ಬಂಟ್ವಾಳ : ಸತ್ಯದ ಬೆಳಕನ್ನು ಅನುಭವಿಸಿದಾತ ಸದ್ಗುರು ಎಂದೆನಿಸಿದರೆ, ಆತ್ಮಸಿದ್ಧಿಯೊಂದಿಗೆ ಧರ್ಮದ ಬೆಳಕನ್ನು ಜಗತ್ತಿಗೆ ಬೋಧಿಸುವವನೇ ಜಗದ್ಗುರು. ಬ್ರಹ್ಮಶ್ರೀ ಎಂಬ ಪರಮ ಶ್ರೇಷ್ಠತೆಯೊಂದಿಗೆ ಒಂದೇ, ಜಾತಿ, ಒಂದೇ ಮತ, ಒಂದೇ ದೇವರು ಎಂಬ ಸರಳ ತತ್ವದ ಮೂಲಕ ಬ್ರಹ್ಮಶ್ರೀ ನಾರಾಯಣ ಗುರು ವಿಶ್ವಮಾನವತೆಯನ್ನು ಸಾರಿದ್ದಾರೆ ಎಂದು ಕನ್ಯಾಡಿ ಶ್ರೀರಾಮ ಕ್ಷೇತ್ರದ ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ ಹೇಳಿದರು.


ಅವರು ಭಾನುವಾರ ಬಿ.ಸಿ.ರೋಡಿನ ಗಾಣದಪಡ್ಪು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವ ಸಂಘದ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 161ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು. ಜ್ಞಾನ, ಬುದ್ಧಿಮತ್ತೆ, ಇಚ್ಛಾ ಶಕ್ತಿಯಿದ್ದಾಗ ಮಾತ್ರ ನಿಶ್ಚಿತ ಗುರಿ ಮುಟ್ಟಲು ಸಾಧ್ಯ. ವಿಶ್ವ ಭ್ರಾತೃತ್ವವನ್ನು ಬೆಳಗಿಸ ಬೇಕಾದ ಧರ್ಮ ಸಮಾಜದ ಮಧ್ಯೆ ಬಂದಳಿಕೆ ಕಳೆಯಾಗದಂತೆ ನೋಡಿಕೊಳ್ಳಬೇಕು. ಗುರುಗಳು ಕಿಂಚಿತ್ತೂ ಗೊಂದಲವಾಗದಂತೆ ಸಮಾನ ಮಾನವೀಯ ಮೌಲ್ಯಗಳನ್ನು ಸಮಾಜದಲ್ಲಿ ಬೆಸೆದರು ಎಂದ ಅವರು ಸರಕಾರ ಸಂಪನ್ಮೂಲವಿರುವ ಮಠಗಳಿಗೆ ಮತ್ತೂ ಅನುದಾನ ನೀಡದೇ ಆರ್ಥಿಕ ಸಂಪನ್ಮೂಲ ಕೊರತೆ ಎದುರಿಸುತ್ತಿರುವ ಧಾರ್ಮಿಕ ಶ್ರದ್ಧಾಕೇಂದ್ರ, ಮಠ, ಮಂದಿರಗಳಿಗೆ ಸಹಾಯಹಸ್ತ ನೀಡಲಿ ಎಂದು ತಿಳಿಸಿದರು.
ಸಮಾರಂಭವನ್ನು ಉದ್ಘಾಟಿಸಿದ ಮಂಗಳೂರು ಪೊಲೀಸ್ ಕಮೀಷನರ್ ಎಸ್.ಮುರುಗನ್ ಮಾತನಾಡಿ ಸಾಮಾಜಿಕ ಅಸಮಾನತೆ, ತಾರತಮ್ಯ ವ್ಯವಸ್ಥೆಯನ್ನು ಪರಿವರ್ತನಾ ಸಿದ್ಧಾಂತದ ಮೂಲಕ ಪರಿಹರಿಸಿದ ಬ್ರಹ್ಮಶ್ರೀ ನಾರಾಯಣ ಗುರುಗಳು ಭಾರತದ ಶ್ರೇಷ್ಠ ಮಾನವತಾವಾದಿ. ಸುಂದರ ನಾಗರಿಕ ಸಮಾಜ ನಿರ್ಮಾಣಕ್ಕೆ ಅತ್ಯವಶ್ಯಕವೆನಿಸಿದ ಶಿಕ್ಷಣವನ್ನು ಪ್ರತಿಯೊಬ್ಬರಿಗೆ ನೀಡಿ, ಸಂಘಟಿತರಾಗಿ ಎಂಬ ಸಂದೇಶ ಸಾರ್ವಕಾಲಿಕವೆನಿಸಿದೆ. ಸುಶಿಕ್ಷಿತ ವಿದ್ಯಾರ್ಥಿಗಳು ದೇಶಕ್ಕಾಗಿ, ಸಮಾಜಕ್ಕಾಗಿ ಸದ್ವಿನಿಯೋಗವಾಗಬೇಕು. ಜನರ ನಿರೀಕ್ಷೆಯನ್ನು ಹುಸಿಗೊಳಿಸದ ನಾಯಕರಾಗಬೇಕೆಂದು ತಿಳಿಸಿದರು.
ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಕೆ.ಸೇಸಪ್ಪ ಕೋಟ್ಯಾನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ರಾಘವ ಅಮೀನ್, ಜತೆ ಕಾರ್ಯದರ್ಶಿ ಶಂಕರ್ ಕಾಯರ್‍ಮಾರ್, ಲೆಕ್ಕ ಪರಿಶೋಧಕ ಗಿರೀಶ್ ಪೂಜಾರಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಬಿಲ್ಲವ ಮಹಾ ಮಂಡಲದ ವಕ್ತಾರ ಕೆ.ಹರಿಕೃಷ್ಣ ಬಂಟ್ವಾಳ ಪ್ರಸ್ತಾವನೆಗೈದರು. ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಬೇಬಿ ಕುಂದರ್ ಸ್ವಾಗತಿಸಿದರು. ಕೋಶಾಧಿಕಾರಿ ಮಹಾಬಲ ಬಂಗೇರ ಎನ್.ಕೆ ವಂದಿಸಿದರು. ಪತ್ರಕರ್ತ ಆಲದಪದವು ಗೋಪಾಲ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
