ಬಂಟ್ವಾಳ: `ಓದು ಕಥಾರಚನೆಗೆ ಪ್ರೇರಕ. ನಾವು ಓದಿದಷ್ಟು ನಮ್ಮ ಅನುಭವ, ಭಾಷಾಜ್ಞಾನ, ರಚನಾ ಶಕ್ತಿ ಹೆಚ್ಚುತ್ತದೆ. ಜಾನಪದ ಕತೆಗಾರರು ಓದು ಬರಹ ಇಲ್ಲದವರಾಗಿದ್ದರೂ ಉತ್ತಮ ಕೇಳುಗರಾಗಿದ್ದರಿಂದ ನಮಗೆ ಬಹು ದೊಡ್ಡ ಸಾಹಿತ್ಯ ಸಂಪತ್ತನ್ನು ನೀಡಿದರು. ನಾವಿಂದು ಓದು-ಬರಹ ಬಲ್ಲವರಾಗಿದ್ದರಿಂದ ಕೇಳುವಿಕೆಯಿಂದ ದೂರವಾಗಿದ್ದೇವೆ. ಆದ್ದರಿಂದ ಓದುವ ಹವ್ಯಾಸ ಬೆಳೆಸಿ ಬರಹಕ್ಕೆ ತೊಡಗುವುದು ಒಳಿತು.” ಎಂದು ಅತಿಥಿ ಉಪನ್ಯಾಸಕಿ, ಸಾಹಿತಿ ಗೀತಾ ಕೋಂಕೋಡಿ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ವಿಟ್ಲದ ವಿಠಲ ಪದವಿ ಪೂರ್ವ ಕಾಲೇಜಿನ ಸಾಹಿತ್ಯ ಸಂಘವು ಏರ್ಪಡಿಸಿದ `ಸಣ್ಣ ಕತೆಗಳ ರಚನಾ ತರಬೇತಿ’ ಕಮ್ಮಟದ ಸಂಪನ್ಮೂಲ ವ್ಯಕ್ತಿಯಾಗಿ ಅವರು ಭಾಗವಹಿಸಿದ್ದರು. ಪ್ರಭಾರ ಪ್ರಾಂಸುಪಾಲ ಅನ್ನಪ್ಪ ಸಾಸ್ತಾನ ಅವರು ಅಧ್ಯಕ್ಷತೆ ವಹಿಸಿ ಸಣ್ಣಕತೆಗಳ ಮಹತ್ವ ತಿಳಿಸಿದರು. ಕನ್ನಡ ಉಪನ್ಯಾಸಕ ಯು ಎಸ್ ವಿಶ್ವೇಶ್ವರ ಭಟ್ ಪ್ರಸ್ತಾನೆ-ಪರಿಚಯಗಳನ್ನು ಮಾಡಿದರು. ಸಾಹಿತ್ಯ ಸಂಘದ ಸಂಚಾಲಕ ಆಂಗ್ಲಭಾಷಾ ಉಪನ್ಯಾಸಕ ಕೆ ರಘುವೀರ ಉಪಸ್ಥಿತರಿದ್ದರು. ವಿದ್ಯಾರ್ಥಿ ಭವ್ಯಶ್ರೀ ಸ್ವಾಗತಿಸಿದರು, ವಸಂತ ವಂದಿಸಿದರು. ಕೃತಿಕಾ ಕಾರ್ಯಕ್ರಮ ಸಂಯೋಜಿಸಿದರು.

