ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಪೂರಕ ಅಂಶಗಳು ಮುಖ್ಯ: ಹರಿಕೃಷ್ಣ ಪುನರೂರು
ಬಜ್ಪೆ: ವ್ಯಕ್ತಿತ್ವ ವಿಕಸನಕ್ಕೆ ಪೂರಕವಾದ ಅಂಶಗಳನ್ನು ಇಂದಿನ ವಿದ್ಯಾರ್ಥಿಗಳಿಗೆ ಒದಗಿಸಿಕೊಡುವ ಕಾರ್ಯ ನಿರಂತರವಾಗಿ ಆಗಬೇಕಾಗಿದ್ದು, ಈ ನಿಟ್ಟಿನಲ್ಲಿ ವ್ಯಕ್ತಿತ್ವ ವಿಕಸನಕ್ಕೆ ಸಂಬಂಧಿಸಿದ ಉಪನ್ಯಾಸಗಳನ್ನು ಆಲಿಸುವುದು, ಪುಸ್ತಕಗಳನ್ನು ಓದಿ ಗ್ರಹಿಸಿಕೊಳ್ಳುವುದು ಹೀಗೆ ಇಂತಹುದಕ್ಕೆ ಅನುಕೂಲಕರ ವಾತಾವರಣವನ್ನು ನಿರ್ಮಿಸಿಕೊಡುವ ಕೆಲಸ ಶಿಕ್ಷಣ ಸಂಸ್ಥೆಗಳಲ್ಲಿ ನಡೆಯುತ್ತಿರುವುದು ಸ್ವಾಗತಾರ್ಹವೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಅಧ್ಯಕ್ಷರಾದ ಧರ್ಮದರ್ಶಿ ಹರಿಕೃಷ್ಣ ಪುನರೂರು ಅಭಿಪ್ರಾಯಿಸಿದ್ದಾರೆ.
ಅವರು ಇತ್ತೀಚೆಗೆ ಸುಂಕದಕಟ್ಟೆ ಶ್ರೀನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶ್ರೀ ಗುರು ಚಾರಿಟೆಬಲ್ ಟ್ರಸ್ಟ್ (ರಿ) ಸುರತ್ಕಲ್, ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿ ಮಂಗಳೂರು ಮತ್ತು ಕಾಲೇಜಿನ ಹವ್ಯಾಸಿ ಸಂಘದ ಒಟ್ಟು ಆಶ್ರಯದಲ್ಲಿ ಜರುಗಿದ ವ್ಯಕ್ತಿತ್ವ ವಿಕಸನ ಉಪನ್ಯಾಸ ಮತ್ತು ಗ್ರಂಥಾಲಯಕ್ಕೆ ಸಾಹಿತ್ಯ ಪುಸ್ತಕ ಕೊಡುಗೆ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಪುಸ್ತಕಗಳನ್ನು ಉದಾರವಾಗಿ ನೀಡಿ ಮಾತನಾಡುತ್ತಿದ್ದರು.
ನಮ್ಮ ವ್ಯಕ್ತಿತ್ವವನ್ನು ನಾಲ್ಕು ಮಂದಿಗೆ ಮಾದರಿಯಾಗಿಸುವುದು ನಮ್ಮನ್ನು ನಾವೇ ನಾಯಕರಾಗಿ ರೂಪಿಸಿಕೊಳ್ಳುವುದು ನಮ್ಮತನವನ್ನು ಕಾಪಾಡಿಕೊಳ್ಳುವುದು ಹೀಗೆ ನಮ್ಮ ವ್ಯಕ್ತಿತ್ವವನ್ನು ವಿವಿಧ ಪೂರಕ ಚಟುವಟಿಕೆಗಳ ಮೂಲಕ ಎತ್ತರಿಸಲು ಬಹಳಷ್ಟು ಅವಕಾಶವಿದೆ. ವಿದ್ಯಾರ್ಥಿಗಳು ಇದನ್ನು ಸದುಪಯೋಗಪಡಿಸಿಕೊಂಡು ವ್ಯಕ್ತಿತ್ವವನ್ನು ಶ್ರೀಮಂತಗೊಳಿಸಬೇಕೆಂದು ವ್ಯಕ್ತಿತ್ವ ವಿಕಸನ ಕಾರ್ಯಕ್ರಮದ ಮುಖ್ಯ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿದ ಪ್ರತಿಭಾ ಕುಳಾಯಿ ಸಾಂದರ್ಭಿಕವಾಗಿ ಹೇಳಿದರು.

