ಮುಂಬಯಿ, ಅ.24: ಕಾಮಾರ್ಸ್ ಎಂಡ್ ಇಂಡಸ್ಟ್ರೀಸ್ ಸಂಸ್ಥೆಗಳಿಂದ ಮಹಾರಾಷ್ಟ್ರಕ್ಕೆ ಅನನ್ಯ ಸೇವೆ ಪ್ರಾಪ್ತಿಯಾಗಿದ್ದು, ಅದರಲ್ಲಿ ಸಿಸಿಸಿಐ ಸಂಸ್ಥೆಯ ಸೇವೆಯೂ ಮಹತ್ತರದ್ದಾಗಿದೆ. ನಮ್ಮಲ್ಲಿನ ಯುವ ಜನತೆಗೆ ಉದ್ಯಮಶೀಲರನಾಗಿಸುವಲ್ಲಿ ಇಂತಹ ಸಂಸ್ಥೆಗಳ ಕೊಡುಗೆ ಗಣನೀಯವಾಗಿದೆ. ನಮ್ಮ ರಾಷ್ಟ್ರವು ನಿಸರ್ಗಿಕವಾಗಿಯೇ ಸಂಪನ್ನಭರಿತವಾಗಿದ್ದು ಉದ್ಯೋಗವಕಾಶಗಲೂ ವಿಪುಲವಾಗಿವೆ. ಆದರೆ ಅವುಗಳನ್ನು ಗಳಿಸುವಲ್ಲಿ ನಮ್ಮವರು ಹಿಂದುಳಿದ್ದು ಇದಕ್ಕಾಗಿ ರಾಷ್ಟ್ರದ ಪ್ರಸಕ್ತ ಪ್ರಧಾನಿ ವಿಶ್ವಪರ್ಯಟನೆಗೈದು ಇತರೇ ರಾಷ್ಟ್ರದ ನಾಯಕರು, ಜನತೆಯಲ್ಲಿ ನಮ್ಮ ದೇಶದ ಗುರುತರ ಸೇವೆಯನ್ನು ಮನವರಿಸಿ ಕೊಡುಕೊಳ್ಳುವಿಕೆಯ ಬಗ್ಗೆ ಯೋಜನೆ ರೂಪಿಸುತ್ತಿದ್ದಾರೆ. ಇದಕ್ಕೆ ಸ್ಪಂದಿಸುವಲ್ಲಿ ಇಂತಹ ಸಂಸ್ಥೆಗಳು ಸ್ವಇಚ್ಫಿತರಾಗಿ ಮುಂದೆಬರಬೇಕು. ಸಾಧ್ಯವಾದಷ್ಟು ಯುಯ ಜನಾಂಗವನ್ನು ಪ್ರೋತ್ಸಾಹಿಸಿದ್ದಲ್ಲಿ ನಮ್ಮ ರಾಷ್ಟ್ರವು ತನ್ನೀತಾನೇ ಶ್ರೇಯೋಭಿವೃದ್ಧಿ ಕಾಣಲಿದೆ. ಸ್ವಾವಲಂಬನೆಯಿಂದಲೇ ಸ್ವತಃ ಪಾಲನೆ ಆಗಲಿದೆ. ಅಂತೂ ಕ್ರೈಸ್ತರು ನಿಸ್ವಾರ್ಥ ಸೇವಾಂಕ್ಷಿಗಳಾಗಿದ್ದಾರೆ. ಅವರ ನಿಷ್ಕಲಂಕ ಸೇವೆ ಬರೇ ರಾಷ್ಟ್ರಕ್ಕೆ ಮಾತ್ರವಲ್ಲ ವಿಶ್ವಕ್ಕೇ ಮಾದರಿ ಎಂದು ಮಹಾರಾಷ್ಟ್ರ ರಾಜ್ಯದ ರಾಜ್ಯಪಾಲ ಚೆನ್ನಮಣೆನಿ ವಿದ್ಯಾಸಾಗರ್ ರಾವ್ ತಿಳಿಸಿದರು.
