ಮುಂಬಯಿ: ಬಿ.ಎಸ್.ಕೆ.ಬಿ.ಎಸೊಸಿಯೆಶನ್, ಗೋಕುಲದ ಯುವ ವಿಭಾಗವು ಮಹಿಳಾ ವಿಭಾಗದ ಸಹಯೋಗದೊಂದಿಗೆ, ಸಂಘದ ಸದಸ್ಯರ ಮಕ್ಕಳಿಗಾಗಿ ದಿನಾಂಕ ಡಿಸೆಂಬರ್ 25 ರಿಂದ 29ರ ವರೆಗೆ, ಐದು ದಿನಗಳ ಚಳಿಗಾಲದ ಶಿಬಿರವನ್ನು ಆಶ್ರಯ, ನೇರುಲ್ ನಲ್ಲಿ ಆಯೋಜಿಸಿತ್ತು. ಶಿಬಿರದಲ್ಲಿ ಈ ಬಾರಿ ನಿತ್ಯಾನುಷ್ಟಾನ, ಕನ್ನಡ ಕಲಿಸುವಿಕೆ, ಭಜನೆ, ರಂಗೋಲಿ, ಅಭಿನಯ, ವಿವಿಧ ಪ್ರಕಾರಗಳ ಕಸೂತಿ, ಚಿತ್ರಕಲೆ, ಹಸ್ತಕಲೆ ಮುಂತಾದುವುಗಳನ್ನು ಅಳವಡಿಸಲಾಗಿತ್ತು. ಮೊದಲಿನ ದಿನ ಸಂಜೆಯೇ ಶಿಬಿರದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಸುಮಾರು 36 ಮಕ್ಕಳು ಆಶ್ರಯದಲ್ಲಿ ನೆರೆದಿದ್ದರು. 25 ರಂದು ಬೆಳಿಗ್ಗೆ ನಿತ್ಯಾನುಷ್ಟಾನವನ್ನು ಕಲಿಸಿಕೊಡಲು ಆಗಮಿಸಿದ ವೇದಮೂರ್ತಿ ರಮಣ ಆಚಾರ್ಯ ಹಾಗೂ ಸಂಘದ ಅಧ್ಯಕ್ಷರಾದ ಡಾ ಸುರೇಶ ಎಸ್ ರಾವ್ ದೀಪ ಪ್ರಜ್ವಲಿಸಿ ಶಿಬಿರಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ವೇದಮೂರ್ತಿ ರಮಣ ಆಚಾರ್ಯ ಹಾಗೂ ಇನ್ನಿತರರನ್ನು ಸ್ವಾಗತಿಸಿದ ಡಾ. ಸುರೇಶ್ ರಾವ್, ನಮ್ಮ ಸಂಸ್ಕಾರ, ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವ ಅಪೇಕ್ಷೆಯಿಂದ, ಪ್ರ-ಪ್ರಥಮ ಬಾರಿಗೆ ಈ ವರ್ಷ ಐದು ದಿನಗಳ ಶಿಬಿರವನ್ನು ಏರ್ಪಡಿಸಿದ್ದೇವೆ. ಇದರ ಪ್ರಯೋಜನವನ್ನು ಎಲ್ಲಾ ಮಕ್ಕಳು ಪಡೆಯಬೇಕೆಂದು ಹೇಳಿದರು. ಶ್ರೀ ರಮಣ ಆಚಾರ್ಯರು ತನ್ನಲ್ಲಿರುವ ಜ್ಞಾನವನ್ನು ಸಾಧ್ಯವಾದಷ್ಟು ಮಟ್ಟಿಗೆ ಮಕ್ಕಳಿಗೆ ತಿಳಿಸುವ ಪ್ರಯತ್ನವನ್ನು ಮಾಡುತ್ತೇನೆ ಎಂದು ಹೇಳಿದರು.
