ತೀವ್ರ ಅನಾರೋಗ್ಯಕ್ಕೊಳಗಾಗಿ ಚಿಕಿತ್ಸೆ ಪಡೆಯುತ್ತಿದ್ದ ವಿಶ್ವಹಿಂದೂ ಪರಿಷತ್ ಮುಖಂಡ ಅಶೋಕ್ ಸಿಂಘಾಲ್ ಅವರು ಇಂದು ಚಿಕಿತ್ಸೆ ಫಲಕಾರಿಯಾಗದೆ ಇಹಲೋಕ ತ್ಯಜಿಸಿದ್ದಾರೆ.
ಹೃದಯ, ಕಿಡ್ನಿ ಹಾಗೂ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಸಿಂಘಾಲ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಶುಕ್ರವಾರ ರಾತ್ರಿ ಮೇದಾಂತ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಉಸಿರಾಟದ ತೊಂದರೆಯ ಹಿನ್ನೆಲೆಯಲ್ಲಿ ಕೃತಕ ಉಸಿರಾಟದ ಮೂಲಕ ಅವರಿಗೆ ಚಿಕಿತ್ಸೆ ನೀಡಲಾಗುತಿತ್ತು. ಆದರೆ, ಅವರ ದೇಹಪ್ರಕೃತಿ ಚಿಕಿತ್ಸೆಗೆ ಸ್ಪಂದಿಸಲಿಲ್ಲ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
89ವರ್ಷ ಪ್ರಾಯದ ಅಶೋಕ್ ಸಿಂಘಾಲ್ ಕಳೆದ 20 ವರ್ಷಗಳಿಂದ ವಿಎಚ್ಪಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದಾರೆ. ಸಿಂಘಾಲ್ ಸಾವಿನ ಹಿನ್ನೆಲೆಯಲ್ಲಿ ವಿಎಚ್ ಪಿ ತನ್ನ ಚತುರ್ವೇದಿ ಯಜ್ಞ ಹಾಗೂ ದಿವಾಳಿ ಮಿಲನ ಕಾರ್ಯಕ್ರಮವನ್ನು ರದ್ದುಗೊಳಿಸಿದೆ.
