ಸರಕಾರಿ ಬಸ್ಸುಗಳು ಕಾನೂನು ಪ್ರಕಾರ ಸರ್ವಿಸ್ ರಸ್ತೆಯಲ್ಲೆ ಸಂಚರಿಸುವುದು ಅಗತ್ಯ: ಯಶು ಪಕ್ಕಳ ತಲಪಾಡಿ
ಉಳ್ಳಾಲ: ಬೀರಿ – ಕೋಟೆಕಾರು ಜಂಕ್ಷನ್ ಬಳಿ ದಿನಾ ನಿತ್ಯ ಟ್ರಾಫಿಕ್ ಸಮಸ್ಯೆ ಯಿಂದ ಸಾರ್ವಜನಿಕರು ಮಕ್ಕಳು ವೃದ್ಧರು ರೋಸಿಹೋಗಿದ್ದಾರೆ.
ಇಲ್ಲಿ ಇತ್ತೀಚೆಗಷ್ಟೇ ಕೃಷ್ಣ ಶೆಟ್ಟಿ ತಾಮಾರು ಎಂಬವರು ಸರಕಾರಿ ಬಸ್ಸಿನ ಚಾಲಕನ ನಿರ್ಲಕ್ಷದಿಂದ ಅಪಘಾತಕ್ಕೆ ಈಡಾಗಿ ಗಂಭೀರ ಗಾಯಗೊಂಡಿದ್ದರು.
ಆಗಲೇ ರಕ್ಷಾ ಬಸ್ಸಿನ ಮಾಲಕರು ಗಣೇಶ್ ಶೆಟ್ಟಿ ತಲಪಾಡಿ ಇವರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೆರೆದಿದ್ದರು. ಮಂಗಳೂರು ಕಡೆ ಹೋಗುವ ಬರುವ ಎಲ್ಲ ಸಿಟಿ ಬಸ್ಸುಗಳು ಕನೂನನನ್ನು ಸರಿಯಾಗಿ ಪಾಲಿಸಿ ಸರ್ವಿಸ್ ರಸ್ತೆಯನ್ನೇ ಉಪಯೋಗಿಸಿ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಆದರೆ, ಮೇಲೆ ಹೇಳಿದಂತೆ ಕೃಷ್ಣ ಶೆಟ್ಟಿ ತಾಮಾರು ಅವರನ್ನು ಅಪಘಾತಕ್ಕೀಡು ಮಾಡಿದ ಇದೇ ಸರಕಾರಿ ಬಸ್ಸು ಸರ್ವಿಸ್ ರಸ್ತೆಯಲ್ಲಿ ಬರದೆ ನೇರ ರಾಷ್ಟ್ರೀಯ ಹೆದ್ದಾರಿಯಲ್ಲಿ ಬಂದು ಡಿಕ್ಕಿ ಹೊಡೆದಿದೆ, ಈ ಸರಕಾರಿ ಬಸ್ಸುಗಳ ಅಜಾಗರೂಕತೆಯಿಂದಾಗಿ ಇತ್ತೀಚೆಗೆ ಮಂಗಳೂರು ಕಾಸರಗೋಡು ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅನೇಕ ಅಪಘಾತಗಳು ಸಂಭವಿಸುತ್ತಿದೆ.
ಸಿಟಿ ಬಸ್ಸಿನವರಿಗೊಂದು ಕಾನೂನು ಸರಕಾರಿ ಬಸ್ಸಿನವರಿಗೊಂದು ಕಾನೂನು ಸರಿಯಲ್ಲ, ಕೆಲವು ಸಲ ಸರಕಾರಿ ಬಸ್ಸಿನ ಚಾಲಕನಿಗೆ ಮನಸ್ಸು ಬಂದರೆ ಮಾತ್ರ ನಿಲ್ಲಿಸುವುದು ಇಲ್ಲದಿದ್ದರೆ ನಿಗದಿತ ತಂಗುದಾಣದಲ್ಲಿ ನಿಲ್ಲಿಸದೆ ಮುಂದೆ ಹೋಗುವುದು, ಸರ್ವಿಸ್ ರಸ್ತೆಯಲ್ಲಿರುವ ಬಸ್ಸು ತಂಗುದಾಣದಲ್ಲಿ ನಿಲ್ಲದೆ ರಾಷ್ಟ್ರೀಯ ಹೆದ್ದಾರಿಯಲ್ಲಿ ನಿಗದಿತ ಸ್ಥಳದಲ್ಲಿ ನಿಲ್ಲಿಸದೆ ಹಿಂದೆ ಮುಂದೆ ಓಡಿಸಿ ಬಸ್ಸು ಹತ್ತಿಸುವ ಈ ಸರಕಾರಿ ಬಸ್ಸುಗಳ ನಿಯಂತ್ರಣದ ಜವಾಬ್ದಾರಿ ಸಂಬಂಧಪಟ್ಟ ಅಧಿಕಾರಿಗಳು ನಿರ್ವಹಿಸಬೇಕಾಗಿದೆ.
ತಲಪಾಡಿ, ಕೆ.ಸಿ ರೋಡ್ ಮತ್ತು ಬೀರಿ ಜಂಕ್ಷನ್ ಈ ಸ್ಥಳಗಳಲ್ಲಿ ಬೆಳಗ್ಗಿನ ೭ ಗಂಟೆಯಿಂದ ೧೦ ಗಂಟೆ ಮತ್ತು ಸಂಜೆ ೩ ರಿಂದ ೭ ಗಂಟೆ ಸಮಯದಲ್ಲಿ ಸಂಚಾರಿ ಪೊಲೀಸರ ತುಂಬಾ ಅಗತ್ಯವಿದೆ. ಇಲ್ಲಿ ಶಾಲಾ ಮಕ್ಕಳು ತುಂಬಾ ಗೊಂದಲ ಕಷ್ಟಗಳನ್ನು ಅನುಭವಿಸುತ್ತಿದ್ದಾರೆ.
ಸರಕಾರಿ ಬಸ್ಸುಗಳನ್ನು ಕೂಡ ಕಾನೂನು ರೀತಿಯಲ್ಲಿ ಸರ್ವಿಸ್ ರಸ್ತೆಯಲ್ಲೇ ಕಳುಹಿಸಿ ಸಾರ್ವಜನಿಕರ ಪ್ರಾಣವನ್ನು ಉಳಿಸಬೇಕೆಂದು ಯಶು ಪಕ್ಕಳ ತಲಪಾಡಿ ತಮ್ಮ ಬರಹದಲ್ಲಿ ವಿನಂತಿಸಿಕೊಂಡಿದ್ದಾರೆ.