ಕೈಕಂಬ: ಮೂಡಬಿದ್ರೆಯ ವಾರದ ಸಂತೆ ಪ್ರತೀ ಶುಕ್ರವಾರ ನಡೆಯುವುದರಿಂದ ಮೀನು ಮಾರಲೆಂದು ಮಂಗಳೂರಿನಿಂದ ಟೆಂಪೋ ವಾಹನದಲ್ಲಿ ಮಹಿಳೆಯರು ಲಗುಬಗೆಯಿಂದ ಮೂಡಬಿದ್ರೆಗೆ ತೆರಳಿದ್ದರು. ಆದರೆ ಮೂಡಬಿದ್ರೆಯಲ್ಲಿ ಪ್ರಶಾಂತ್ ಎಂಬವರ ಕೊಲೆ ನಡೆದು ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿ ಬಂದ್ ಆಗಿರುವುದರಿಂದ ಮೀನು ಮಾರುವ ಮಹಿಳೆಯರು ಗಂಜಿಮಠದಲ್ಲಿ ಮೀನು ಮಾರಾಟಕ್ಕೆ ತೊಡಗಿದ್ದಾರೆ.

ಗಂಜಿಮಠದ ರಸ್ತೆ ಬದಿಯಲ್ಲಿ ಬುಟ್ಟಿಯನ್ನು ಇಳಿಸಿ ಮಾರಾಟ ಮಾಡುತ್ತಿದ್ದಂತೆ ನೂರಾರು ಮಂದಿ ಗ್ರಾಹಕರು ಮೀನುಗಳನ್ನೆಲ್ಲಾ ಖರೀದಿಸಿ ಖಾಲಿ ಮಾಡಿದ್ದಾರೆ. ಗಂಜಿಮಠದಲ್ಲಿ ಬಿಗ್ಬ್ಯಾಗ್ ಕಂಪೆನಿ ಇರುವುದರಿಂದ ಅಲ್ಲಿನ ಉದ್ಯೋಗಿಗಳು ಉತ್ಸಾಹದಿಂದ ಮೀನು ಖರೀದಿ ಮಾಡಿದ್ದರಿಂದ ಬಡ ಮೀನುಗಾರ ಮಹಿಳೆಯರ ಮೀನುಗಳಿಗೆ ಭರ್ಜರಿ ವ್ಯಾಪಾರ ಕುದುರಿದ್ದು, ಲಗುಬಗೆಯಿಂದ ಮನೆಕಡೆಗೆ ತೆರಳಿದ್ದಾರೆ.
