ಕಿನ್ನಿಗೋಳಿ: ಕಿನ್ನಿಗೋಳಿ ಸಮೀಪದ ಬಲ್ಲಣ ಬಳಿಯ ಮಾರ್ಷಲ್ ಡಿ’ಸೋಜ ಅವರ ಮನೆಯ ಜಾಗದ ಸುಮಾರು 40 ಅಡಿ ಆಳದ ಸರಿಯಾದ ಆವರಣದ ಇಲ್ಲದ ಬಾವಿಗೆ ದನ ಬಿದ್ದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.

ಲೂಕಸ್ ಸಲ್ಡಾನ ಅವರ ಮೇಯಲು ಬಿಟ್ಟ 5 ತಿಂಗಳ ಗಬ್ಬದ ದನ ಇಂದು ಬೆಳಿಗ್ಗೆ ಮಾರ್ಷಲ್ ಡಿಸೋಜ ಅವರ ಬಾವಿಗೆ ಬಿದ್ದಿತ್ತು. ಈ ಬಗ್ಗೆ ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಲಾಗಿತ್ತು. ಆದರೆ ಆ ವೇಳೆಗಾಗಲೆ ಸ್ಥಳೀಯ ಯುವಕರು ಮತ್ತು ಕಿನ್ನಿಗೋಳಿ ಮೆಸ್ಕಾಂ ಇಲಾಖಾ ಸಿಬಂದಿ ದನ ಮುಳುಗುವುದನ್ನು ತಡೆಗಟ್ಟಲು ಹಗ್ಗದ ಸಹಾಯದಿಂದ ಕಟ್ಟಿ ಅರ್ಧ ಗಂಟೆಯ ತನಕ ಶ್ರಮ ಪಟ್ಟು ದನವನ್ನು ಹಿಡಿದಿಟ್ಟಿದ್ದರು. ಆದರೆ ಸ್ವಲ್ಪ ಸಮಯದ ತರುವಾಯ ಅಲ್ಲಿ ಆಗಮಿಸಿದ ಅಗ್ನಿಶಾಮಕ ದಳದವರು ದನ ಮೇಲಕ್ಕೆ ಎತ್ತಿದ್ದಾರೆ. ಐದು ತಿಂಗಳ ಗಬ್ಬದ ದನ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದೆ.