ಸಂಜೆ, ಯುವ ವಿಭಾಗ, ಆಶ್ರಯ ನಿವಾಸಿಗಳು, ಶಿಬಿರದ ಕಾರ್ಯಕರ್ತರು ಹಾಗೂ ಮಕ್ಕಳು ಕೇಕ್ ಕತ್ತರಿಸುವುದರೊಂದಿಗೆ ಕ್ರಿಸ್ಮಸ್ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಕಾರ್ಯದರ್ಶಿ ಪಿ.ಸಿ.ಎನ್ ರಾವ್ ಮತ್ತು ಪುಟಾಣಿ ಶ್ರಾವಣಿ ಸಾಂಟಾಕ್ಲಾಸ್ ನಂತೆ ವೇಷ ಧರಿಸಿ ನೆರೆದ ಎಲ್ಲರಿಗೂ ಹಬ್ಬದ ಉಡುಗೊರೆ ಹಂಚಿದರು. ವೇದಮೂರ್ತಿ ಶ್ರೀ ರಮಣ ಆಚಾರ್ಯರವರು ಐದು ದಿವಸಗಳಲ್ಲಿ ವಿಷ್ಣು ಸಹಸ್ರನಾಮ, ಭಗವದ್ಗೀತೆಯ ಹದಿನೈದನೆಯ ಅಧ್ಯಾಯ, ಜಪ, ನಿತ್ಯಾನುಷ್ಠಾನಗಳನ್ನು ಮಕ್ಕಳಿಗೆ ಮನ ಮುಟ್ಟುವಂತೆ ಕಲಿಸಿಕೊಟ್ಟರು. ಹೆಣ್ಣು ಮಕ್ಕಳಿಗೆ ಲಕ್ಷ್ಮೀ ಶೋಭಾನೆಯನ್ನು ಭಾರತಿ ಉಡುಪ, ಹೂ ಮಾಲೆ ಕಟ್ಟುವುದು, ಆರತಿ ಬತ್ತಿ
ಹೊಸೆಯುವುದು, ಹೊಸ್ತಿಲು ಬರೆಯುವುದು, ರಂಗೋಲಿ ಮುಂತಾದುವುಗಳನ್ನು ಭಾಗ್ಯಲಕ್ಷ್ಮಿ ಚಡಗ,ಅಂಜನಾ ರಾವ್, ಪ್ರೇಮಾ ರಾವ್ ಮುಂತಾದವರು ಕಲಿಸಿದರು. ಸಹನಾ ಭಾರದ್ವಾಜ್ ಕನ್ನಡ ಅಕ್ಷರಾಭ್ಯಾಸವನ್ನು ತನ್ನದೇ ಆದ ಶೈಲಿಯಲ್ಲಿ ಮಕ್ಕಳೊಂದಿಗೆ ಆಟವಾಡುತ್ತಾ ಕಲಿಸಿದುದು ಮಕ್ಕಳಿಗೆ ಅತ್ಯಂತ ಖುಷಿ ಕೊಟ್ಟಿತು. ಸರೋಜಾ ಸತ್ಯನಾರಾಯಣ, ಅರುಣಾ ಸೌತೆಕಲ್, ಅರುಣಾ ಆಚಾರ್, ಶಾಲಿನಿ ಉಡುಪ ಮುಂತಾದವರು ವಿಧ ವಿಧದ ಚಿತ್ರಕಲೆಗಳನ್ನು ಕಲಿಸಿದರು. ಹಿರಿಯ ರಂಗಕರ್ಮಿ ಬಿ. ಬಾಲಚಂದ್ರ ರಾಯರು ನಾಟಕದ ಅಭಿನಯ, ಹಾಗೂ ಸಹನಾ ಪೆÇೀತಿ ಭಜನೆಯನ್ನು ಕಲಿಸಿದರು. ಪ್ರತಿದಿನ ಬೆಳಿಗ್ಗೆ ಪ್ರಶಾಂತ್ ಹೆರ್ಲೆ ಮಕ್ಕಳನ್ನು ಆಟದ ಮೈದಾನಿಗೆ ಕರೆದುಕೊಂಡು ಹೋಗಿ ವ್ಯಾಯಾಮ ಮಾಡಿಸಿದರು.
