ಬಂಟ್ವಾಳ: ಇಲ್ಲಿನ ಮೂಡುನಡುಗೋಡು ಗ್ರಾಮದ ಕರೆಂಕಿ ಶ್ರೀ ದುರ್ಗಾ ಫ್ರೆಂಡ್ಸ್ ವತಿಯಿಂದ ನಮ್ಮ ಆದ್ಯತೆ- ನಮ್ಮ ಸ್ವಚ್ಚತೆ ಕಾರ್ಯಕ್ರಮದಡಿ ದಡ್ಡಲಕಾಡು ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ಶ್ರಮದಾನದ ಮೂಲಕ ವಿವಿಧ ದುರಸ್ತಿ ಕಾರ್ಯಗಳನ್ನು ನಡೆಸಲಾಯಿತು.
ಶ್ರಿ ಜಗದಾಂಬಿಕ ಮಂದಿರದ ಪ್ರಧಾನ ಅರ್ಚಕ ಚಂದಪ್ಪ ಪೂಜಾರಿ ಶ್ರಮದಾನಕ್ಕೆ ಚಾಲನೆ ನೀಡಿದರು. ಬಳಿಕ ಶ್ರೀ ದುರ್ಗಾ ಫ್ರೆಂಡ್ಸ್ನ 40ಕ್ಕಿಂತಲೂ ಅಧಿಕ ಮಂದಿ ಸದಸ್ಯರು ಶಾಲೆಯಲ್ಲಿನ ಛಾವಣಿ, ವಿದ್ಯುತ್ ಉಪಕರಣ, ಮೆಟ್ಟಿಲು, ಕೊಳವೆ ಪಂಪ್ ಮೊದಲಾದ ದುರಸ್ತಿ ಕಾರ್ಯಗಳನ್ನು ನಡೆಸಿ ಬಳಿಕ ಶಾಲಾ ಆವರಣವನ್ನು ಸ್ವಚ್ಚಗೊಳಿಸಿದರು.


ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ದುರ್ಗಾ ಫ್ರೆಂಡ್ಸ್ನ ಅಧ್ಯಕ್ಷ ಪ್ರಕಾಶ್ ಅಂಚನ್ ನೇತೃತ್ವದ ತಂಡದ ಕಾರ್ಯವೈಖರಿಯನ್ನು ಶ್ಲಾಘಿಸಿದರು. ಇವರ ಶ್ರಮದಾನ ನಿಜಕ್ಕೂ ಅಪೂರ್ವವಾಗಿದ್ದು, ಶ್ರಮದಾನದಲ್ಲಿ ವೈವಿದ್ಯತೆಯಿದೆ ಎಂದರು. ಶಾಲಾ ಪರಿಸರವನ್ನು ಸಂಪೂರ್ಣ ಸ್ವಚ್ಚಗೊಳಿಸಿದ್ದಾರೆ. ಒಂದು ತಿಂಗಳಿನಲ್ಲಿ ಮಾಡಬಹುದಾದ ಕೆಲಸವನ್ನು ಸದಸ್ಯರೆಲ್ಲರೂ ಸೇರಿ ಒಂದೇ ದಿನದಲ್ಲಿ ಮಾಡಿ ಮುಗಿಸಿದ್ದಾರೆ. ಸಂಘದ ವತಿಯಿಂದ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಬಗ್ಗೆ ತೀರ್ಮಾನಿಸಿದ್ದು ಇಲಾಖೆಯೂ ಅವರ ಸಾಮಾಜಿಕ ಕಾಳಜಿಯೊಂದಿಗೆ ಕೈ ಜೋಡಿಸಲಿದೆ ಎಂದರು.
ಜಿ.ಪಂ. ಸದಸ್ಯೆ ನಳಿನಿ ಶೆಟ್ಟಿ, ಪತ್ರಕರ್ತ ರಾಜಾ ಬಂಟ್ವಾಳ, ಪ್ರಮುಖರಾದ ರಾಮಣ್ಣ ಕುಲಾಲ್, ರೂಪ ಬಂಗೇರ, ಪೂವಪ್ಪ ಮೆಂಡನ್, ಶಾಲಾ ಮುಖ್ಯ ಶಿಕ್ಷಕ ಮೌರೀಸ್ ಡಿಸೋಜಾ, ಸಹ ಶಿಕ್ಷಕಿ ಹಿಲ್ಡಾ ಫೆರ್ನಾಂಡೀಸ್ ಹಾಜರಿದ್ದರು.
ಸಂಘದ ಸದಸ್ಯರಾದ ಲೋಕನಾಥ ಪೂಜಾರಿ, ಪ್ರಸಾದ್ ಪುತ್ರನ್, ಸಂತೋಷ್ ಗೌಡ, ಧರ್ಣಪ್ಪ ಪೂಜಾರಿ ಶಾಂತಿಗುರಿ, ರಾಮಚಂದ್ರ ಕರೆಂಕಿ, ಯಶೋಧರ ನಾಯ್ಕ್, ನವೀನ ಸೇಸಗುರಿ, ವಿಠಲ ಡಿ. ದೇವಿನಗರ, ಮನೋಜ್ ಕರೆಂಕಿ, ಬಾಲಕೃಷ್ಣ ಗೌಡ, ಗಣೇಶ್ ಮತ್ತಿತರರು ಬಾಗವಹಿಸಿದ್ದರು.
ಸಂಘದ ಅಧ್ಯಕ್ಷ ಪ್ರಕಾಶ್ ಅಂಚನ್ ಸ್ವಾಗತಿಸಿ ವಂದಿಸಿದರು. ಪುರುಷೋತ್ತಮ ಅಂಚನ್ ಕಾರ್ಯಕ್ರಮ ನಿರೂಪಿಸಿದರು.
ತಿಂಗಳ ಇರುಳು ಕಾರ್ಯಕ್ರಮವಾಗಿ ಪ್ರತೀ ತಿಂಗಳ ಒಂದು ಭಾನುವಾರ ತಾಲೂಕಿನ ಗ್ರಾಮೀಣ ಬಾಗದ ಶಾಲೆಗಳಲ್ಲಿ ಇಂತಹ ಶ್ರಮದಾನವನ್ನು ನಡೆಸಿಕೊಂಡು ಬರಲಾಗುತ್ತಿದೆ. ಕಳೆದರೆಡು ತಿಂಗಳಿನಲ್ಲಿ ನಲ್ಕೆಮಾರ್, ರಾಯಿ ಶಾಲೆಯಲ್ಲಿ ಶ್ರಮದಾನ ನಡೆಸಿ ಶಾಲೆಯ ಹಾಗೂ ಊರವರ ಮೆಚ್ಚುಗೆಗೆ ಪಾತ್ರವಾಗಿದೆ.
