ಬಂಟ್ವಾಳ: ನಮ್ಮ ಹಿಂದಿನ ಕಾಲದಲ್ಲಿ ಸಮಾಜದಲ್ಲಿ ಬಹಳಷ್ಟು ಕಷ್ಟವಿದ್ದ ದಿನವಿತ್ತು, ಕೃಷಿ ಪ್ರದಾನವಾದ ಜಿಲ್ಲೆಯಲ್ಲಿ ಬೇಸಾಯ ಮುಗಿದ ನಂತರ ಬಹಳಷ್ಟು ಕಷ್ಟದ ದಿನದಲ್ಲಿ ಸೊಪ್ಪು ತರಕಾರಿಗಳಲ್ಲಿ ಔಷದೀಯ ಅಂಶವಿದ್ದುದರಿಂದ ಅವುಗಳನ್ನು ಸೇವಿಸುತ್ತಿದ್ದರು. ಈಗ ಅದರ ಉಪಯೋಗ ಗೊತ್ತಿಲ್ಲದೆ ಬಳಕೆ ಕಡಿಮೆಯಾಗಿದೆ. ಇವುಗಳನ್ನು ಬಳಕೆ ಮಾಡುವ ಅರಿವನ್ನು ಇಂದಿನ ಪೀಳಿಗೆಗೆ ತಿಳಿಸಬೇಕಾದುದು ನಮ್ಮ ಕರ್ತವ್ಯವಾಗಿದೆ ಎಂದು ಗೋಳ್ತಮಜಲು ಜಿ.ಪಂ.ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ನುಡಿದರು. ಅವರು ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ.ಜಿ.ಪಂ.ಹಿ.ಪ್ರಾ.ಶಾಲೆ ಪಲ್ಲಮಜಲು ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಮೂಡದ ಆಶ್ರಯದಲ್ಲಿ ಆಟಿಡೊಂಜಿ ಕೂಟ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಹಿರಿಯರ ಮಾರ್ಗದರ್ಶನದಲ್ಲಿ ನಾವು ಇಂದಿನ ಪೀಳಿಗೆಗೆ ಈ ಎಲ್ಲಾ ಔಷದೀಯ ಸಸ್ಯಗಳ , ಆಹಾರದ ಪರಂಪರೆಯ ಪರಿಚಯವಾಗಬೇಕು ಆಗ ಇಂತಹ ಕಾರ್ಯಕ್ರಮಗಳು ಅರ್ಥಪೂರ್ಣವಾಗುತ್ತವೆ ಎಂದು ಪುರಸಭಾ ಸದಸ್ಯ ರಾಮಕೃಷ್ಣ ಆಳ್ವ ನುಡಿದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಮ್ಮದ್ ರ ಫೀಕ್ ಅಧ್ಯಕ್ಷತೆ ವಹಿದ್ದರು. ಪುರಸಭಾ ಸದಸ್ಯ ಸದಾಶಿವ ಬಂಗೇರಾ , ಲಯನ್ ಪುಷ್ಪರಾಜ್ ಶೆಟ್ಟಿ , ಲಯನೆಸ್ ಪ್ರತಿಭಾ ಶೆಟ್ಟಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಒಕ್ಕೂಟದ ಅಧ್ಯಕ್ಷೆ ಲಾವಣ್ಯ, ಸೇವಾ ಪ್ರತಿನಿಧಿ ನಂದಿನಿ ಶೆಣೈ ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕ ಪುಟ್ಟರಂಗನಾಥ ಟಿ. ಸ್ವಾಗತಿಸಿದರು. ಶಿಕ್ಷಕಿ ಜೂಲಿಯಟ್ ಡಿಸೋಜ ವಂದಿಸಿ , ಶಿಕ್ಷಕಿ ಲೀನಾ ಡಿಸೋಜ ಕಾರ್ಯಕ್ರಮ ನಿರೂಪಿಸಿದರು.
