ಬಜ್ಪೆ: ತೊಟ್ಟಿಲ ಗುರಿ ದುರಂತ ನಡೆದು ಬರೋಬ್ಬರಿ ಮೂರು ವರ್ಷ ಕಳೆದ ಬಳಿಕ ನಿರ್ವಸಿತರಿಗೆ ಬಜ್ಪೆ ಸಮೀಪದ ಪೊರ್ಕೋಡಿಯಲ್ಲಿ ನೂತನವಾಗಿ ನಿರ್ಮಿಸಿದ ವಸತಿ ಸಮುಚ್ಛಯ ಹಾಗೂ ಕುಡಿಯುವ ನೀರಿನ ಸ್ಥಾವರದ ಉದ್ಘಾಟನಾ ಸಮಾರಂಭ ಶನಿವಾರ ನಡೆಯಿತು.
ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ದ.ಕ.ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಆಶಾ ತಿಮ್ಮಪ್ಪ ಗೌಡ, ತೊಟ್ಟಿಲ ಗುರಿ ದುರಂತಕ್ಕೀಡಾದ ಸಂತ್ರಸ್ತರನ್ನು ಮನವೊಲಿಸುವುದೇ ಕಷ್ಟವಾಗಿತ್ತು. ಅಲ್ಲದೆ ಸಂತ್ರಸ್ಥರಿಗೆ ಸೂಕ್ತವಾದ ಜಾಗ ತೋರಿಸಿ ಅವರನ್ನು ಅಲ್ಲೇ ನೆಲೆಸುವಂತೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಅದಕ್ಕೆಂದೇ ಮೊದಲ ಬಾರಿ ಎಂಬಂತೆ ಪಂಚಾಯತ್ಗೆ ಹಿರಿಯ ನಾಗರೀಕರ ಪುರಸ್ಕಾರದಿಂದ ಪ್ರಶಸ್ತಿಗೆಂದು ಬಂದಿದ್ದ ಸುಮಾರು 10 ಲಕ್ಷ ಹಣವನ್ನು ಮನೆ ನಿರ್ಮಿಸಲು ವಿನಿಯೋಗಿಸಲಾಯಿತು. ಈ ನಿಟ್ಟಿನಲ್ಲಿ ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಹಾಗೂ ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಇಂದಿರಾ ಆವಾಸ್ ಯೋಜನೆ ಹಾಗೂ ಬಸವ ವಸತಿ ಯೋಜನೆಯ ಮೂಲಕ ಮನೆ ಮಂಜೂರು ಮಾಡಲಾಗಿದೆ.ಅ ದರಂತೆ ಪೊರ್ಕೋಡಿಯಲ್ಲಿ ಸೂಚಿಸಿದ ಜಾಗದಲ್ಲಿ 3.75 ಲಕ್ಷ ರೂ ಹಣ ವೆಚ್ಚದಲ್ಲಿ ಸಮತಟ್ಟುಗೊಳಿಸಿ ಸುಮಾರು 15 ನಿವೇಶನ ರಚಿಸಿ ಹಕ್ಕುಪತ್ರವನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ. ಅಲ್ಲದೆ ಕಟ್ಟಡ ಮಾಲಿಕರು 2 ಹಂತಗಳಲ್ಲಿ 14 ಲಕ್ಷ ಹಣವನ್ನು ನೀಡಿದ್ದಾರೆ. ಬಜ್ಪೆ ಗ್ರಾಮ ಪಂಚಾಯತ್ನ ಪರಿಶಿಷ್ಠ ಜಾತಿ-ಪಂಗಡಕ್ಕೆಂದು ಬಂದಿದ್ದ ನಿಧಿ ಹೀಗೆ ಇತ್ಯಾದಿ ಸಹಾರ್ಯನಗಳಿಂದ 3.43 ಎಕ್ರೆ ಜಮೀನಿನಲ್ಲಿ 3.50 ಲಕ್ಷ ರೂ ವೆಚ್ಚದ ಮನೆಗಳನ್ನು ನಿರ್ಮಿಸಲಾಗಿದೆ.ಅಲ್ಲದೆ ಅಧಿಕಾರಿಗಳು ಕುದುರೆಮುಖ ಕಬ್ಬಿಣದ ಅದಿರು ಕಂಪೆನಿಯ ವತಿಯಿಂದ 12 ಲಕ್ಷ ರೂ ವೆಚ್ಚದಲ್ಲಿ 50 ಸಾವಿರ ಲೀಟರ್ ಸಾಮಥ್ರ್ಯದ ನೀರಿನ ಟ್ಯಾಂಕ್ ಕೂಡಾ ರಚಿಸಿಲಾಗಿದೆ. ಇವರೆಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದು ಆಶಾ ವಿವರಿಸಿದರು.
ಈ ಮನೆಯನ್ನು ಸುಂದರವಾಗಿ ಹಾಗೂ ಸ್ವಚ್ಛವಾಗಿ ಉಳಿಸುವ ಜವಾಬ್ದಾರಿ ನಿಮ್ಮೆಲ್ಲರದು ಆಶಾ ತಿಮ್ಮಪ್ಪ ಗೌಡ ವಿವರಿಸಿದರು.

ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಮಾತನಾಡಿ, ನನ್ನ ನಿಧಿಯಿಂದ ಕಾಲನಿಯ ಸ್ವಚ್ಛತೆಗಾಗಿ ಒಂದು ಲಕ್ಷ ರೂ ಹಣ ನೀಡುತ್ತಿದ್ದೇನೆ ಎಂದು ಹೇಳಿದರು. ವೇದಿಕೆಯಲ್ಲಿದ್ದ ರಿತೇಶ್ ಶೆಟ್ಟಿ, ರೋಸಿ ಮಥಾಯಿಸ್, ಭೋಬ್ರಾಜ್ ಜೆಹ್ರನ್, ಲೋರ್ದು ಸ್ವಾಮಿ ಮುಂತಾದವರು ಮಾತನಾಡಿದರು. ಮನೆ ನಿರ್ಮಿಸಲು ಶ್ರಮಿಸಿದ ಹಾಗೂ ಸಹಾಯಧನ ಸಿಗುವಂತೆ ಮಾಡಿದ ಹಲವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಸಚಿವ ಅಭಯ ಚಂದ್ರ ಜೈನ್ ಆಗಮಿಸಿದ್ದರು.
ತಡವಾಗಿ ಬಂದ ಅಭಯ ಚಂದ್ರ ಜೈನ್
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಾಗಿದ್ದ ಯುವಜನ ಸೇವೆ ಕ್ರೀಡೆ ಹಾಗೂ ಮೀನುಗಾರಿಕಾ ಸಚಿವ ಅಭಯ ಚಂದ್ರ ಜೈನ್ ತನ್ನ ಎಂದಿನ ಶೈಲಿಯಲ್ಲಿ ತಡವಾಗಿ ಬಂದ ಕಾರಣ ಬೆಳಿಗ್ಗೆ 10 ಗಂಟೆಗೆ ಆರಮಭವಾಗಬೇಕಾಗಿದ್ದ ಕಾರ್ಯಕ್ರಮ ಮಧ್ಯಾಹ್ನ 12.30 ಗಂಟೆ ವೇಳೆಗೆ ಆರಂಭವಾಯಿತು. ಕಾರ್ಯಕ್ರಮ ಆರಂಭವಾಗದಿರುವದನ್ನು ನೋಡಿ ಪತ್ರಕರ್ತರು ಆಯೋಜಕರನ್ನು ತರಾಟೆಗೆ ತೆಗೆದುಕೊಂಡ ಘಟನೆಯೂ ನಡೆಯಿತು. ಬಿಸಿಲಿನ ಝಳದಲ್ಲಿ ಸುಸ್ತಾಗಿದ್ದ ಸಂತ್ರಸ್ಥರು ಹಾಗೂ ಸಭೀಕರ ಬವಣೆಯನ್ನು ಕಂಡು ಆಯೋಜಕರು ಕೊನೆಗೂ 12.30ರ ವೇಳೆಗೆ ಕಾರ್ಯಕ್ರಮ ಆರಂಭಿಸಿದ್ದಾರೆ. ಕಾರ್ಯಕ್ರಮದ ಅಂತ್ಯ ಸಮೀಪಿಸುವ ವೇಳೆಗೆ ಅಭಯ ಚಂದ್ರ ಜೈನ್ ಆಗಮನವಾಗಿತ್ತು.
ಬಾಕ್ಸ್
ಪೊರ್ಕೋಡಿ ದುರಂತ 2013ರ ಜೂನ್ 18ರಂದು ನಡೆದಿತ್ತು. ಆಡಳಿತ ವರ್ಗ ಮನಸ್ಸು ಮಾಡಿದ್ದರೆ ಕಳೆದ ವರ್ಷವೇ ಮನೆ ನಿರ್ಮಾಣವಾಗಬೇಕಿತ್ತು. ಸಂತ್ರಸ್ಥರಿಗೆ ಪೊರ್ಕೋಡಿಯಲ್ಲಿ ಜಾಗ ಸೂಚಿಸಿರುವುದು ಅಸಮ್ಮತಿಗೆ ಕಾರಣವಾಗಿತ್ತು. ಕೆಲವರು ಬಜ್ಪೆ ಪೊಲೀಸ್ಲೇನ್ ಸಮೀಪದ ಜಾಗ ಬೇಕೆಂದು ಪಟ್ಟು ಹಿಡಿದಿದ್ದು, ಕೊನೆಗೂ ಸಮತ್ರಸ್ಥರನ್ನು ಮನವೊಲಿಸಿ ಪೊರ್ಕೋಡಿಯಲ್ಲೇ ಮನೆ ನಿರ್ಮಿಸಲಾಯಿತು. ಪಂಚಾಯತ್ ಸೂಚಿಸಿದ ಕಟ್ಟಡದಲ್ಲಿ ಯಮಯಾತನೆಯಿಂದ ಬದುಕುತ್ತಿದ್ದ ಸಂತ್ರಸ್ಥರ ಬವಣೆ ತೀರಿದಂತಾಗಿದೆ. ಆದರೆ ಸ್ಥಳೀಯರ ಪ್ರಕಾರ ಸಂತ್ರಸ್ಥರ ಪೈಕಿ ಕೆಲವರು ಕುಡಿತದ ದಾಸರಾಗಿದ್ದು, ಅವರಿಗೆ ನಾಗರೀಕತೆಯನ್ನು ಒದಗಿಸುವ ಕೆಲಸವನ್ನು ಮಾಡುವ ಕೆಲಸವನ್ನು ಸಂಘಟಕರು ಮಾಡಬೇಕೆಂಬ ಒತ್ತಾಯ ಕೇಳಿಬಂದಿದೆ.