ಇಂದಿಲ್ಲಿ ಶನಿವಾರ ಅಂಧೇರಿ ಪೂರ್ವದ ಹೊಟೇಲ್ ಕೊಹಿನೂರು ಕಾಂಟಿನೆಂಟಲ್ನ ಸಭಾಗೃಹದಲ್ಲಿ ಕ್ರಿಶ್ಚನ್ ಛೇಂಬರ್ ಆಫ್ ಕಾಮಸರ್್ ಎಂಡ್ ಇಂಡಸ್ಟ್ರೀಸ್ (ಸಿಸಿಸಿಐ) ಸಂಸ್ಥೆಯ 13ನೇ ವಾರ್ಷಿಕ ಮಹಾಸಭೆ, ಸ್ನೇಹ ಮಿಲನ ಮತ್ತು ವಾರ್ಷಿಕ ಪುರಸ್ಕಾರ ಪ್ರದಾನ ಸಮಾರಂಭದಲ್ಲಿ ಪ್ರಧಾನ ಅಭ್ಯಾಗತರಾಗಿ ಉಪಸ್ಥಿತರಿದ್ದು ರಾಜ್ಯಪಾಲ ವಿದ್ಯಾಸಾಗರ್ ನುಡಿದರು.
ಸಿಸಿಸಿಐನ ಕಾರ್ಯಾಧ್ಯಕ್ಷ ಹೆನ್ರಿ ಲೋಬೊ ಅಧ್ಯಕ್ಷತೆಯಲ್ಲಿ ಜರುಗಿಸಲಾದ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಅಮರಾವತಿ ಧರ್ಮ ಪ್ರಾಂತ್ಯದ ಬಿಷಪ್ ರೈ| ರೆ| ಎಲಿಯಸ್ ಗೋನ್ಸಾಲ್ವಿಸ್ ಉಪಸ್ಥಿತರಿದ್ದು ಅನುಗ್ರಹಿಸಿದರು.
ಪುರಸ್ಕಾರ ಪ್ರಾಯೋಜಕರನ್ನೊಳಗೊಂಡು ರಾಜ್ಯಪಾಲ ವಿದ್ಯಾಸಾಗರ್ ಅವರು ಸಿಸಿಸಿಐ 2014ರ ಸಾಲಿನ ಉತ್ಕೃಷ್ಟ ಸಾಧಕ ಉದ್ಯಮಿ ಪುರಸ್ಕಾರವನ್ನು ಪ್ರಕಾಶ್ ಪಿರೇರಾ (ಸಮಾಜ ಸೇವಾ ಪುರಸ್ಕಾರ), ರೆ| ಫಾ| ಡಾ| ಫ್ರಾನ್ಸಿಸ್ ಸ್ವಾಮಿ (ಉತ್ಕೃಷ್ಟ ಶೈಕ್ಷಣಿಕ ಸಾಧನಾ ಪುರಸ್ಕಾರ), ಥೋಮಸ್ ಸಿ.ಬೆಂಜಮಿನ್ (ಸಾರ್ವಜನಿಕ ಸೇವಾ ಪುರಸ್ಕಾರ), ಶ್ರೀಮತಿ ಜಾನೇಟ್ ಲಾರೇನ್ಸ್ ಡಿ’ಸೋಜಾ (ಸಾರ್ವಜನಿಕ ಸೇವಾ ಪುರಸ್ಕಾರ), ಶ್ರೀಮತಿ ಮರ್ಜೋರಿ ಅರನ್ಹಾ ಟೆಕ್ಸೆಯಿರಾ (ಮಹಿಳಾ ಉದ್ಯಮಿ ಸಾಧಕ ಪುರಸ್ಕಾರ) ಮತ್ತು ವಾಲ್ಟರ್ ಡಿ’ಸೋಜಾ ನಂದಳಿಕೆ (ಯುವ ಉದ್ಯಮಿ ಸಾಧಕ ಪುರಸ್ಕಾರ) ಪ್ರದಾನಿಸಿ ಪುರಸ್ಕೃತರನ್ನು ಅಭಿನಂದಿಸಿದರು. ಡಾ| ರಿಚಾರ್ಡ್ ಪಿರೇರಾ ಪುರಸ್ಕೃತರನ್ನು ಪರಿಚಯಿಸಿ ಅಭಿನಂದಿಸಿದರು.
ಬಿಷಪ್ ಗೋನ್ಸಾಲ್ವಿಸ್ ಅನುಗ್ರಹ ನುಡಿಗಳನ್ನಾಡಿ ಎಂದೂ ಸಫಲವಾದ ಜೀವನಕ್ಕಿಂತ ಅರ್ಥಪೂರ್ಣ ಬದುಕು ಮಹತ್ತರದ್ದಗುತ್ತದೆ. ಅವಾಗಲೇ ತಾತ್ಪರ್ಯಭರಿತ ಬಾಳು ಸಾಧಕಭರಿತವಾಗುತ್ತದೆ. ಇಂತಹ ಪುರಸ್ಕಾರ ಪ್ರದಾನ ಕಾರ್ಯಕ್ರಮಗಳು ಸಾಧಕರಿಗೆ ಉತ್ತೇಜನವಾಗುತ್ತವೆ. ಸಂಘರ್ಷದಿಂದ ಎಲ್ಲವೂ ಅವನತಿಯಾಗುತ್ತಿದು ಸಾಮರಸ್ಯದ ಸೇವೆಯಿಂದ ಮಾತ್ರ ಉನ್ನತಿ ಸಾಧ್ಯ. ಇದಕ್ಕೆಲ್ಲಾ ಹೃದಯವಂತಿಕೆಯ ಬದುಕು ಅತ್ಯವಶ್ಯ ಎಂದು ಹಿತನುಡಿ ಗಳನ್ನಾಡಿದರು.
ನನ್ನ ಕಾಲಾವಧಿಯಲ್ಲಿ ಸಂಸ್ಥೆಯ ಉನ್ನತಿಗೆ ಶ್ರಮಿಸಿದ ಸರ್ವರಿಗೂ ಋಣಿಯಾಗಿದ್ದು ಭವಿಷ್ಯತ್ತಿನ್ನುದ್ದಕ್ಕೂ ಈ ಸಂಸ್ಥೆಯ ಉನ್ನತಿಗಾಗಿ ಶ್ರಮಿಸುವೆ. ಸಂಸ್ಥೆಯ ಇಷ್ಟೊಂದು ಜವಾಬ್ದಾರಿಯ ಹೊಣೆಯನ್ನೀಡಿ ನನ್ನನ್ನೂ ಪ್ರತಿಷ್ಠೆಯನ್ನೂ ಬೆಳೆಸಿದ ಸಿಸಿಸಿಐಗೆ ನಾನೂ ಸದಾ ಬದ್ಧವಾಗಿರುವೆ ಎಂದು ಕಾರ್ಯಾಧ್ಯಕ್ಷ ಹೆನ್ರಿ ಲೋಬೊ ಎಂದರು. ಬಳಿಕ ನೂತನ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಅವರಿಗೆ ಅಧಿಕಾರ ಹಸ್ತಾಂತರಿಸಿ ಶುಭಾರೈಸಿದರು. ಹಾಗೂ ತನ್ನ ಕಾರ್ಯಾವಧಿಯಲ್ಲಿ ಸಹಕರಿಸಿದ ಸರ್ವರ ಅಭಾರ ಮನ್ನಿಸಿದರು.
ನೂತನ ಕಾರ್ಯಾಧ್ಯಕ್ಷ ಆ್ಯಂಟನಿ ಸಿಕ್ವೇರಾ ಮಾತನಾಡಿ ಕನಸುಗಳನ್ನು ನನಸಾಗಿಸುವ ಪ್ರಯತ್ನವೇ ನನ್ನ ಮುಖ್ಯ ಉದ್ದೇಶವಾಗಿದ್ದು, ಅದಕ್ಕಾಗಿನ ಅರಿವು ಮೂಡಿಸುವ ಕಾಯಕಕ್ಕೆ ಒತ್ತು ನೀಡುವೆ. ಸದಸ್ಯರಿಗೆ ಹೆಚ್ಚಿನ ಅವಕಾಶಗಳನ್ನು ಸೃಜಿಸುತ್ತಾ ಉದ್ಯಮದ ಜಾಗೃತಿ ತರುತ್ತಾ ಯುವಜನತೆಯಲ್ಲಿ ಆಸಕ್ತಿ ಹುಟ್ಟಿಸುವ ದಿಟ್ಟಹೆಜ್ಜೆಗಳನ್ನಿತ್ತು ಸಂಸ್ಥೆಯನ್ನು ಜಾಗತಿಕವಾಗಿ ಬೆಳೆಸುವ ಪ್ರಯತ್ನ ಮಾಡುವುದಾಗಿ ಆಶಯ ವ್ಯಕ್ತ ಪಡಿಸಿದರು.
