- ರೇಷ್ಮೆ ಆಮದಿನಿಂದಾಗಿ ರೇಷ್ಮೆ ಬೆಲೆಯಲ್ಲಿ ಕುಸಿತವಾಗಿದೆ. ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಗಳಿಗೆ ಪರಿಹಾರ ನೀಡಲಾಗುತ್ತಿದೆ. ಕಬ್ಬು ಅರೆಯುವಿಕೆಯಲ್ಲಿಯೂ ವಿಳಂಬವಾಗಿದೆ. ಕಬ್ಬಿಗೆ ಎಫ್ಆರ್ಪಿ ದರ ವಿಚಾರದಲ್ಲಿ ಕಾರ್ಖಾನೆಗಳು ಹಿಂದೇಟು ಹಾಕುತ್ತಿವೆ. ಜತೆಗೆ, ಬಿಪಿಎಲ್ ಕಾರ್ಡ್ ಹೊಂದಿರುವ ರೈತರನ್ನು ಸಹಕಾರ ಬ್ಯಾಂಕ್ ಸದಸ್ಯತ್ವ ಶುಲ್ಕವನ್ನು ಸರ್ಕಾರವೇ ಭರಿಸಲಿದೆ ಎಂದು ತಿಳಿಸಿದರು.
- ರಾಜ್ಯದಲ್ಲಿ 516 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಏಕಾಏಕಿ ಮಳೆ ಕೈಕೊಟ್ಟಿದ್ದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಜೂನ್ ನಂತರ ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಇದನ್ನು ತಡೆಯಲು ಹಲವಾರು ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ವಿವರಿಸಿದರು ಎಂದು ಮೂಲಗಳು ತಿಳಿಸಿವೆ.
- ಸಹಕಾರ ಬ್ಯಾಂಕುಗಳಲ್ಲಿನ ಬಡ್ಡಿ ಸಾಲ ಮನ್ನಾ ಮಾಡಲಾಗಿದೆ. ಹೊಸ ಸಾಲ ನೀಡಲು ಕ್ರಮ ಕೈಗೊಳ್ಳಲಾಗಿದೆ ಎಂದು ಸಹಕಾರ ಸಚಿವ ಎಚ್.ಎಸ್. ಮಹದೇವಪ್ರಸಾದ್ ವಿವರಿಸಿದರು.
- ರಾಜ್ಯದಲ್ಲಿ 42 ವರ್ಷದಲ್ಲಿಯೇ ಬಾರದಂತಹ ಬರ ಬಂದಿದೆ. ಕೇಂದ್ರದ ನಿಯಮಗಳ ಪ್ರಕಾರ 3.850 ಕೋಟಿ ನೀಡಬೇಕಿದೆ. ನಿಯೋಗ ತೆಗೆದುಕೊಂಡು ಹೋಗಲಾಗಿತ್ತು. ಕೇಂದ್ರ ಸರ್ಕಾರಕ್ಕೆ 16 ಸಾವಿರ ಕೋಟಿ ನೆರವು ಕೇಳಿದ್ದೇವೆ. ತಾವೂ ಈ ಬಗ್ಗೆ ಕೇಂದ್ರದ ಮೇಲೆ ಒತ್ತಡ ತರಬೇಕು ಎಂದು ಕಂದಾಯ ಸಚಿವ ವಿ. ಶ್ರೀನಿವಾಸ್ ಪ್ರಸಾದ್ ಮನವಿ ಮಾಡಿದರು.






