ಬಂಟ್ವಾಳ: ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಸಾವಿರಾರು ಕಾರ್ಯಕರ್ತರು ಜಿಲ್ಲೆಯಾದ್ಯಂತ ಇದ್ದು ಎಲ್ಲರೂ ಮದ್ಯಮುಕ್ತ ಕುಟುಂಬ ನಿರ್ಮಾಣದ ಪ್ರತಿಜ್ಞೆ ಕೈಗೊಂಡು ತಮ್ಮ ಮನೆಯಲ್ಲಿ ಯಾರೂ ಕುಡಿತದ ಚಟಕ್ಕೆ ಬಲಿಯಾಗದಂತೆ ನೋಡಿಕೊಂಡರೆ ಮದ್ಯವರ್ಜನ ಶಿಬಿರಕ್ಕಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಮದ್ಯ ಮುಕ್ತ ಸಮಾಜ ನಿರ್ಮಿಸಲು ಸಾಧ್ಯ ಎಂದು ಮಾಜಿ ಶಾಸಕ, ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ರುಕ್ಮಯ ಪೂಜಾರಿ ಅಭಿಪ್ರಾಯ ಪಟ್ಟರು.
ಶ್ರಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಬಂಟ್ವಾಳ ಇದರ ಆಶ್ರಯದಲ್ಲಿ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ. ವಿರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ವಿವಿಧ ಸಂಘಟನೆಗಳ ಸಹಯೋಗದೊಂದಿಗೆ ಪಾಣೆಮಂಗಳೂರು ನರಿಕೊಂಬುವಿನ ಸತ್ಯಶ್ರೀ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ 852ನೇ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಮಾಜ ಆರೋಗ್ಯ ಪೂರ್ಣವಾಗಿರದಿದ್ದರೆ ಸರ್ಕಾರ ತರುವ ಯಾವುದೇ ಯೋಜನೆಗಳು ಪ್ರಯೋಜವಾಗುವುದಿಲ್ಲ. ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಎಲ್ಲರ ಸಹಕಾರವೂ ಅಗತ್ಯ ಎಂದರು.
BTW_AUG7_1ಜನಜಾಗೃತಿ ವೇದಿಕೆಯ ಸ್ಥಾಪಕಾಧ್ಯಕ್ಷ ಎ.ಸಿ.ಭಂಡಾರಿ ಮಾತನಾಡಿ ಹುಟ್ಟುನಿಂದಲೇ ಯಾರಿಗೂ ಕುಡಿತದ ಚಟ ಅಂಟಿಕೊಳ್ಳುವುದಿಲ್ಲ. ಸಂತೋಷ ಪಡೆಯಲು ಹಾಗೂ ದು:ಖ ಕಳೆಯಲು ಕುಡಿತದಿಂದ ಮಾತ್ರ ಸಾಧ್ಯ ಎನ್ನುವ ಭ್ರಮೆ ಈ ಚಟಕ್ಕೆ ದಾಸರನ್ನಾಗಿ ಮಾಡುತ್ತದೆ. ಕುಡಿತದ ಚಟಕ್ಕೆ ಒಳಗಾದವರನ್ನು ಮದ್ಯವರ್ಜನ ಶಿಬಿರದ ಮೂಲಕ ಮತ್ತೆ ಮುಖ್ಯವಹಿನಿಗೆ ತರುವ ಸದಾವಕಾಶ ಬಂದಿದೆ ಎಂದರು.
