ಬಜ್ಪೆ: ಕಟೀಲು ದುರ್ಗಾಪರೇಶ್ವರಿ ದೇವಳವನ್ನು ಸುತ್ತುವರಿದು ಹರಿಯುವ ನಂದಿನಿ ನದಿಯು ಭಕ್ತರ ಪಾಪವನ್ನೆಲ್ಲಾ ತೊಳೆಯುತ್ತಾಳೆ ಎಂಬ ನಂಬಿಕೆ ಇದೆ. ಆದರೆ ಆ ನಂಬಿಕೆಗೆ ಕೊಳ್ಳಿ ಇಡುವಂಥಾ ಕೆಲಸ ಅಲ್ಲಿ ನಡೆಯುತ್ತಿದೆ. ಯಾಕೆಂದರೆ ದೇವಸ್ಥಾನದ ಮುಂಭಾಗ ಮೀಯಲು ಬರುವ ಭಕ್ತರಿಗೆ ಕಲ್ಪಿಸಲಾದ ಸ್ನಾನಘಟ್ಟ ಹಾಗೂ ನದಿ ಕಲುಷಿತಗೊಂಡಿರುವುದು ಗಮನಕ್ಕೆ ಬರುತ್ತದೆ. ಈ ಕ್ಷೇತ್ರ ಮುಜರಾಯಿ ಇಲಾಖೆಗೆ ಒಳಪಟ್ಟರೂ, ಇಲಾಖೆ ಮಾತ್ರ ಇದರ ಬಗ್ಗೆ ಕಣ್ಣಿದ್ದೂ ಕುರುಡರಂತೆ ವರ್ತಿಸುತ್ತಿದೆ ಎಂಬ ಆರೋಪ ಭಕ್ತರದ್ದು.
ಇನ್ನು ನದಿಗೆ ಇಳಿಯುವ ಜಾಗದಲ್ಲಿ ಕಸ-ಕಡ್ಡಿ ತ್ಯಾಜ್ಯ ಅಲ್ಲಲ್ಲಿ ರಾಶಿ ಬಿದ್ದಿದ್ದು ಅದನ್ನು ವಿಲೇವಾರಿಗೊಳಿಸುವ ಕೆಲಸವನ್ನು ಕ್ಷೇತ್ರದ ಆಡಳಿತ ಕೈಗೊಳ್ಳುತ್ತಿಲ್ಲ. ಅದರ ಸಮೀಪ ಪಾನ್, ಗುಟ್ಕಾ ಜಗಿದು ಉಗಿದಿರುವುದು, ಅದರ ಪ್ಯಾಕೆಟ್ ಎಸೆದಿರುವುದು ಕಂಡುಬರುತ್ತದೆ. ಕೆಲವು ಕಡೆ ಕೊಳಕು ಬಟ್ಟೆಗಳು, ಇನ್ನಿತರ ತ್ಯಾಜ್ಯಗಳು ದೇವಸ್ಥಾನದ ಪಾವಿತ್ರ್ಯತೆಯನ್ನು ಹಾಳು ಮಾಡುತ್ತಿದೆ.
ದೇವಸ್ಥಾನದಲ್ಲಿ ಪ್ರತಿನಿತ್ಯ ಅನ್ನದಾನ ಇರುವುದರಿಂದ ಎಂಜೆಲೆಗಳನ್ನು ಒಮ್ಮೊಮ್ಮೆ ನದಿಗೆ ಎಸೆಯುವುದು, ಕೈತೊಳೆದ ತ್ಯಾಜ್ಯ ನೀರು ಕೆಲವೊಮ್ಮ ನದಿಗೆ ಹರಿದುಹೋಗುವುದು ಕಂಡುಬರುತ್ತಿದೆ. ಕಸಕಡ್ಡಿ, ಎಂಜಲೆಲೆ, ಸೀಯಾಳದ ಗೊರಟೆ ಮುಂತಾದ ವಸ್ತುಗಳು ನೀರಲ್ಲಿ ಸೇರಿದ್ದರೂ ಅದನ್ನು ವಿಲೇವಾರಿಗೊಳಿಸುವುದಿಲ್ಲ. ಕೊನೆಗದು ಸ್ನಾನಘಟ್ದ ಬಳಿ ಶೇಖರಣೆಗೊಳ್ಳುತ್ತದೆ. ಇದರ ಫಲವಾಗಿ ಕೆಲವೊಮ್ಮೆ ದೇವಳದ ಎದುರಿರುವ ನಳ್ಳಿಯಲ್ಲಿ ಮಣ್ಣುಮಿಶ್ರಿತ ನೀರು ಬರುವುದು ಸುಳ್ಳಲ್ಲ. ಪಾರ್ಕಿಂಗ್ ವ್ಯವಸ್ಥೆ, ಲಾರಿಗಳು ನುಗ್ಗಿ ಬರುವುದು, ವಾಹನಗಳ ಕರ್ಕಶ ಹಾರ್ನ್ ಇತ್ಯಾದಿ ಸಮಸ್ಯೆಯಾಗಿ ಪರಿಣಮಿಸಿದೆ.
ಲಕ್ಷಾಂತರ ಜನ ಸೇರುವ ದೇವಸ್ಥಾನದ ವಾರ್ಷಿಕ ಆದಾಯವೂ ಅಧಿಕವಿದೆ. ಆದರೆ ಮುಜರಾಯಿ ಇಲಾಖೆ ದೇವಸ್ಥಾನದ ಆದಾಯದ ಮೇಲೆಯೇ ದೃಷ್ಟಿ ಹರಿಸುತ್ತದೆಯೇ ಹೊರತು, ಅದರ ಸ್ವಚ್ಛತೆ, ವ್ಯವಸ್ಥೆಯತ್ತ ಗಮನಹರಿಸುವುದಿಲ್ಲ ಎಂಬ ಆರೋಪ ಭಕ್ತರದ್ದು.


