ಮೂಲ್ಕಿ: ಬ್ರಹ್ಮಶ್ರೀ ನಾರಾಯಣ ಗುರುವರ್ಯರು ಹಿಂದೂ ಸಮಾಜವನ್ನು ಅನ್ಯರ ಧಾಳಿಯಿಂದ ಉಳಿಸಿದ ಮಹನೀಯರು. ಅವರು ಮಧ್ವಾಚಾರ್ಯರು ಮತ್ತು ರಾಮಾನುಜಾಚಾರ್ಯರಂತೆ ವಿಶ್ವ ಮಾನ್ಯರು. ಅವರಿಗೆ ಅಪಚಾರ ಎಸಗಿದ ಯಾರೇ ಆಗಿರಲಿ ಅವರು ಶಿಕ್ಷೆಗೆ ಅರ್ಹರಾಗಿದ್ದು ಕೇರಳ ಸರ್ಕಾರ ಶೀಘ್ರ ಕ್ರಮ ಜರುಗಿಸುವಂತೆ ಉಗ್ರ ಹೋರಾಟ ನಡೆಸಬೇಕು ಎಂದು ಕನ್ನಡ ಸಾಹಿತ್ಯ ಪರಿಷತ್ ಮಾಜಿ ರಾಜ್ಯಾಧ್ಯಕ್ಷ ಹರಿಕೃಷ್ಣ ಪುನರೂರು ಹೇಳಿದರು.
ಶುಕ್ರವಾರ ಸಂಜೆ ಮೂಲ್ಕಿ ಬಿಲ್ಲವರ ಮಹಾ ಮಂಡಲದ ಸಂಕೀರ್ಣದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳನ್ನು ಕೇರಳದ ಕಾರ್ಯಕ್ರಮದ ಸ್ಥಬ್ದ ಚಿತ್ರದಲ್ಲಿ ಅವಹೇಳನಕಾರಿಯಾಗಿ ಬಿಂಬಿಸಿರುವುದು ಹಾಗೂ ಅವರ ಮೂರ್ತಿ ದ್ವಂಸ ಮಾಡಿರುವ ಪ್ರಕರಣದ ಬಗ್ಗೆ ಯುವವಾಹಿನಿ ಕೇಂದ್ರ ಸಮಿತಿ ಮಂಗಳೂರು ಮತ್ತು ಮೂಲ್ಕಿ ಘಟಕದ ಸಂಯೋಜನೆಯಲ್ಲಿ ನಡೆದ ಖಂಡನಾ ಸಭೆಯಲ್ಲಿ ಅವರು ಮಾತನಾಡಿದರು.
ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಶಂಕರ ಸುವರ್ಣ ಮಾತನಾಡಿ, ವಿಶ್ವ ಮಾನವ ಪ್ರತಿಪಾದಕರು ಹಾಗೂ ತುಳಿತಕ್ಕೊಳಗಾದ ಸಮಾಜದ ಉನ್ನತಿಗಾಗಿ ಶ್ರಮಿಸಿದ ಮಹನೀಯರಿಗಾದ ಅಪಮಾಮ ಸಂಪೂರ್ಣ ಸಮಾಜಕ್ಕೆ ಆದ ಅಪಮಾನ ಈ ಬಗ್ಗೆ ಉಗ್ರ ಹೋರಾಟ ಬಹು ಮುಖ್ಯ ಎಂದರು.
ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ವೈ.ಸುಧೀರ್ ಕುಮಾರ್ ಮಾತನಾಡಿ, ಕೇರಳ ಸರ್ಕಾರ ನಿಸ್ಪಕ್ಷಪಾತ ತನಿಖೆ ಹಾಗೂ ಉಗ್ರ ಶಿಕ್ಷೆ ನೀಡುವ ಮೂಲಕ ಸಮಾಜಘಾತುಕ ಕೃತ್ಯವನ್ನು ಹೊಸಕಿ ಹಾಕುವಂತೆ ರಾಜ್ಯ ಸರ್ಕಾರ ಕೇರಳ ಸರ್ಕಾರಕ್ಕೆ ಒತ್ತಡ ತರುವಂತೆ ನಮ್ಮ ಜನಪ್ರತಿನಿಧಿಗಳನ್ನು ಸೇರಿಸಿಕೊಂಡು ಹೋರಾಟ ನಡೆಸಬೇಕು ಎಂದರು.
