ಬಳ್ಳಾರಿ: ಖಾಸಗಿ ಫೈನಾನ್ಸಿಯರ್ ಬಾಬುಲಾಲ್ ಅಲಿಯಾಸ್ ಚೋರ್ ಬಾಬುಲಾಲ್ ನಿವಾಸದ ಮೇಲೆ ಶನಿವಾರ ಚುನಾವಣೆ ಅಧಿಕಾರಿಗಳು ದಾಳಿ ನಡೆಸಿದಾಗ 8.52 ಕೋಟಿ ರೂ. ಹವಾಲಾ ಹಣ ಪತ್ತೆಯಾಗಿದೆ. ದಾಳಿಯ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಳ್ಳಾರಿ ಜಿಲ್ಲಾಧಿಕಾರಿ ಬಾಬುಲಾಲ್ ಎಂಬವರ ಮನೆ ಮೇಲೆ ನಾವು ಇಂದು ದಾಳಿ ನಡೆಸಿದಾಗ 8.52 ಕೋಟಿ ರೂ. ನಗದು ಹಣ ಪತ್ತೆಯಾಗಿದ್ದು, ನಗದು ಹಣದ ಜತೆ ಶ್ರೀರಾಮುಲು ಭಾವಚಿತ್ರವುಳ್ಳ ಕರಪತ್ರ ಕೂಡ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಅಲ್ಲದೆ 4.30 ಕೋಟಿ ಅಂಚೆ ಕಚೇರಿ ಠೇವಣಿ, 5 ಕೋಟಿ ಮೌಲ್ಯದ ಬ್ಯಾಂಕ್ ಚೆಕ್ಗಳು ಹಾಗೂ ನೂರಾರು ಎಕರೆ ಜಮೀನಿನ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವಿವರಣೆ ನೀಡಿದ್ದಾರೆ. ಲೋಕಸಭಾ ಚುನಾವಣೆ ಕಣದ ಅಭ್ಯರ್ಥಿಗಳಿಗೆ ಹಂಚುವುದಕ್ಕೆ ಈ ಹಣ ಸಂಗ್ರಹಿಸಲಾಗಿದ್ದು, ಈ ಹಣದ ಬಗ್ಗೆ ಬಾಬುಲಾಲ್ಗೆ ಮಾಹಿತಿ ಕೇಳಲಾಗಿದೆ. ಚುನಾವಣೆ ಸಂದರ್ಭದಲ್ಲಿ ಹವಾಲಾ ಹಣ ಸಂಗ್ರಹಿಸಿದ್ದಾರೆಂದು ಆರೋಪಿಸಿ ಕೇಸ್ ದಾಖಲಿಸಲಾಗಿದೆ. ಈ ಕುರಿತು ಶ್ರೀರಾಮುಲು ಈ ಹಣಕ್ಕೂ ತಮಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

