ಬಂಟ್ವಾಳ: ಗ್ರಾಮಪಂಚಾಯತ್ ಗಳಿಗೆ ಆರ್ಥಿಕ ಸ್ವಾವಲಂಬನೆ ನೀಡುವ ಮೂಲಕ ಗ್ರಾಮಸ್ವರಾಜ್ಯದ ಪರಿಕಲ್ಪನೆ ಸಾಕಾರಗೊಳಿಸಬೇಕಿದೆ ಈ ನಿಟ್ಟಿನಲ್ಲಿ ಬಂಟ್ವಾಳ ಸೇರಿದಂತೆ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗ್ರಾಮಾಭಿವೃದ್ಧಿ ಹೋರಾಟ ಸಮಿತಿ ರಚಿಸಲಾಗುತ್ತಿದೆ ಎಂದು ಸಮಿತಿ ಜಿಲ್ಲಾಧ್ಯಕ್ಷ ಮಹೇಶ ಶೆಟ್ಟಿ ತಿಮರೋಡಿ ಹೇಳಿದ್ದಾರೆ.
ಬಿ.ಸಿ.ರೋಡ್‍ನ ಪ್ರೆಸ್ ಕ್ಲಬ್ ನಲ್ಲಿ ಶುಕ್ರವಾರ ಸಂಜೆ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹೋರಾಟ ಸಮಿತಿಯ ಉದ್ದೇಶ ಹಾಗೂ ಕಾರ್ಯವೈಖರಿಯ ಕುರಿತಾಗಿ ವಿವರ ನೀಡಿದರು.
ಗ್ರಾಮಮಟ್ಟದ ಅಧಿಕಾರಗಳನ್ನು ರಾಜಕೀಯ ಕಾರಣಗಳಿಗೆ ಬಳಸಲಾಗುತ್ತಿದ್ದು, ಗ್ರಾಮೀಣ ಪ್ರದೇಶದಲ್ಲಿ ಜನರೊಂದಿಗೆ ನೇರವಾಗಿ ಬೆರೆತು ತ್ವರಿತವಾಗಿ ಸ್ಪಂದಿಸ ಬೇಕಾದ ಗ್ರಾಮ ಪಂಚಾಯತ್‍ಗಳು ಅನುದಾನವಿಲ್ಲದೆ ಸೊರಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ನೂರಾರು ಟನ್ ಮರಳು ಮತ್ತು ಕೆಂಪು ಕಲ್ಲು ಹಾಗೂ ಕಪ್ಪು ಕಲ್ಲಿನ ಕ್ವಾರೆ ಮೂಲಕ ಜೆಲ್ಲಿ ಮತ್ತಿತರ ಸಾಮಾಗ್ರಿ ಸಾಗಾಟವಾಗುತ್ತಿದ್ದರೂ ಅದರಿಂದ ಅಲ್ಲಿನ ಯುವಕರಿಗೆ ಕೆಲಸವಿಲ್ಲದಂತಾಗಿದೆ, ಪಂಚಾಯಿತಿಗೆ ಯಾವುದೇ ರೀತಿಯಆದಾಯ ಸಿಗುತ್ತಿಲ್ಲ. ಇದರಿಂದಾಗಿ ಗ್ರಾಮೀಣ ಪ್ರದೇಶದ ಯುವಕರು ಕೂಡಾ ಉದ್ಯೋಗವನ್ನರಿಸಿಕೊಂಡು ನಗರಗಳಿಗೆ ವಲಸೆ ಹೋಗುವಂತಾಗಿದೆ. ಇದಕ್ಕಾಗಿ ಪಂಚಾಯಿತಿರಾಜ್ ಕಾಯ್ದೆ ಪ್ರಕಾರ, ಗ್ರಾಮೀಣ ಉದ್ದಿಮೆ ಜೊತೆಗೆ ಮರಳು ಮತ್ತು ಗಣಿಗಾರಿಕೆಗೆ ಆಯಾಯ ಪಂಚಾಯಿತಿ ಮೂಲಕವೇ ಪರವಾನಿಗೆ ನೀಡುವ ಪದ್ಧತಿ ಜಾರಿಯಾಗಬೇಕು. ಆ ಮೂಲಕ ಪ್ರತೀ ಪಂಚಾಯಿತಿ ಆರ್ಥಿಕವಾಗಿ ಬಲಿಷ್ಟವಾಗಿ, ಸ್ವತಂತ್ರವಾಗಿ ಸ್ಥಳೀಯ ಅಭಿವೃದ್ಧಿ ಕಾಮಗಾರಿ ನಡೆಸಲು ಸಾಧ್ಯವಾಗುತ್ತದೆ. ಇನ್ನೊಂದೆಡೆ ಪರೋಕ್ಷವಾಗಿ ಸ್ಥಳೀಯ ನೂರಾರು ಮಂದಿ ಯುವಕರಿಗೆ ಉದ್ಯೋಗವೂ ದೊರೆಯುತ್ತದೆ. ಮುಂದಿನ ದಿನಗಳಲ್ಲಿ ಗ್ರಾಮಾಭಿವೃದ್ಧಿ ಹೋರಾಟ ಸಮಿತಿಯು ಈ ಬಗ್ಗೆ ಪಕ್ಷಾತೀತವಾಗಿ ಹೋರಾಟ ರೂಪಿಸಲಿದೆ ಎಂದು ಅವರು ವಿವರಿಸಿದರು.
ಸಮಿತಿ ಕಾರ್ಯದರ್ಶಿ ಸಂದೀಪ್ ಶೆಟ್ಟಿ, ಉಪಾಧ್ಯಕ್ಷ ಆನಂದ ಕುಲಾಲ್, ನಿಶಾಂತ್ ಬಡಗಬೆಳ್ಳೂರು, ಗ್ರಾ.ಪಂ.ಅಧ್ಯಕ್ಷ ಯಶೋಧರ ಕರ್ಬೆಟ್ಟು ಮತ್ತಿತರರು ಈ ಸಂದರ್ಭ ಉಪಸ್ಥಿತರಿದ್ದರು.

By Suddi9

Leave a Reply

Your email address will not be published. Required fields are marked *