ಶ್ರೀಗುರು ಚಾರಿಟೆಬಲ್ ಟ್ರಸ್ಟ್ ಮತ್ತು ಈ ಸಂಸ್ಥೆಯ ನಡುವಿನ ಸಂಬಂಧಗಳು ಇಂತಹ ಕಾರ್ಯಕ್ರಮಗಳ ಮೂಲಕ ಮತ್ತಷ್ಟು ದೀರ್ಘವಾಗಲಿ ಬಡ ವಿದ್ಯಾರ್ಥಿಗಳಿಗೆ ಟ್ರಸ್ಟ್ ಮುಖಾಂತರವಾಗಿ ಬಹಳಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು ಸುದೃಢ ಸಮಾಜ ನಿರ್ಮಾಣದಲ್ಲಿ ಸದರಿ ಟ್ರಸ್ಟ್ ಮಾದರಿ ಕೆಲಸವನ್ನು ಮಾಡುತ್ತಿದೆಯೆಂದು ಟ್ರಸ್ಟ್‍ನ ಕಾರ್ಯದರ್ಶಿ ಜಯಾನಂದ್ ಹೇಳಿದರು. ಸಂಸ್ಥೆಯು ನಡೆಸುವ ಪ್ರತಿಯೊಂದು ರಚನಾತ್ಮಕ ಚಟುವಟಿಕೆಗಳಲ್ಲಿ ನಮ್ಮ ಸಮಿತಿ ಸಹಕಾರವನ್ನು ನೀಡುತ್ತಾ ಬರುತ್ತಿರುವುದು ವಿದ್ಯಾರ್ಥಿಗಳಿಗೆ ಪ್ರಯೋಜನಕಾರಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉತ್ಸುಕರಾಗಿದ್ದೇವೆಂದು ಅಖಿಲ ಭಾರತ ಬಿಲ್ಲವರ ಏಕೀಕರಣ ಸಮಿತಿಯ ಕಾರ್ಯದರ್ಶಿ ದೀಪಕ್ ಕೋಟ್ಯಾನ್ ಇವರು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯರಾದ ಲತಾ ಕೆ. ಇವರು ವಿದ್ಯಾರ್ಥಿಗಳಿಗಾಗಿ ಲಭ್ಯವಿರುವ ಎಲ್ಲಾ ಸಂಪನ್ಮೂಲಗಳನ್ನು ಒದಗಿಸಿಕೊಡುವ ನಿಟ್ಟಿನಲ್ಲಿ ಸಂಸ್ಥೆ ನಡೆಸುತ್ತಿರುವ ಪ್ರಯತ್ನಕ್ಕೆ ಪೂರಕವಾಗಿ ಸಹಕರಿಸುತ್ತಿರುವ ಇಂತಹ ಸಂಸ್ಥೆಗಳಿಗೆ ಅಭಾರಿತನವನ್ನು ವ್ಯಕ್ತಪಡಿಸಿದರು. ಇದೇ ಸಂದರ್ಭದಲ್ಲಿ ಪುಸ್ತಕಗಳನ್ನು ಕೊಡುಗೆಯಾಗಿ ನೀಡಿದ ಧರ್ಮದರ್ಶಿ ಹರಿಕೃಷ್ಣ ಪುನರೂರು ಇವರನ್ನು ಗೌರವಿಸಲಾಯಿತು.
ದಿವಂಗತ ಸತ್ಯೇಂದ್ರ ಬಂಗೇರ ಇವರ ನೆನಪಿನಲ್ಲಿ ಅವರ ಸಹೋದರ ನಿವೃತ್ತ ಮುಖ್ಯೋಪಾಧ್ಯಾಯರಾದ ರವಿರಾಜ್ ಬಂಗೇರ ಮತ್ತು ಬಿ. ತಮ್ಮಯ್ಯ, ಮಾಜಿ ಅಧ್ಯಕ್ಷರು ಬಂಟ್ವಾಳ ತಾಲೂಕು ಸಾಹಿತ್ಯ ಪರಿಷತ್ ಇವರುಗಳು ಕೂಡ ಸಾಹಿತ್ಯ ಪುಸ್ತಕಗಳನ್ನು ಒದಗಿಸಿಕೊಟ್ಟುದುದನ್ನು ಈ ಸಂದರ್ಭದಲ್ಲಿ ನೆನಪಿಸಿಕೊಳ್ಳಲಾಯಿತು. ವೇದಿಕೆಯಲ್ಲಿ ಕಾರ್ಯಕ್ರಮದ ರುವಾರಿ ಶ್ರೀಗುರು ಚಾರಿಟೆಬಲ್ ಟ್ರಸ್ಟ್ (ರಿ) ಇದರ ಸಂಯೋಜಕರಾದ ರಾಮಣ್ಣ ಪೂಜಾರಿಯವರು ಉಪಸ್ಥಿತರಿದ್ದರು.
ಉಪನ್ಯಾಸಕಿ ಪುಷ್ಪಲತಾ ಇವರು ನಿರೂಪಿಸಿದ ಕಾರ್ಯಕ್ರಮದಲ್ಲಿ ಗ್ರಂಥಪಾಲಕರಾದ ವಿಶ್ವನಾಥ್ ಪೂಜಾರಿ ರೆಂಜಾಳ ಇವರು ಸರ್ವರನ್ನು ಸ್ವಾಗತಿಸಿದರು. ಹಿಂದಿ ಭಾಷಾ ಉಪನ್ಯಾಸಕಿ ಪ್ರಿಯದರ್ಶಿನಿ ವಂದಿಸಿದರು.