ಜನಜಾಗೃತಿ ವೇದಿಕೆಯ ಅಧ್ಯಕ್ಷ ಕಿರಣ್ ಹೆಗ್ಡೆ ಮಾತನಾಡಿ ಮದ್ಯ ನಿಷೇಧಕ್ಕೆ ಸರ್ಕಾರ ಪ್ರೋತ್ಸಾಹ ನೀಡುತ್ತಿಲ್ಲ. ಗ್ರಾಮೀಣ ಭಾಗಗಳಲ್ಲಿ ಅಂಗಡಿಗಳಲ್ಲಿಯೇ ಕಡಿಮೆ ದರಕ್ಕೆ ಮದ್ಯ ಮಾರಾಟವಾಗುತ್ತಿದ್ದರೂ ಯಾರೂ ಕ್ರಮಕೈಗೊಳ್ಳುತ್ತಿಲ್ಲ. ಇದರಿಂದ ಮಕ್ಕಳು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದಾರೆ ಎಂದು ವಿಷಾಧ ವ್ಯಕ್ತ ಪಡಿಸಿದರು.
ಶಿಬಿರ ನಡೆಸಲು ರಾಜ್ಯದ ವಿವಿಧ ಭಾಗಗಳಿಂದ ಬೇಡಿಕೆ ಬರುತ್ತಿರುವ ನಿಟ್ಟಿನಲ್ಲಿ ತಾಲೂಕುಗಳಲ್ಲಿ ಕೇವಲ 2 ಶಿಬಿರ ನಡೆಸಲು ಮಾತ್ರ ಅವಕಾಶ ಇದೆ. 40 ಸ್ವಾಸ್ಥ ಸಂಕಲ್ಪ ಕಾರ್ಯಕ್ರಮ ನಡೆಸಲಾಗಿದೆ ಎಂದು ತಿಳಿಸಿದರು.
ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಸೇಸಪ್ಪ ಕೋಟ್ಯಾನ್ ಶಿಬಿರ ಉದ್ಘಾಟಿಸಿದರು. ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ಕೊಡಗು ಜಿಲ್ಲೆ ನಿರ್ದೇಶಕ ಸೀತರಾಮ ಶೆಟ್ಟಿ, ಜಿ.ಪಂ.ಸದಸ್ಯೆ ಮಮತಾಗಟ್ಟಿ, ತಾ.ಪಂ.ಸದಸ್ಯರಾದ ಆನಂದ ಶಂಭೂರು, ದಿನೇಶ್ ಅಮ್ಟೂರು, ನರಿಕೊಂಬು ಗ್ರಾ.ಪಂ. ಅಧ್ಯಕ್ಷ ಯಶೋಧರ ಕರ್ಬೆಟ್ಟು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಪ್ರಕಾಶ್ ಕಾರಂತ, ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ತಾಲೂಕು ಯೋಜನಾಧಿಕಾರಿ ಸುನೀತಾ ನಾಯಕ್, ಸಮಿತಿಯ ಪದಾಧಿಕಾರಿಗಳಾದ ಇದಿನಬ್ಬ ಬಿ.ಕೆ., ಬಟ್ಯಪ್ಪ ಶೆಟ್ಟಿ, ಉಪಸ್ಥಿತರಿದ್ದರು.
ಜನಜಾಗೃತಿ ಕಲ್ಲಡ್ಕ ವಲಯಾಧ್ಯಕ್ಷ ಆನಂದ ಸಾಲಿಯಾನ್ ಸ್ವಾಗತಿಸಿ, ಶಿಬಿರಾಧಿಕಾರಿ ದೇವಿಪ್ರಸಾದ್ ಪ್ರಸ್ತಾವಿಸಿದರು. ಶ್ರೀ ಕ್ಷೇ. ಧ.ಗ್ರಾ.ಯೋಜನೆಯ ಕಲ್ಲಡ್ಕ ವಲಯಾಧ್ಯಕ್ಷ ವೆಂಕಟ್ರಾಯ ಪ್ರಭು ವಂದಿಸಿ, ವ್ಯವಸ್ಥಾಪನ ಸಮಿತಿ ಸಹ ಕಾರ್ಯದರ್ಶಿ ರಾಜೇಶ್ ಕೊಟ್ಟಾರಿ ಕಾರ್ಯಕ್ರಮ ನಿರ್ವಹಿಸಿದರು.

By Suddi9

Leave a Reply

Your email address will not be published. Required fields are marked *