ಶಿಬಿರದ ಸಮಾರೋಪ ಸಮಾರಂಭದ ಅಧ್ಯಕ್ಷತೆಯನ್ನು ಡಾ| ಸುರೇಶ್ ರಾವ್ ವಹಿಸಿದ್ದರು. ವೇದಿಕೆಯಲ್ಲಿ ಉಪಾಧ್ಯಕ್ಷರಾದ ವಾಮನ್ ಹೊಳ್ಳ, ಆಶ್ರಯ ಸಂಚಾಲಕಿ ಚಂದ್ರಾವತಿ ರಾವ್, ಆಶ್ರಯ ಕಾರ್ಯದರ್ಶಿ ಪ್ರಶಾಂತ್ ಹೆರ್ಲೆ, ಯುವ ವಿಭಾಗದ ಸಂಚಾಲಕರಾದ ದೀಪಕ್ ಶಿವತ್ತಾಯ, ವಿನೋದಿನಿ ರಾವ್, ಗೋಪಾಲಕೃಷ್ಣ ಪಬ್ಲಿಕ್ ಟ್ರಸ್ಟ್ ಸಮಿತಿ ಸದಸ್ಯೆ ಪ್ರೇಮಾ ರಾವ್ ಮುಂತಾದವರು ಉಪಸ್ಥಿತರಿದ್ದರು. ಶಿಬಿರಕ್ಕೆ ಅಧಿಕ ಸಂಖ್ಯೆಯಲ್ಲಿ ಮಕ್ಕಳು ಭಾಗವಹಿಸಿದುದಕ್ಕೆ ಸಂತೋಷವನ್ನು ವ್ಯಕ್ತಪಡಿಸಿದ ಡಾ ಸುರೇಶ್ ರಾವ್ ರವರು. ಪ್ರಯೋಗಾತ್ಮಕವಾಗಿ ಆಯೋಜಿಸಿದ ಐದು ದಿನಗಳ ಶಿಬಿರದಲ್ಲಿ ಕಲಿತಂತಹ ಜಪಾನುಷ್ಟಾನ ಹಾಗೂ ಎಲ್ಲಾ ವಿದ್ಯೆಗಳನ್ನು ಮಕ್ಕಳು ಮನೆಯಲ್ಲಿಯೂ ಅಭ್ಯಾಸ ಮಾಡುವಂತೆ ಹೆತ್ತವರು ನೋಡಿಕೊಳ್ಳಬೇಕು ಎಂದು ಹೇಳುತ್ತಾ ಮಕ್ಕಳಿಗೆ ಶುಭ ಹಾರೈಸಿದರು. ಅಂತೆಯೇ ಗೋಕುಲದ ಅಭಿವೃದ್ಧಿಗಾಗಿ ಹಮ್ಮಿಕೊಂಡ ಯೋಜನೆಗಳಿಗೆ ಎಲ್ಲರೂ ತಮ್ಮ ತಮ್ಮ ಶಕ್ತ್ಯಾನುಸಾರ ಸಹಕರಿಸಬೇಕು ಎಂದು ವಿನಂತಿಸಿದರು. ವಾಮನ್ ಹೊಳ್ಳ ಅವರು ಶಿಬಿರದ ಯಶಸ್ಸಿಗೆ ಸಹಕರಿಸಿದ ಮಕ್ಕಳ ಪಾಲಕರು ಹಾಗೂ ಕಾರ್ಯಕರ್ತರನ್ನು ಅಭಿನಂದಿಸಿದರು. ಡಾ| ಸುರೇಶ್ ರಾವ್ ಶಿಬಿರದ ಎಲ್ಲಾ ಶಿಕ್ಷಕ -ಶಿಕ್ಷಕಿಯರಿಗೆ ಸ್ಮರಣಿಕೆಗಳನ್ನಿತ್ತು ಗೌರವಿಸಿದರು. ವಿನೋದಿನಿ ರಾವ್ ಕಾರ್ಯಕ್ರಮ ನಿರೂಪಿಸಿದರು. ದೀಪಕ್ ಶಿವತ್ತಾಯ, ಶಿಬಿರದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ಸಮರ್ಪಣೆ ಗೈದರು. ಪ್ರೀತಿ ಭೋಜನದೊಂದಿಗೆ ಶಿಬಿರ ಸಂಪನ್ನವಾಯಿತು.


