ಬಂಟ್ವಾಳ: ಜಿಲ್ಲೆಯ ನೇತ್ರಾವತಿ ನದಿ ತಿರುವುಗೊಳಿಸಿ ತರಾತುರಿಯಲ್ಲಿ ಎತ್ತಿನಹೊಳೆ ಯೋಜನೆ ಕೈಗೆತ್ತಿಕೊಂಡಿರುವ ರಾಜ್ಯ ಸರ್ಕಾರ ಧೋರಣೆ ವಿರುದ್ಧ ಸಂಸದ ನಳಿನ್ ಕುಮಾರ್ ಕಟೀಲು ನೇತೃತ್ವದಲ್ಲಿ ಬಿಜೆಪಿ ವತಿಯಿಂದ ಇದೇ 10ರಿಂದ 13ರತನಕ ಮಂಗಳೂರಿನಿಂದ ಎತ್ತಿನಹೊಳೆಗೆ ಕೈಗೆತ್ತಿಕೊಂಡಿರುವ ಬೃಹತ್ ಕಾಲ್ನಡಿಗೆ ಜಾಥಾಕ್ಕೆ ಬಂಟ್ವಾಳ ತಾಲೂಕಿನಿಂದ ಸುಮಾರು ಎರಡು ಸಾವಿರ ಮಂದಿ ಪಾಲ್ಗೊಳ್ಳುವರು ಎಂದು ಕ್ಷೇತ್ರ ಬಿಜೆಪಿ ಅಧ್ಯಕ್ಷ ಜಿ.ಆನಂದ ಹೇಳಿದ್ದಾರೆ.
ಬಿ.ಸಿ.ರೋಡ್ನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಈ ಕಾಲ್ನಡಿಗೆ ಜಾಥಾದಲ್ಲಿ ಜಿಲ್ಲೆಯ ವಿವಿಧ ಸಂಘಟನೆಗಳು ಮತ್ತು ಹೋರಾಟಗಾರರು ಪಾಲ್ಗೊಳ್ಳುವರು ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡರು ಈ ಯೋಜನೆ ಸಾಧಕ-ಬಾಧಕ ಬಗ್ಗೆ ಪರಾಮರ್ಶೆ ನಡೆಸಲು ಮಾತ್ರ ಅನುದಾನ ಮೀಸಲಿಟ್ಟಿದ್ದು, ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕರ ಆಡಳಿತಕ್ಕೆ ಬಂದ ಕೂಡಲೇ ರೂ 12,916ಕೋಟಿ ಮೊತ್ತ ಮಂಜೂರುಗೊಳಿಸಿ ಕೇವಲ ಹಣ ಕೊಳ್ಳೆ ಹೊಡೆಯುವುದಕ್ಕಾಗಿ ತರಾತುರಿಯಲ್ಲಿ ಕಾಮಗಾರಿ ಕೈಗೆತ್ತಿಕೊಂಡಿದೆ.
ಇದೀಗ ಬಿಜೆಪಿ ವತಿಯಿಂದ ನಡೆಯಲಿರುವ ಕಾಲ್ನಡಿಗೆ ಜಾಥಾದಲ್ಲಿ ಜಿಲ್ಲೆಯ ವಿವಿಧ ಸ್ವಾಮೀಜಿಗಳು ಕೂಡಾ ಪಾಲ್ಗೊಳ್ಳುವರು ಎಂದು ಅವರು ತಿಳಿಸಿದರು. ಇದರಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡರು ಭಾಗವಹಿಸುವಂತೆ ಹೇಳಿಕೆ ನೀಡಿರುವ ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಪಾಲ್ಗೊಂಡರೆ ಸ್ವಾಗತಿಸುತ್ತೇವೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಬಿ.ದೇವದಾಸ ಶೆಟ್ಟಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಪಕ್ಷದ ಕಾರ್ಯದರ್ಶಿ ರಾಮದಾಸ ಬಂಟ್ವಾಳ್, ದೇವಪ್ಪ ಪೂಜಾರಿ, ಪುರಸಭೆ ಮಜಿ ಅಧ್ಯಕ್ಷ ಬಿ.ದಿನೇಶ ಭಂಡಾರಿ, ಪ್ರಮುಖರಾದ ನೇಮಿರಾಜ ರೈ, ಮಹಾಬಲ ಶೆಟ್ಟಿ, ವಿಕಾಸ್ ಪುತ್ತೂರು, ನಳಿನಿ ಬಿ.ಶೆಟ್ಟಿ, ಹರಿಶ್ಚಂದ್ರ ಪೂಜಾರಿ, ಗಣೇಶ ರೈ ಮತ್ತಿತರರು ಇದ್ದರು.

By Suddi9

Leave a Reply

Your email address will not be published. Required fields are marked *