ಬಂಟ್ವಾಳ: ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಸಂಸದ ನಳೀನ್ ಕುಮಾರ್ ಕಟೀಲು ನೇತೃತ್ವದ ಬೃಹತ್ ಕಾಲ್ನಡಿಗೆಯ ಜಾಥ ಎರಡನೇಯ ದಿನಕ್ಕೆ ಕಾಲಿಟ್ಟಿದ್ದು, ಸಾವಿರಾಋಉ ಮಂದಿಯ ಪಾಲ್ಗೊಳ್ಳುವಿಕೆಯೊಂದಿಗೆ ಜಾಥಾ ಆಂದೋಲನದ ರೂಪ ಪಡೆದುಕೊಂಡಿದೆ. ಭಾನುವಾರ ಬೆಳಿಗ್ಗೆ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಳದ ಮುಂಬಾಗದಿಂದ ವಂದೇ ಮಾತರಂ ಹಾಡಿನೊಂದಿಗೆ ಪಾದಯಾತ್ರೆ ಆರಂಭಗೊಂಡಿತು.


ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್, ಪಕ್ಷದ ಮುಖಂಡರಾದ ರುಕ್ಮಯ ಪೂಜಾರಿ, ರಾಜೇಶ್ ನಾಕ್ ಉಳಿಪಾಡಿಗುತ್ತು, ಮೋನಪ್ಪ ಭಂಡಾರಿ, ಗಣೇಶ್ ಕಾರ್ಣಿಕ್, ಕೃಷ್ಣ ಜೆ.ಪಾಲೆಮಾರ್, ಪದ್ಮನಾಭ ಕೊಟ್ಟಾರಿ, ಸುಲೋಚನಾ ಭಟ್, ಜಿ.ಆನಂದ, ದೇವದಾಸ ಶೆಟ್ಟಿ, ರಾಮದಾಸ ಬಂಟ್ವಾಳ, ಸಂಜೀವ ಮಠಂದೂರು, , ಅಬ್ದುಲ್ ರಝಾಕ್, ಅಬೂಬಕ್ಕರ್, ದಿನೇಶ್ ಭಂಡಾರಿ, , ನಳಿನಿ ಶೆಟ್ಟಿ, ತುಂಗಪ್ಪ ಬಂಗೇರ, ಆನಂದ ಶಂಭೂರು, ದಿನೆಶ್ ಅಮ್ಟೂರು, ಯಶವಂತ ಡಿ, ಗೋವಿಂದ ಪ್ರಭು, ಕೃಷ್ಣಪ್ಪ ಪೂಜಾರಿ, ಪುರುಷ ಸಾಲ್ಯಾನ್ ನೆತ್ತರಕೆರೆ, ಶೈಲಜಾ ಭಟ್, ಡಾ. ಭರತ್ ಶೆಟ್ಟಿ ಭಾಗವಹಿಸಿದ್ದರು. ಎ.ಜೆ.ಆಸ್ಪತ್ರೆಯ ವೈದ್ಯ ಡಾ. ಪ್ರಶಾಂತ್ ಮಾರ್ಲ ನೇತೃತ್ವದ ವೈದ್ಯರ ತಂಡ, ವಕೀಲರ ತಂಡ ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು.
ಡಾ.ಪ್ರಭಾಕರ ಭಟ್ ಸಾಥ್:
ಕಾಲ್ನಡಿಗೆ ಯಾತ್ರೆ ರಾಷ್ಟ್ರೀಯ ಹೆದ್ದಾರಿ ತಲುಪುತ್ತಿದ್ದಂತೆಯೇ ಆರ್ ಎಸ್ಎಸ್ ಮುಖಂಡ ಡಾ. ಪ್ರಭಾಕರ ಭಟ್ ಹಾಗೂ ಪತ್ನಿ ಡಾ.ಕಮಲಾ ಪ್ರಭಾಕರ ಭಟ್ ಪಾದಯಾತ್ರೆಯಲ್ಲಿ ಸೇರಿಕೊಂಡರು. ಈ ಸಂದರ್ಭ ಸಂಸದ ನಳಿನ್ ಕುಮಾರ್ ಕಟೀಲು ಡಾ. ಭಟ್ ಅವರಿಗೆ ಶಿರಭಾಗಿ ಆಶೀರ್ವಾದ ಪಡೆದುಕೊಂಡರು. ಬೊಳಿಯಾರ್ನಿಂದ ಹೊರಟಿದ್ದ ಜಿ.ಪಂ.ಸದಸ್ಯ ಸಂತೋಷ್ ಕುಮಾರ್ ರೈ ಅವರ ನೇತೃವದ ತಂಡ ಮೆಲ್ಕಾರ್ನಲ್ಲಿ ಸೇರಿಕೊಂಡಿತು. ಕಲ್ಲಡ್ಕದಲ್ಲಿ ಶ್ರೀ ಈಶ ವಿಠಲದಾಸ ಸ್ವಾಮೀಜಿ ಹಾಗೂ ಸೂರಿಕುಮೇರುವಿನಲ್ಲಿ ಆದಿ ಚುಂಚನಗಿರಿ ಮಠದ ಧರ್ಮಪಾಲನಾಥ ಸ್ವಾಮೀಜಿ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದರು.