ಸಿಸಿಸಿಐ ಸಂಸ್ಥಾಪಕ ಕಾರ್ಯಾಧ್ಯಕ್ಷ ವಿನ್ಸೆಂಟ್ ಮಥಾಯಸ್, ಸಿಸಿಸಿಐ ಪುರಸ್ಕಾರ ಸಮಿತಿ ಸಂಚಾಲಕ ಜಾನ್ ಡಿ’ಸಿಲ್ವಾ, ಉಪ ಕಾರ್ಯಾಧ್ಯಕ್ಷ ಆಲ್ಬರ್ಟ್ ಡಬ್ಲ್ಯೂ.ಡಿ’ಸೋಜಾ, ನಿರ್ದೇಶಕ ಜೋನ್ ಮಾಥ್ಯು ವೇದಿಕೆಯಲ್ಲಿ ಆಸೀನರಾಗಿದ್ದು, ಪುರಸ್ಕೃತರು ಸಂದರ್ಭೊ ಚಿತವಾಗಿ ಮಾತನಾಡಿ ಕ್ರೈಸ್ತ ಸಮುದಾಯದ ಪ್ರತಿಷ್ಠಿತ ಗೌರವ ಪ್ರದಾನಿಸಿ ಉತ್ತರಿಸುತ್ತಾ ಸಿಸಿಸಿಐ ಸಂಸ್ಥೆಯ ಕಾರ್ಯವೈಖರಿಯನ್ನು ಪ್ರಶಂಸಿಸಿ ಶುಭಾರೈಸಿದರು.
ಸಮಾರಂಭದಲ್ಲಿ ರಾಯನ್ ಅಂತರಾಷ್ಟ್ರೀಯ ಶೈಕ್ಷಣಿಕ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕಿ ಗ್ರೇಸ್ ಪಿಂಟೊ. ಕಥೋಲಿಕ್ ಸಭಾ ಮುಂಬಯಿ ಅಧ್ಯಕ್ಷ ಗೋರ್ಡನ್ ಡಿ’ಸೋಜಾ, ಉಪಾಧ್ಯಕ್ಷ ಲಾರೇನ್ಸ್ ರೋನಿ ಡಿ’ಸೋಜಾ, ಸೇರಿದಂತೆ ಸಿಸಿಸಿಐ ನಿರ್ದೇಶಕರುಗಳಾದ ಲಾರೆನ್ಸ್ ಕುವೆಲ್ಲೊ, ಜಾನ್ ಮಥೇವ್, ನ್ಯಾ| ಪಿಯುಸ್ ವಾಜ್, ವಾಲ್ಟರ್ ಬುಥೆಲ್ಲೋ, ಗ್ರೆಗೋರಿ ಡಿ’ಸೋಜಾ ಹಾಗೂ ವಿವಿಧ ಉಪ ಸಮಿತಿಗಳ ಸಂಚಾಲಕರುಗಳು ಸೇರಿದಂತೆ ಇತರ ಪದಾಧಿಕಾರಿಗಳು ಮತ್ತು ಬಹುತೇಕ ಸದಸ್ಯರು ಹಾಜರಿದ್ದರು.
ಪ್ರಶಸ್ತಿ ಸಮಾರಂಭದ ಆದಿಯಲ್ಲಿ ಸಿಸಿಸಿಐಯ ಹದಿಮೂರನೇ ವಾರ್ಷಿಕ ಮಹಾಸಭೆಯು ಕಾರ್ಯಾಧ್ಯಕ್ಷ ಹೆನ್ರಿ ಲೋಬೊ ಅವರ ಅಧ್ಯಕ್ಷತೆಯಲ್ಲಿ ಜರುಗಿತು. ಸಿಸಿಸಿಐ ಕಾರ್ಯನಿರತ ಕಾರ್ಯದರ್ಶಿ ಫೆಲಿಕ್ಸ್ ಡಿ’ಸೋಜಾ ವಾರ್ಷಿಕ ಚಟುವಟಿಕೆಗಳ ಮಾಹಿತಿಯನ್ನಿತ್ತರು. ಫಿಲೋಮೆನಾ ಹೆಚ್.ಲೋಬೊ ಮತ್ತು ಪ್ರಮೀಳಾ ವಿ.ಮಥಾಯಸ್ ಅತಿಥಿಗಳಿಗೆ ಪುಷ್ಫಗುಪ್ಚಗಳನ್ನಿತ್ತು ಗೌರವಿಸಿದರು. ಕೆನಿತ್ ಸಿಕ್ವೇರಾ ಮತ್ತು ಪಾಯಲ್ ಮಥಾಯಸ್ ಕಾರ್ಯಕ್ರಮ ನಿರೂಪಿಸಿದರು. ಆಗ್ನೇಲ್ಲೋ ರಾಜೇಶ್ ಅಥೈಡೆ ವಂದಿಸಿದರು.
ಚಿತ್ರ ವರದಿ : ರೊನ್ಸ್ ಬಂಟ್ವಾಳ್











