ಕೈಕಂಬ: ಸುಮಾರು 18 ವರ್ಷಗಳಿಂದ ಸೌದಿ ಅರೇಬಿಯಾದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದ ಕಾಸರಗೋಡು ಹೊಸಂಗಡಿ ಸಮೀಪದ ಮಜಿಬೈಲು ವಸಂತ ಶೆಟ್ಟಿ(49) ಎಂಬವರು ಮಾ.7ರಂದು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದಂತೆ ಆಮ್ಲಜನಕದ ಕೊರತೆಯಾಗಿ ಮೃತಪಟ್ಟಿದ್ದಾರೆ.. ಆದರೆ ಕಂಪೆನಿ ಮಾತ್ರ ಅವರ ಮೃತದೇಹವನ್ನು ಸ್ವದೇಶಕ್ಕೆ ಕಳುಹಿಸದೆ ಸುಮಾರು 75 ದಿನಗಳ ಕಾಲ ಸತಾಯಿಸಿದೆ.ಆದರೆ ನಿನ್ನೆ ಮೃತದೇಹ ಬಜ್ಪೆ ವಿಮಾನ ನಿಲ್ದಾಣದ ಮೂಲಕ ಬಂದು ಕುಟುಂಬಿಕರಿಗೆ ದೊರೆತಿದೆ.
ಇವರು ಕಳೆದ 18 ವರ್ಷಗಳಿಂದ ಸೌದಿ ಅರೇಬಿಯಾದ ಅಲ್ ಖೊಬಾರ್ ಎಂಬಲ್ಲಿ ಕೊರಿಯಾ ಮೂಲದ `ಆಮ್ಸಿಕೋ’ ಕಂಪೆನಿಗೆ ಪೈಪ್ಲೈನ್ ಕಾಮಗಾರಿ ನಡೆಸುವ ಕಾಯಕ ಮಾಡುತ್ತಿದ್ದರು.
ತನ್ನ ಸಹೋದ್ಯೋಗಿಯನ್ನು ಬದುಕಿಸಲು ಹೋದ ವಸಂತ್ ಶೆಟ್ಟಿ ಆತನೊಂದಿಗೆ ತಾನೂ ಜೀವ ಕಳೆದುಕೊಂಡರು. ಕಳೆದ ಮಾಚರ್್ ಏ.4ರಂದು ಅಲ್ ಖೊಬಾರ್ನಿಂದ ಹಾಲಸಕ್ಕೆ ಪೈಪ್ಲೈನ್ ಕಾಮಗಾರಿ ನಡೆಸುತ್ತಿದ್ದ ವೇಳೆ ಇವರ ಸಹೋದ್ಯೋಗಿ ಕೊಲ್ಲಂ ನಿವಾಸಿ ಮುಹಮ್ಮದ್ ಫೈಝಲ್ ಬಶೀರ್ ಎಂಬವರು ಆಮ್ಲಜನಕದ ಕೊರತೆಯಿಂದ ಉಸಿರುಗಟ್ಟಿದ್ದರು ಆದರೆ ತನ್ನ ಗೆಳೆಯನ ಪ್ರಾಣ ರಕ್ಷಣೆಗೆಂದು ಆತ ಕಾಮಗಾರಿ ನಡೆಸುತ್ತಿದ್ದ ಸ್ಥಳಕ್ಕೆ ಇಳಿದು ಆತನನ್ನು ಮೇಲಕ್ಕೆಳೆಯಲು ಯತ್ನಿಸುತ್ತಿದ್ದಂತೆ ಆಮ್ಲಜನಕದ ಕೊರತೆಯುಂಟಾಗಿ ತಾನೂ ಜೀವಕಳೆದುಕೊಂಡರು.
ವಸಂತ್ ಶೆಟ್ಟಿ ಅವರ ಸಹೋದ್ಯೋಗಿಯ ಶವವನ್ನು ಅಲ್ಲೇ ಅಂತ್ಯ ಸಂಸ್ಕಾರ ನಡೆಸಿದರೂ ಇವರ ಶವದ ಸ್ಥಿತಿಯನ್ನು ಕೇಳುವವರೂ ಇರಲಿಲ್ಲ. ದಾಖಲೆಪತ್ರಗಳು ಸರಿಯಾಗಿಲ್ಲ ಎಂಬ ಕಾರಣಕ್ಕೆ ಅವರ ಮೃತದೇಹವನ್ನು ಊರಿಗೆ ಕಳುಹಿಸಲು ವಿಳಂಬತೋರಲಾರಂಬಿಸಿದರು. ಅಲ್ಲದೆ ಅಧಿಕಾರಿಯನ್ನೂ ಕಳುಹಿಸಲಾಗಿಲ್ಲ. ಮನೆಮಂದಿ ಕಳುಹಿಸಿದ ಇ-ಮೇಲ್ಗಳಿಗೂ ಕಂಪೆನಿ ಉತ್ತರಿಸಿರಲಿಲ್ಲ. ಆದರೆ `ಆಮ್ಸಿಕೋ’ ಕಂಪೆನಿಯಲ್ಲಿ ಇರುವ ಸಂಬಂದಿ ಗೋಪಾಲ ಶೆಟ್ಟಿ ಎಂಬವರು ಮುತುವಜರ್ಿ ವಹಿಸಿ ಮೃತದೇಹ ಊರಿಗೆ ಸಾಗಿಸುವ ವ್ಯವಸ್ಥೆ ಮಾಡಿಕೊಂಡ ಫಲವಾಗಿ ಕೊನೆಗೂ ವಸಂತ್ ಮೃತದೇಹ ಊರಿಗೆ ಬಂದಿದೆ.