ಕುಮಾರಧಾರ -ನೇತ್ರಾವತಿ ಸಂಗಮ..!
ಮಂಗಳೂರು, ಬಂಟ್ವಾಳ ಹಾಗೂ ಮುಡಿಪು ಸೇರಿದಂತೆ ಜಿಲ್ಲೆಯ ಹಲವೆಡೆಗಳಿಂದ ಬಂದ ನೂರಾರು ಬಿಜೆಪಿ ಕಾರ್ಯಕರ್ತರ ದಂಡು ಮಾಣಿ ಗೆ ಬರುತ್ತಿದ್ದಂತೆಯೇ ಪುತ್ತೂರಿನಿಂದ ಬಂದ ಬಿಜೆಪಿ ಕಾರ್ಯಕರ್ತರ ದಂಡು ಜಾಥಾ ತಂಡವನ್ನು ಸೇರಿಕೊಂಡಿತು. ಇದು ನೇತ್ರಾವತಿ- ಕುಮಾರಧಾರ ಸಂಗಮವೆಂದು ಕೆಲವರು ಕರೆದಿದ್ದು, ಆ ಬಳಿಕ ಹೊಸ ರೂಪಡೆದುಕೊಂಡ ಜಾಥಾ ತಂಡ ಬುಡೋಳಿಯತ್ತ ಹೆಜ್ಜೆ ಹಾಕಿತು. ಅಲ್ಲಿ ಅಪರಾಹ್ನದ ಭೋಜನ ಮುಗಿಸಿ ಬಳಿಕ ಉಪ್ಪಿನಂಗಡಿಯತ್ತ ತೆರಳಿತು.
ಕಾಲ್ನಡಿಗೆ ಜಾಥಾ ಸಾಗಿಬರುತ್ತಿದ್ದಂತೆಯೇ ಆಯಾ ಊರುಗಳಲ್ಲಿ ಜಾಥಾವನ್ನು ಸ್ವಾಗತಿಸುವ ದೃಶ್ಯ ಅಲ್ಲಲ್ಲಿ ಕಂಡು ಬಂತು. ಸಂಸದ ನಳಿನ್ ಕುಮಾರ್ ಹಾಗೂ ಸ್ವಾಮೀಜಿಯವರಿಗೆ ಹಾರ ಹಾಕಿ, ಆರತಿ ಬೆಳಗಿ ಕುಂಕುಮ ತಿಲಕವನ್ನಿಡುತ್ತಿದ್ದ ದೃಶ್ಯ ಅಲ್ಲಲ್ಲಿ ಕಂಡು ಬಂತು.
ಕೇಳಿಬರುತ್ತಿದ್ದ ನೇತ್ರಾವತಿಯ ಜಾಗೃಥಿ ಗೀತೆಗಳು, ಚೆಂಡೆ ಹಾಗೂ ನಾಸಿಕ್ ಬ್ಯಾಂಡ್ ನ ಅಬ್ಬರ, ಅಲ್ಲಲ್ಲಿ ಸಿಡಿಮದ್ದಿನ ಆರ್ಭಟ ಕಂಡು ಬರುತ್ತಿತ್ತು.
ಇದಕ್ಕೂ ಮೊದಲು ಬಿ.ಸಿ.ರೋಡಿನ ಗೀತಾಂಜಲಿ ಸಭಾಂಗಣದಲ್ಲಿ ಲೋಕನಾಯಕ ಜಯಪ್ರಕಾಶ್ ನಾರಾಯಣ್ ಅವರ 113ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು. ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ ಸಿಂಹ ನಾಯಕ್ ಸಭೆಯನ್ನುದ್ದೇಶಿ ಮಾತನಾಡಿದರು. ಪಕ್ಷದ ಪ್ರಮುಖರು ಹಾಜರಿದ್ದರು.
ಚಿತ್ರ:ಕಿಶೋರ್ ಪೆರಾಜೆ.



