ಉಳಿಯ ಶ್ರೀದೇವರ ವಸಂತ ಮಂಟಪ ನಿರ್ಮಾಣಕ್ಕೆ ಗುದ್ದಲಿ ಪೂಜೆ
ಉಳ್ಳಾಲ: ಮುನ್ನೂರು ಗ್ರಾಮದ ಸೋಮನಾಥ ಉಳಿಯ ಶ್ರೀ ಸೋಮೇಶ್ವರೀ ದೇವಸ್ಥಾನದ ಸಾನಿಧ್ಯದ ಹೊರಾಂಗಣದಲ್ಲಿ ಸುಮಾರು 10 ಲಕ್ಷ ರೂ.ವೆಚ್ಚದಲ್ಲಿ ಶಿಲಾಮಯವಾದ ಶ್ರೀದೇವರ ವಸಂತ ಮಂಟಪ ನಿರ್ಮಾಣಕ್ಕೆ ಭಾನುವಾರ ಗುದ್ದಲಿ ಪೂಜೆ ನೆರವೇರಿಸಲಾಯಿತು.
ಕ್ಷೇತ್ರದ ತಂತ್ರಿವರ್ಯ ಕುಂಟಾರು ರವೀಶ್ ತಂತ್ರಿಯವರ ಮಾರ್ಗದರ್ಶನದಲ್ಲಿ ಕುಂಟಾರು ವಿಷ್ಣು ಪ್ರಸಾದ್ ತಂತ್ರಿ ಅವರು
ವೈಧಿಕ ವಿಧಿವಿಧಾನವನ್ನು ನೆರವೇರಿಸಿದ ಬಳಿಕ ವಸಂತ ಮಂಟಪಕ್ಕೆ ಅಡಿಗಲ್ಲು ಹಾಕಿದರು.
ಮಂಗಳೂರಿನ ಕದ್ರಿಯ ಜಯಂತ ಲಕ್ಷ್ಮಣ್ ನಾಯಕ್ ಅವರು ದಿವಂಗತರಾದ ತಾಯಿ ರತ್ನಾಲಕ್ಷ್ಮಣ ನಾಯಕ್, ತಂದೆ ಲಕ್ಷ್ಮಣ್ ನಾಯಕ್ ಮುಲ್ಕಿ ಮತ್ತು ಪತ್ನಿ ಹರಿಣಿ ಜಯಂತ ನಾಯಕ್ ಅವರ ಸ್ಮರಣಾರ್ಥವಾಗಿ ಶ್ರೀದೇವರ ವಸಂತ ಮಂಟಪವನ್ನು ನಿರ್ಮಿಸಿ ಕೊಡುತ್ತಿದ್ದಾರೆ.
ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಉಮಾನಾಥ ನಾಯಕ್, ಗೌರವಾಧ್ಯಕ್ಷ ಯು.ದಯಾನಂದ ನಾಯಕ್, ಮಾಜಿ ಅಧ್ಯಕ್ಷ ಜೆ.ರವೀಂದ್ರ ನಾಯಕ್, ಗಾಳದಕೊಂಕಣಿ ಅಭ್ಯುದಯ ಸಂಘದ ಅಧ್ಯಕ್ಷ ನರಸಿಂಹ ನಾಯಕ್ ಹರೇಕಳ, ಶ್ರೀಸೋಮೇಶ್ವರೀ ಮಹಿಳಾ ಮಂಡಲದ ಅಧ್ಯಕ್ಷೆ ಜಯಶೀಲ ನಾಯಕ್, ದಾನಿ ಕದ್ರಿ ಜಯಂತ ನಾಯಕ್ ಹಾಗೂ ಸಮಿತಿ ಪದಾಧಿಕಾರಿಗಳು, ಸದಸ್ಯರು ಮತ್ತಿತರರು ಉಪಸ್ಥಿತರಿದ್ದರು.
ಇದೇ ವೇಳೆ ಶಿಲ್ಪಿ ಕೃಷ್ಣ ಅವರಿಗೆ ಕಾಮಗಾರಿಯ ವೀಳ್ಯ ನೀಡಲಾಯಿತು.