ಬಂಟ್ವಾಳ: ಎತ್ತಿನಹೊಳೆ ಯೋಜನೆಯ ವಿರುದ್ದ ಜನ ಬೀದಿಗಿಳೀದರೂ ಜಿಲ್ಲೆಯನ್ನು ಪ್ರತಿನಿಧಿಸುವ ರಾಜ್ಯ ಸರ್ಕಾರದ ಪ್ರತಿನಿಧಿಗಳು ಯಾಕೆ ಇನ್ನೂ ಮೌನವಾಗಿದ್ದಾರೆ, ದಕ್ಷಿಣ ಕನ್ನಡ ಜಿಲ್ಲೆಯ ಜನತೆಗೆ ಏನನ್ನು ಮುಚ್ಚಿಡುತ್ತಿದ್ದಾರೆ..? ಹೀಗೆ ಪ್ರಶ್ನೆ ಮಾಡಿದವರು ಜಿಲ್ಲಾ ಬಿಜೆಪಿ ಅಧ್ಯಕ್ಷ ಪ್ರತಾಪ ಸಿಂಹ ನಾಯಕ್.
ಎತ್ತಿನ ಹೊಳೆ ಯೋಜನೆಯನ್ನು ವಿರೋಧಿಸಿ ಮಂಗಳೂರಿನ ಕಂಕನಾಡಿ ಬ್ರಹ್ಮಬೈದರ್ಕಳ ಗರಡಿಯಿಂದ ಶನಿವಾರ ಬೆಳಗ್ಗೆ ಆರಂಭಗೊಂಡ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದ ಬೃಹತ್ ಕಾಲ್ನಡಿಗೆ ಜಾಥಾ ಸಂಜೆ ಬಿ.ಸಿ.ರೋಡಿಗೆ ತಲುಪಿದ್ದು, ಈ ಸಂದರ್ಭ ಜಾಥಾ ವಾಹನದಲ್ಲಿ ನಡೆದ ಸಭಾಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಎತ್ತಿನ ಹೊಳೆ ಯೋಜನೆ ವಿರುದ್ದ ವಿವಿಧ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆಗೆ ಬಿಜೆಪಿ ಸಂಪೂರ್ಣ ಬೆಂಬಲ ನೀಡಿದೆ, ಇದೀಗ ಪ್ರಮುಖ ಪ್ರತಿಪಕ್ಷವಾಗಿ ಬಿಜೆಪಿ ಈ ಹೋರಾಟಕ್ಕೆ ವೇದಿಕೆ ರೂಪಿಸಿದೆ ಎಂದ ಅವರು, ಇದು ಯಾವುದೇ ರಾಜಕೀಯ ಕಾರ್ಯಕ್ರಮ ಅಲ್ಲ ಎಂದರು. ಜಿಲ್ಲೆಯ ಭವಿಷ್ಯದ ಬಗ್ಗೆ ಚಿಂತಿಸುವ ನೇತ್ರಾವತಿಯ ಮಕ್ಕಳು ಈ ಹೋರಾಟದಲ್ಲಿ ಭಾಗವಹಿಸುವಂತೆ ಅವರು ಕರೆ ನೀಡಿದರು.
ಸಂಸದ ನಳಿನ್ ಕುಮಾರ್ ಕಟೀಲು, ಮಾಜಿ ಸಚಿವ ಕೃಷ್ಣ ಜೆಪಾಲೆಮಾರ್, ಮಾಜಿ ಶಾಸಕರಾದ ರುಕ್ಮಯ ಪೂಜಾರಿ, ಪದ್ಮನಾಭ ಕೊಟ್ಟಾರಿ, ಮೋನಪ್ಪ ಭಂಡಾರಿ, ರಾಜೇಶ್ ನಾಯಕ್ ಉಳಿಪಾಡಿಗುತ್ತು, ಸುಲೋಚನಾ ಭಟ್, ಸಾಮಾಜಿಕ ಕಾರ್ಯಕರ್ತ ವಾಸುದೇವ ರಾವ್ ಉಪಸ್ಥಿತರಿದ್ದರು. ಬಂಟ್ವಾಳ ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ ಸ್ವಾಗತಿಸಿ, ಜಿಲ್ಲಾ ಉಪಾಧ್ಯಕ್ಷ ದೇವದಾಸ್ ಶೆಟ್ಟಿ ನಿರೂಪಿಸಿ ವಂದಿಸಿದರು.
ಮೂಡಬಿದ್ರೆಯಲ್ಲಿ ಶುಕ್ರವಾರ ಹತ್ಯೆಗೀಡಾದ ಪ್ರಶಾಂತ್ ಹತ್ಯೆ ಪ್ರಕರಣವನ್ನು ಖಂಡಿಸಲಾಯಿತಲ್ಲದೆ, ದಾರುಣ ಸಾವಿಗೆ ಶ್ರದ್ದಾಂಜಲಿ ಅರ್ಪಿ ಸಲಾಯಿತು.
ಅಪರಾಹ್ನ ಫರಂಗಿಪೇಟೆಯಲ್ಲಿ ಭೋಜನ ಸ್ವೀಕರಿಸಿದ ಪಾದಯಾತ್ರೆಯ ತಂಡ ತುಂಬೆಯಲ್ಲಿ ಚಹವಿರಾಮ ಪಡೆದುಕೊಂಡು ಸಂಜೆ 6 ಗಂಟೆಗೆ ಬಿ.ಸಿ.ರೋಡು ಪ್ರವೇಶಿಸಿತು.
ಕೇರಳದ ಚೆಂಡೆ ಹಾಗೂ ಗೊಂಬೆಕುಣಿತದ ಮೂಲಕ ಬಿಸಿರೋಡಿನಲ್ಲಿ ಜಾಥಾ ತಂಡವನ್ನು ಸ್ವಾಗತಿಸಲಾಯಿತು