ಯುವವಾಹಿನಿ ಮಾಜಿ ಅಧ್ಯಕ್ಷ ಶಂಕರ ಪೂಜಾರಿ ಮಾತನಾಡಿ, ಈ ಹೀನ ಕೃತ್ಯ ಸಮಾಜಕ್ಕೇ ಅಪಮಾನ ತರುವಂತಹುದಾಗಿದ್ದು ಅಂತರಾಷ್ಟ್ರೀಯ ಮಟ್ಟದಲ್ಲಿ ಹೋರಾಟ ಸಂಘಟಿಸಬೇಕು. ಶಾಂತಿಯುತ ಹೋರಾಟದ ಮೂಲಕ ಕಿಡಿಗೇಡಿಗಳಿಗೆ ಪಾಠವಾಗಬೇಕು ಎಂದರು.

ಯುವವಾಹಿನಿ ಕೇಂದ್ರ ಸಮಿತಿ ಅಧ್ಯಕ್ಷ ಸಂತೋಷ್ ಕುಮಾರ್ ಮಾತನಾಡಿ, ಶಾಂತಿಯುತ ಹೋರಾಟ ಪ್ರಾರಂಭಗೊಳ್ಳಬೇಕು ಪ್ರಥಮ ಹಂತದಲ್ಲಿ ಉಭಯ ಜಿಲ್ಲೆಗಳ ಡಿ.ಸಿಯವರಿಗೆ ಮನವಿ ನೀಡುವ ಮೂಲಕ ಸರ್ಕಾರಕ್ಕೆ ತಿಳಿಸುವ ಕೆಲಸವಾಗಬೇಕು ನಿರ್ದಿಷ್ಟ ಸಮಯದಲ್ಲಿ ಶಾಂತಿ ಹೋರಾಟಕ್ಕೆ ಬೆಂಬಲ ದೊರೆಯದಿದ್ದಲ್ಲಿ ಎಲ್ಲಾ ಗುರುವರ್ಯರ ಅಭಿಮಾನಿಗಳು ಬಿಲ್ಲವ ಸಂಘಟನೆಗಳು ಸೇರಿ ಉಗ್ರ ಹೋರಾಟ ಸಂಘಟಿಸಲಿದೆ ಎಂದು ಎಚ್ಚರಿಸಿದರು.
ಯುವವಾಹಿನಿ ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪರಮೇಶ್ವರ ಪೂಜಾರಿ, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಹರಿಶ್ಚಂದ್ರ.ಪಿ.ಸಾಲ್ಯಾನ್,ವಾಮನ ನಡಿಕುದ್ರು. ಪ್ರೇಮನಾಥ.ಕೆ, ವಿಜಯ ಕುಮಾರ್ ಕುಬೆವೂರು,ರಾಜೀವ್, ಚಂದ್ರಶೇಖರ ಸುವರ್ಣ ಕೃತ್ಯವನ್ನು ಖಂಡಿಸಿ ಮಾತನಾಡಿದರು.
ಖಂಡನಾ ನಿರ್ಣಯ: ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಮಾಡಿದ ಅಪಮಾನವನ್ನು ಸಭೆ ಸರ್ವಾನುಮತದಿಂದ ಖಂಡಿಸುತ್ತದೆ. ಉಭಯ ಜಿಲ್ಲೆಯ ಉಸ್ತುವಾರಿ ಸಚಿವರುಗಳ ನಿರ್ದೇಶನದಲ್ಲಿ ಜಿಲ್ಲಾಧಿಕಾರಿ ಮುಖೇನ ರಾಜ್ಯ ಮುಖ್ಯ ಮಂತ್ರಿಗಳಿಗೆ ಈ ಬಗ್ಗೆ ಮನವಿ ನೀಡಿ ರಾಜ್ಯ ಸರ್ಕಾರವು ಕೇರಳ ಸರ್ಕಾರಕ್ಕೆ ಒತ್ತಡ ತರುವಂತೆ ನಿರ್ಣಯ ಕೈಗೊಂಡಿತು.
ಒಂದು ವಾರದ ಅವಧಿಯಲ್ಲಿ ಕೇರಳ ಸರ್ಕಾರವು ಸಮಗ್ರ ತನಿಖೆ ನಡೆಸಿ ಅಪರಾಧಿಗಳಿಗೆ ಕಠಿಣ ಶಿಕ್ಷೆ ನೀಡದಿದ್ದಲ್ಲಿ ಉಭಯ ಜಿಲ್ಲೆ ಬಂದ್ ಸಹಿತ ಉಗ್ರ ಹೋರಾಟ ನಡೆಸಲು ಸಭೆ ತೀರ್ಮಾನಿಸಿತು.