ಆದರೆ ವಸಂತ ಶೆಟ್ಟಿಯವರ ಸಾವಿನ ಪ್ರಕರಣದಲ್ಲಿ ಕೊರಿಯಾ ಮೂಲದ ಕಂಪೆನಿ ಎಷ್ಟು ಬೇಜವಾಬ್ದಾರಿ ತಾಳಿದೆಯೆಂದರೆ ಶವ ಕಳುಹಿಸಿದಾಗ ಪೋಸ್ಟ್ ಮಾರ್ಟಂ ಬಾಕ್ಸ್ನ ತೆರೆಯಲು ಕೀಯನ್ನೂ ಕಳುಹಿಸಿಲ್ಲ. ಇದೀಗ ಶವವನ್ನು ಹೊರತೆಗೆಯಲು ಬಾಕ್ಸನ್ನು ಒಡೆಯಲೇಬೇಕಾದ ಪರಿಸ್ಥಿಗೆ ಕುಟುಂಬಿಕರು ಬಂದಿದ್ದಾರೆ.
ಪರಿಹಾರವಿಲ್ಲ, ದೂತಾವಾಸದ ನೆರವಿಲ್ಲ
ವಸಂತ್ ಶೆಟ್ಟಿಯವರ ಕರ್ತವ್ಯನಿಷ್ಠೆಗೆ ಹಲವು ಪ್ರಶಸ್ತಿಗಳೂ ಸಿಕ್ಕಿವೆ. ಆದರೆ ಕಂಪೆನಿ ಮಾತ್ರ ನಯಾಪೈಸೆಯ ಪರಿಹಾರವನ್ನು ಕೊಟ್ಟಿಲ್ಲ. ಅಲ್ಲದೆ ಅವರಿಗೆ ಸಲ್ಲಬೇಕಾದ ಸೊತ್ತುಗಳನ್ನೂ ಕಂಪೆನಿ ಬಾಕಿ ಇರಿಸಿದೆ.
ವಸಂತ್ ಶೆಟ್ಟಿ ಸಂಸಯಾತೀತವಾಗಿ ಮೃತಪಟ್ಟಿದ್ದಾರೆ ಎಂದು ಭಾರತದ ದೂತವಾಸ ಯಾವುದೇ ರೀತಿಯಲ್ಲಿ ಕಂಪೆನಿಗೆ ಪ್ರಶ್ನೆಯನ್ನೇ ಎತ್ತಿಲ್ಲ. ಅಲ್ಲದೆ ಶವ ಕಳಿಸು ವಿಳಂಬಗತಿಗೆ ಕಾರಣವೇನೆಂಬುದನ್ನೂ ಪ್ರಶ್ನಿಸಿಲ್ಲ. ಮಜಿಬೈಲು ನಿವಾಸಿ ಆನಂದ ಶೆಟ್ಟಿ ಹಾಗೂ ಕಮಲ ಶೆಟ್ಟಿ ದಂಪತಿಯ ಮೂರನೇ ಮಕ್ಕಳಲ್ಲಿ ಮೊದಲನೆಯವರೇ ವಸಂತ ಶೆಟ್ಟಿ. ಶ್ರೀಲತಾ ಎನ್ನುವವರೊಂದಿಗೆ ಮದುವೆಯಾಗಿದ್ದು ಧೃತಿ ಹಾಗೂ ಶ್ರೇಯಾ ಎಂಬಿಬ್ಬರು ಪುತ್ರಿಯರನ್ನು ಹೊಂದಿದ್ದಾರೆ. ಮಕ್ಕಳಿಬ್ಬರೂ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ತಂದೆತಾಯಿ ಹಾಸಿಗೆ ಹಿಡಿದಿದ್ದಾರೆ. ವಿಚಿತ್ರವೆಂದರೆ ಕುಟುಂಬಿಕರಗೆ ವಸಂತ್ ಶೆಟ್ಟಿ ನಿಧನರಾಗಿದ್ದಾರೆ ಎಂಬ ವಿಷಯವೇ ಗೊತ್ತಿಲ್ಲ. ಆದರೆ ಈಗ ಗೊತ್ತಾಗುತ್ತಿದ್ದಂತೆ ಮನೆಮಂದಿ ಗರಬಡಿದವರಂತಾಗಿದ್ದಾರೆ.






