ಬಂಟ್ವಾಳ; ಬಿ.ಸಿ.ರೋಡು-ಅಡ್ಡಹೊಳೆ ಚತುಷ್ಪಥ ಹೆದ್ದಾರಿಗೆ ಕಲ್ಲಡ್ಕ ಪೇಟೆಯನ್ನು ಬಲಿತೆಗೆದುಕೊಳ್ಳಬೇಡಿ, ಬೈಪಾಸ್ ರಸ್ತೆ ನಿರ್ಮಿಸಿ ಎಂದು ಆಗ್ರಹಿಸಿ ಹೆದ್ದಾರಿ ಸಂತ್ರಸ್ತರ ಹೋರಾಟ ಸಮಿತಿ ದ.ಕ.ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ರವರನ್ನು ಆಗ್ರಹಿಸುವ ಮೂಲಕ ಹೋರಾಟದ ಬಿಸಿಯನ್ನು ಈ ಮೂಲಕ ಮುಟ್ಟಿಸಿದ್ದಾರೆ.

IMG-20151020-WA0038
ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿದ ಕಾರ್ಯಕಾರಿ ಸಮಿತಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಹಾಗೂ ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಶೆಣೈ ಹಾಗೂ ಪದಾಧಿಕಾರಿಗಳ ನಿಯೋಗ ಕಲ್ಲಡ್ಕ ಪೇಟೆಯ ಹೆದ್ದಾರಿಯನ್ನೇ ಅಗಲೀಕರಣಗೊಳಿಸಿದರೆ ಆಗುವ ಅಪಾಯಗಳನ್ನು ಜಿಲ್ಲಾಧಿಕಾರಿಯವರಿಗೆ ಮನವರಿಕೆ ಮಾಡಿತು. ಈ ನಿಟ್ಟನಲ್ಲಿ ಹೆದ್ದಾರಿಗೆ ಶಾಶ್ವತ ಯೋಜನೆ ಒದಗಿಸುವ ನಿಟ್ಟಿನಲ್ಲಿ ಬೋಳಂಗಡಿಯಿಂದ ಆರಂಭಗೊಂಡು ಮಾಣಿಯ ಅಳಿರದಲ್ಲಿ ಈಗಿನ ಹೆದ್ದಾರಿಯನ್ನು ಸಂಪರ್ಕಿಸುವ ಬೈಪಾಸ್ ನಿರ್ಮಾಣವಾದಲ್ಲಿ ಜನವಸತಿ ಪ್ರದೇಶಗಳಿಗೆ ಕಡಿಮೆ ಹಾನಿ ಸಾಧ್ಯ, ಇಲ್ಲವಾದಲ್ಲಿ ಕಲ್ಲಡ್ಕ ಪೇಟೆಯ ಅಸ್ತಿತ್ವವೇ ಇಲ್ಲವಾಗುತ್ತದೆ,ನೂರಾರು ಕುಟುಂಬಗಳು ಬೀದಿಪಾಲಾಗುವ ಅಪಾಯವಿದೆ ಎಂಬುದನ್ನು ನಿಯೋಗದಲ್ಲಿದ್ದ ಸದಸ್ಯರು ಜಿಲ್ಲಾಧಿಕಾರಿಯವರ ಗಮನ ಸೆಳೆದರು.
ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಯವರು, ಹೆದ್ದಾರಿ ರಸ್ತೆಗೆ ಪೇಟೆ ಹೊರತಾದ ಬೈಪಾಸ್ ರಸ್ತೆ ಭವಿಷ್ಯದ ದೃಷ್ಟಿಯಲ್ಲಿ ಹೆಚ್ಚು ಅನುಕೂಲಕರ. ಆದರೆ ಹೆದ್ದಾರಿ ಪ್ರಾಧಿಕಾರ ಈಗಿನ ಹೆದ್ದಾರಿಯಲ್ಲೇ ಚತುಷ್ಪಥ ನಿರ್ಮಿಸುವ ನಿಟ್ಟಿನಲ್ಲಿ ಅಧಿಸೂಚನೆ ಹೊರಡಿಸಿದೆ. ಹಾನಿ ತಪ್ಪಿಸಲು ಬೈಪಾಸ್ ನಿರ್ಮಾಣಕ್ಕೆ ಸದ್ರಿ ಗ್ರಾಮಗಳ ಜನರ ವಿರೋಧ ಇಲ್ಲದೇ ಇದ್ದಲ್ಲಿ ಈ ಬಗೆಯ ಪ್ರಕ್ರಿಯೆ ಮುಂದುವರಿಸಬಹುದು ಎಂದರು. ಕಲ್ಲಡ್ಕ ಪೇಟೆಯ ಜೊತೆಗೆ ಮಾಣಿ ಪೇಟೆಯ ಉಳಿವಿಗೂ ಚಿಂತನೆ ನಡೆಸಬಹುದಾಗಿದ್ದು, ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳ ಗಮನಸೆಳೆಯುವುದಾಗಿ ತಿಳಿಸಿದರು. ಹೋರಾಟ ಸಮಿತಿ ನೀಡಿದ ಬೈಪಾಸ್ ರಸ್ತೆಯ ನಕ್ಷೆಯನ್ನು ಪರಿಶೀಲಿಸಿದ ಜಿಲ್ಲಾಧಿಕಾರಿಯವರು , ಈ ಕೂಡಲೆ ಸ್ಥಳಪರಿಶೀಲನೆ ನಡೆಸಿ ವರದಿ ಒಪ್ಪಿಸುವಂತೆ ಅವರು ಸಹಾಯಕ ಆಯುಕ್ತ ಅಶೋಕ್ ಅವರಿಗೆ ಸ್ಥಳದಲ್ಲಿಯೇ ನಿರ್ದೇಶನ ನೀಡಿದರು.
ತಾ.ಪಂ.ಸದಸ್ಯ ದಿನೇಶ್ ಅಮ್ಟೂರು, ಹೋರಾಟ ಸಮಿತಿಯ ಪ್ರಮುಖರಾದ ಕುಂಞಿ ಅಹಮದ್, ಸ್ಟೇನಿ ಸ್ಲಾವ್ಸ್ ಡಿ.ಸೋಜ, ತಿರುಮಲೇಶ್ವರ ಭಟ್, ಶಿವಶಂಕರ್ ಭಟ್, ಝಕಾರಿಯಾ, ಮೋಹನ್ ಪಿ.ಎಸ್, ರಫೀಕ್, ಸೂರಜ್ ಹುಸೈನ್, ಫವಾಝ್, ರಾಕ್ಲೈನ್ ಸುಂದರ್, ಕೂಸಪ್ಪ ಮೊದಲಾದವರು ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *