ಸಮಾಜಕ್ಕೆ ಸಮಾನತೆಯ ಶಕ್ತಿಯನ್ನು ಭಕ್ತಿಯನ್ನು ತುಂಬಿದವರು ಬ್ರಹ್ಮಶ್ರೀ ನಾರಾಯಣ ಗುರುಗಳು
ಬಂಟ್ವಾಳ: ಸಮಾಜಕ್ಕೆ ಸಮಾನತೆಯ ಶಕ್ತಿಯನ್ನು ಭಕ್ತಿಯನ್ನು ತುಂಬಿದವರು, ಮನುಕುಲದ ಉದ್ಧಾರಕ ಬ್ರಹ್ಮಶ್ರೀ ನಾರಾಯಣ ಗುರುಗಳು, ಒಂದೇ ಕುಲವೆಂದು ಸಾರಿದ ಹರಿಕಾರ. ವಿದ್ಯೆಯಿಂದಲೇ ಪ್ರಗತಿ, ಜ್ಞಾನವೇ ನಮ್ಮ ಶಕ್ತಿ ಎಂದು ಒಂದು ಕಾಲದ ಅಸ್ಪರ್ಶ ಎಂದು ಕರೆಸಿಕೊಂಡ ಹಿಂದುಳಿದ ವರ್ಗಕ್ಕೆ ಸ್ಪೂರ್ತಿಯನ್ನು ತುಂಬಿದವರು ಎಂದು ಹಿರಿಯ ಪತ್ರಕರ್ತ ರಾಜಾ ಬಂಟ್ವಾಳ ಹೇಳಿದರು.
ಅವರು ಆ.30ರಂದು ಬಿ.ಸಿ.ರೋಡ್ ಆಶ್ರಮ ಶಾಲೆಯಲ್ಲಿ ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕ ಆಶ್ರಯದಲ್ಲಿ ನಡೆದ ಬ್ರಹ್ಮಶ್ರೀ ನಾರಾಯಣ ಗುರುಗಳ 161ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.

ಯುವವಾಹಿನಿ ನಿರಂತರವಾಗಿ ನಾರಾಯಣ ಗುರುಗಳ ಸಂಸ್ಮರಣೆಯನ್ನು ಆಶ್ರಮ ಶಾಲೆಯ ಮಕ್ಕಳಿಗೆ ಹಣ್ಣು ಹಂಪಲು, ಪುಸ್ತಕ ಸಾಮಾಗ್ರಿ ನೀಡುವ ಮೂಲಕ ಆಚರಿಸುತ್ತದೆ. ಪ್ರಗತಿಯ ಹರಿಕಾರ ಎಂದೇ ಗುರುತಿಸ್ಪಟ್ಟ ನಾರಾಯಣ ಗುರುಗಳು ನಮ್ಮ ನಿಮ್ಮ ಹಾಗೇ ಬಾಳಿ ಬದುಕಿದವರು. ಅಂದಿನ ಶೋಷಣೆ, ಅಸಮಾನತೆ ವಿರುದ್ದ ಶಿಕ್ಷಣದ ಮೂಲಕ ಸಶಕ್ತ ಸಮಾಜ ಕಟ್ಟಬಹುದು ಎಂದವರು.
ನಾರಾಯಣ ಗುರುಗಳ ಸಂದೇಶಗಳನ್ನು ನಾವು ಬದುಕಿನಲ್ಲಿ ಅಳವಡಿಕೊಂಡಾಗ. ಅವರ ಸಂದೇಶಗಳಂತೆ ನಡೆದಾಗ ಇಡೀಯ ಸಮಾಜ ಪ್ರಗತಿಯ ಹಾದಿಯಲ್ಲಿ ಮುನ್ನಡೆಯಲು ಸಾಧ್ಯ. ನಾವು ಜಡತ್ವದಿಂದ ಇರುವ ಬದಲು ಕ್ರಿಯಾತ್ಮಕ ಚಟುವಟಿಕೆಯಿಂದ ನಿರಂತರ ಇದ್ದಾಗ ಅದು ನಮ್ಮನ್ನು ಸಮಾಜದಲ್ಲಿ ಮೇಲೆತ್ತುದೆ ಎಂದು ನುಡಿದರು.
ವೇದಿಕೆಯಿದ ಮಾತನಾಡಿದ ಉಪನ್ಯಾಸಕ ಶರತ್ ಕುಮಾರ್ ಯುವವಾಹಿನಿ ಒಂದು ವಸತಿ ಶಾಲೆಯನ್ನು ಆರಂಭಿಸಬೇಕು. ಆಂಗ್ಲ ಬಾಷೆಯ ಮಾದ್ಯಮದ ಮೂಲಕ ಶಿಕ್ಷಣ ನೀಡಬೇಕು. ನಾರಾಯಣ ಗುರುಗಳು ಅಂದೇ ಎಸ್ಎನ್ಡಿಪಿ ಎಂಬ ಶಾಲೆಗಳನ್ನು ಆರಂಭಿಸಿದ್ದರು ಎಂಬ ವಿಚಾರ ತಿಳಿಸಿ ನಾವು ಬದುಕಿನಲ್ಲಿ ಮೇಲೆ ಬರಲು ಶಿಕ್ಷಣವೇ ಮಾರ್ಗದರ್ಶಿ ಎಂದರು.
ಸಮಿತಿ ಗೌರವ ಸಲಹೆಗಾರ ಬಿ. ತಮ್ಮಯ ತನ್ನ ಶುಭ ಸಂದೇಶ ನೀಡಿದರು.
ಸಮಿತಿ ಅಧ್ಯಕ್ಷ ರಾಜೇಶ್ ಸುವರ್ಣ ಕಾರ್ಯಕ್ರಮದ ಮಹತ್ವವನ್ನು ತಿಳಿಸಿ ಇಂದಿಗೂ ಗುರುಗಳ ತತ್ವ ಆದರ್ಶಗಳು ಪ್ರಸ್ತುತವಾಗಿದೆ. ಇಲ್ಲಿನ ವಿದ್ಯಾರ್ಥಿಗಳ ಶಿಸ್ತು, ನಡೆನುಡಿ ಮೆಚ್ಚುಗೆಗೆ ಪಾತ್ರವಾಗಿದೆ ಎಂದು ವಿವರಿಸಿದರು.
ಆಶ್ರಮ ಶಾಲೆಯ ವಾರ್ಡನ್ ಪ್ರಸಾದ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ವೇದಿಕೆಯಲ್ಲಿ ಅಣ್ಣು ಪೂಜಾರಿ, ಹರೀಶ್, ಶಿಕ್ಷಕಿ ಲಕ್ಷ್ಮೀ, ವೀರಪ್ಪ ಮೇರಮಜಲು ಉಪಸ್ಥಿತರಿದ್ದರು. ಜಿಲ್ಲಾ ಯುವವಾಹಿನಿ ಮಾಜಿ ಅಧ್ಯಕ್ಷ ಪ್ರೇಮನಾಥ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಸುಲತಾ ವಂದಿಸಿದರು.
