ಉಳ್ಳಾಲ: ದೈವದ ಮುನಿಸು, ಸಾಲು ಸಾಲು ಮರಣ, ಸಾವು ನೋವು ತಡೆಯಲು ಕುಂಪಲದಲ್ಲಿ ಮಹಾ ಮೃತ್ಯುಂಜಯ ಹೋಮ

ಉಳ್ಳಾಲ: ಉಳ್ಳಾಲ ತಾಲೂಕಿನ ಕುಂಪಲ ಗ್ರಾಮದಲ್ಲಿ ಸಾಲು ಸಾಲು ಸಾವು ಸಂಭವಿಸುತ್ತಿದೆ. 2019ರಿಂದ ಈವರೆಗೆ ಸುಮಾರು 50ಕ್ಕೂ ಹೆಚ್ಚು ಮಂದಿ ಯುವ ವಯಸ್ಸಿನವರು ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ. ಕೆಲವೊಂದು ಮಂದಿ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಅಪಘಾತ, ಮಾರಣಾಂತಿಕ ಕಾಯಿಲೆಗಳಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದರು. ಅದರಲ್ಲೂ ರೂಪದರ್ಶಿಯಾಗಿದ್ದ ಪ್ರೇಕ್ಷಾ ಎಂಬ ಯುವತಿ ಕೂಡ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿದ್ದಾರೆ. ಅಶ್ವಿನಿ ಬಂಗೇರ ಎಂಬ ಯುವತಿ ಗೃಹಪ್ರವೇಶವಾದ ಐದೇ ದಿನದಲ್ಲಿ ತನ್ನದೇ ನೂತನ ಮನೆಯಲ್ಲಿ ಆತ್ಮಹತ್ಯೆ ಘಟನೆ ಕೂಡ ನಡೆದಿತ್ತು. ಇದಕ್ಕೆಲ್ಲ ದೈವದ ಶಕ್ತಿಗೆ ನಡೆದ ಅಪಚಾರ ಎಂದು ಹೇಳಲಾಗಿದೆ. ಈ ಕಾರಣಕ್ಕೆ ಪ್ರಶ್ನೆ ಇಟ್ಟಿದ್ದಾರೆ.
ಕರಾವಳಿ, ಕೇರಳ ಭಾಗದಲ್ಲಿ ಸಾಕಷ್ಟು ಮಹತ್ವ ಪಡೆದುಕೊಂಡಿರುವ ಈ ಪ್ರಶ್ನಾ ಚಿಂತನೆಯಲ್ಲಿ ಕುಂಪಲ ಗ್ರಾಮದ ಜನತೆಯ ಸರಣಿ ಸಾವಿಗೆ ದೈವದ ಮುನಿಸೇ ಕಾರಣ ಎಂದು ಹೇಳಲಾಗಿದೆ. ಗ್ರಾಮದ ಜನರ ಅಕಾಲಿಕ ಮರಣಕ್ಕೆ ತಡೆ ನೀಡಲು ಮಹಾ ಮೃತ್ಯುಂಜಯ ಯಾಗ ನಡೆಸಬೇಕು ಎಂದು ಪ್ರಶ್ನೆಯಲ್ಲಿ ಕಂಡುಬಂದಿದೆ. ಈ ಸಾವು ನೋವು ತಡೆಯಲು ಕುಂಪಲದಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು.ದೈವಜ್ಞರ ಮೂಲಕ ನಡೆದ ಪ್ರಶ್ನಾಚಿಂತನೆಯಲ್ಲಿ ಕುಂಪಲ ಗ್ರಾಮದ ಪೂರ್ವ ದಿಕ್ಕಿನಲ್ಲಿ ದೈವ ಸಾನಿಧ್ಯ ಇರುವ ಬಗ್ಗೆ ಸುಳಿವು ಸಿಕ್ಕಿತ್ತು. ಆದರೆ, ಈ ದೈವದ ಗುಡಿ ಪಾಳು ಬಿದ್ದು ದೈವಕ್ಕೆ ಕಾಲಾದಿಯಲ್ಲಿ ನಡೆಯುವ ಪೂಜೆ, ಪುನಸ್ಕಾರಗಳು ನಿಂತಿರುವ ಬಗ್ಗೆ ಗೋಚರವಾಗಿದೆ. ಹೀಗಾಗಿ ದೈವ ಅಸಮಾಧಾನಗೊಂಡು ತನ್ನ ರೂಪವನ್ನು ಋಣಾತ್ಮಕವಾಗಿ ತೋರಿಸುತ್ತಿದೆ ಎಂದು ತಿಳಿದುಬಂದಿದೆ. ಈ ದೈವಸ್ಥಾನ ಬೆಳಗುವ ಮೊದಲು ಗ್ರಾಮದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಸುವಂತೆ ಪ್ರಶ್ನೆಯಲ್ಲಿ ಕಂಡುಬಂದಿತ್ತು. ಹೀಗಾಗಿ ಮೃತ್ಯು ಪಾಶದಿಂದ ಪಾರಾಗಲು ಹಿಂದೂ ಧರ್ಮದಲ್ಲಿ ನಡೆಸಲಾಗುವ ಮಹಾ ಮೃತ್ಯುಂಜಯ ಯಾಗವನ್ನು ಕುಂಪಲದ ಚಾಮುಂಡೇಶ್ವರಿ ದೇವಸ್ಥಾನದ ವಠಾರದಲ್ಲಿ ನಡೆಸಲಾಯಿತು.