಸ್ಕೃತ ಎಂ.ಕೆ. ಮಠ, ಛಾಯಾಗ್ರಾಹಕ ಉದಯ ಬಲ್ಲಾಳ್, ತಾಂತ್ರಿಕ ವಿಭಾಗದ ಕುಮಾರ್ ಸ್ಕಂದ, ಸುಭಾಶ್ಚಂದ್ರ ಜೈನ್, ಶೆಟ್ಟಿ ಮಂಗಲ್ಪಾಡಿ, ಚಂದ್ರ ಕೋಟ್ಯಾನ್ ಕಲ್ಲಡ್ಕ, ಸದಾಶಿವ ಸೂರಿಕುಮೇರ್ ಹಾಗೂ ನೇಮಿರಾಜ್ ರೈ ಕುಂಬ್ರ ಉಪಸ್ಥಿತರಿದ್ದರು.
ಆಡಿಷನ್ ಪ್ರಕ್ರಿಯೆಯ ಬಳಿಕ ಕಲಾವಿದರ ಆಯ್ಕೆ ಪೂರ್ಣಗೊಳಿಸಿ ಮುಂದಿನ ಹಂತದ ಚಿತ್ರೀಕರಣ ಸಿದ್ಧತೆಗಳನ್ನು ಕೈಗೊಳ್ಳಲಾಗುತ್ತಿದೆ.
