ಉಳ್ಳಾಲ: ಪಾದಚಾರಿ ವಿದ್ಯಾರ್ಥಿಗೆ ಮೀನಿನ ಲಾರಿ ಡಿಕ್ಕಿ ಹೊಡೆದು ಕಾಲಿಗೆ ಗಂಭೀರ ಗಾಯಗೊಂಡಿರುವ ಘಟನೆ ಉಳ್ಳಾಲ ಠಾಣಾ ವ್ಯಾಪ್ತಿಯ ಬೀರಿ ಎಂಬಲ್ಲಿ ಬುಧವಾರ ಬೆಳಿಗ್ಗೆ ನಡೆದಿದೆ.
ಮಾಡೂರು ವೈದ್ಯನಾಥ ರಸ್ತೆ ಸಮೀಪದ ಕೊಂಡಾಣ ದ್ವಾರ ನಿವಾಸಿ ರಮೇಶ್ ಎಂಬವರ ಪುತ್ರ ಧನುಷ್ (13) ಗಾಯಾಳು. ಕೋಟೆಕಾರು ಸ್ಟೆಲ್ಲಾ ಮೇರೀಸ್ ಶಾಲೆಯಲ್ಲಿ ಏಳನೇ ತರಗತಿ ಕಲಿಯುತ್ತಿರುವ ವಿದ್ಯಾರ್ಥಿ ಮನೆಯಿಂದ ಶಾಲೆಗೆ ಹೋಗುವ ಸಂದರ್ಭ ರಾಷ್ಟ್ರೀಯ ಹೆದ್ದಾರಿಯನ್ನು ದಾಟುವ ಸಂದರ್ಭ ಮಂಗಳೂರಿನಿಂದ ಕಾಸರಗೋಡಿಗೆ ತೆರಳುತ್ತಿದ್ದ ಮೀನು ಸಾಗಾಟದ ಲಾರಿ ಡಿಕ್ಕಿ ಹೊಡೆದಿದೆ. ಕಾಲಿಗೆ ಗಾಯಗೊಂಡ ವಿದ್ಯಾರ್ಥಿಯನ್ನು ಲಾರಿ ಚಾಲಕ ಕಮಲಾಕ್ಷ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಉಳ್ಳಾಲ ಠಾಣೆಯಲ್ಲಿ ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ಮೀನು ಲಾರಿಗಳ ಆರ್ಭಟ: ಉಳ್ಳಾಲ, ಮಲ್ಪೆ ಕಡೆಯಿಂದ ಕೇರಳದ ಕಡೆಗೆ ಹವಾನಿಯಂತ್ರಣದ ಮೂಲಕ ಮೀನು ಸಾಗಾಟ ಮಾಡುವ ಲಾರಿಗಳು ಮಿತಿಮೀರಿದ ವೇಗದಲ್ಲಿ ಚಲಿಸುವುದರಿಂದ ಅಪಘಾತಗಳಿಗೆ ಕಾರಣವಾಗುತ್ತಿದೆ. ಸಮಯ ಮೀರಿದಲ್ಲಿ ಮೀನು ಹಾಳಾಗುವ ದೃಷ್ಟಿಯಿಂದ ಎಷ್ಟು ಬೇಗ ತಲುಪಿದಷ್ಟು ಚಾಲಕನಿಗೆ ವೇತನ ನಿಗದಿ ಮಾಡಲಾಗುವುದು. ಅಲ್ಲದೆ ವೇಗವಾಗಿ ತಲುಪಿಸಿದ ಚಾಲಕರಿಗೆ ಹೆಚ್ಚಿನ ಕಮೀಷನ್ ನೀಡುವ ಹಿನ್ನೆಲೆಯಲ್ಲಿ ಜೀವದ ಹಂಗನ್ನು ತೊರೆದು ಚಾಲಕರು ಹಣದಾಸೆಯಿಂದ ಎರ್ರಾಬಿರ್ರಿಯಾಗಿ ಲಾರಿಗಳನ್ನು ಚಲಿಸುತ್ತಿದ್ದಾರೆನ್ನುವ ಆರೋಪ ಸಾರ್ವಜನಿಕ ವಲಯದಿಂದ ಕೇಳಿಬಂದಿದೆ. ಲಾರಿಯೊಳಗಿನ ನೀರನ್ನು ರಸ್ತೆಗೆ ಹರಿದುಬಿಡುವುದರಿಂದ ಎಣ್ಣೆಯುಕ್ತ ರಾಸಾಯನಿಕದಿಂದ ರಸ್ತೆಯಲ್ಲಿ ಹೋಗುವ ದ್ವಿಚಕ್ರ ವಾಹನಗಳು ಅಪಘಾತಕ್ಕೀಡಾಗುತ್ತಿವೆ. ನೀರಿನಿಂದಾಗಿ ವಾಸನೆಯುಕ್ತ ವಾತಾವರಣವೂ ನಿರ್ಮಾಣಗೊಳ್ಳುತ್ತಿರುವುದರ ವಿರುದ್ಧ ಕ್ರಮಕೈಗೊಳ್ಳಬೇಕಾದ ಪೊಲೀಸರು ಸುಮ್ಮನಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
