ಮುಂಬಯಿ: ಮುಂಬಯಿ ಪುಣೆ ಹೈವೇಯ ರಾಯಗಾಢ್ ಜಿಲ್ಲೆಯ ಖಪೋಲಿಯಲ್ಲಿ ಇಂದಿಲ್ಲಿ ಬುಧವಾರ ಬೆಳಿಗ್ಗೆ ಸಂಭವಿಸಿದ ಎರಡು ಬಸ್ಸುಗಳ ಡಿಕ್ಕಿಯಲ್ಲಿ ಇಬ್ಬರು ವಿಧಿವಶರಾಗಿದ್ದು ಹತ್ತಾರು ಜನರು ಗಾಯಗೊಂಡಿದ್ದಾರೆ.


ಪುಣೆ ಲೋನಾವಲ ಮಾರ್ಗವಾಗಿ ಮುಂಬಯಿಗೆ ಆಗಮಿಸುತ್ತಿರುವ ಮಹಾರಾಷ್ಟ್ರ ರಾಜ್ಯ ರಸ್ತೆ ಸಾರಿಗೆಯ ಶಿವನೆರಿ ನಾಮಾಂಕಿತ ಬಸ್ಸು ಖಪೋಲಿ ಘಾಟಿಯಲ್ಲಿ ಇಳಿಯುತ್ತಿದ್ದಂತೆಯೇ ಬಸ್ಸಿನ ಏಕ್ಸಿಲ್ ತುಂಡಾಗಿ ರಾಜರಸ್ತೆಯ ವಿಭಾಜಕವನ್ನೇ ಮುರಿದು ಗುಜರಾತ್‍ನ ಆಹ್ಮದಬಾದ್‍ನಿಂದ ಪುಣೆ ಕಡೆಗೆ ಸಾಗುತ್ತಿದ್ದ ಜೀ ಜೈ ಟ್ರಾವೆಲ್ಸ್‍ಗೆ ಸೇರಿದ ಬಸ್ಸಿಗೆ ಏಕಾಏಕಿ ಢಿಕ್ಕಿ ಹೊಡೆದು ಅಪಘಾತ ಸಂಭವಿಸಿತ್ತು ಎನ್ನಲಾಗಿದೆ. ನಂತರ ಶಿವನೆರಿ ಬಸ್ಸು ಸುಮಾರು ಇನ್ನೂರು ಅಡಿಗಳಷ್ಟು ವಿರುದ್ಧ ದಿಕ್ಕಿನಲ್ಲೇ ಸಾಗಿ ರಸ್ತೆಯ ಚರಂಡಿಗೆ ಧುಮುಕಿ ಬಂಡೆಕಲ್ಲಿಗೆ ಬಡಿದು ನಿಂತಿತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಘಟನೆಯಲ್ಲಿ ಜೀ ಜೈ ಬಸ್ಸಿನಲ್ಲಿ ಪುಣೆಗೆ ಸಾಗುತ್ತಿದ್ದ ದಂಪತಿಯಲ್ಲಿ ಪತ್ನಿಯು ಗಂಭೀರವಾಗಿ ಗಾಯಗೊಂಡು ಜೀವನ್ಮರಣದಲ್ಲಿ ಹೋರಾಡುತ್ತಿದ್ದಂತೆ ಪತಿಯು ತನ್ನ ಮೇಲಿನ ಗಾಯಗಳನ್ನು ಲೆಕ್ಕಿಸದೆ ಪತ್ನಿಯ ನೋವನ್ನು ತಾಳಲಾಗದೆ ಬೊಬ್ಬಿಡುತ್ತಿದ್ದ ಘಟನೆ ಹೃದಯ ವಿದ್ರಾವಕವಾಗಿ ಎಲ್ಲರನ್ನೂ ಘಾಸಿಗೊಳಿಸುವಂತಿತ್ತು. ಖಪೋಲಿ ಲಕ್ಮೀನಗರ್ ಪೋಲಿಸರು ಸ್ಥಳಕ್ಕಾಗಮಿಸಿ ಕೇಸು ದಾಖಲಿಸಿ ಮುಂದಿನ ತನಿಖೆ ನಡೆಸುತ್ತಿದ್ದಾರೆ.









