ಬಂಟ್ವಾಳ: ಕೊಳ್ನಾಡು ಪ್ರೌಢಶಾಲೆ ಆಯೋಜಿಸಿದ್ದ ಮಕ್ಕಳ ನಾಟಕ ಶಿಬಿರದ ಸಮಾರೋಪ ಕಾರ್ಯಕ್ರಮವನ್ನು ಕೊಳ್ನಾಡು ಲಯನ್ಸ್ ಕ್ಲಬ್ ಸಭಾಂಗಣದಲ್ಲಿ ನಡೆಸಲಾಯಿತು. ಡಾ| ಬಿ.ವಿ ಕಾರಂತರಿಗೊಂದು ನಮನ ಕಾರ್ಯಕ್ರಮದಡಿಯಲ್ಲಿ ಜರುಗಿದ ಈ ಸಮಾರಂಭಕ್ಕೆ ಮಂಗಳೂರಿನ ಖ್ಯಾತ ವೇದಿಕೆ ವಿನ್ಯಾಸಗಾರ ಸ್ಪಂದನ ನಾಗರಾಜ್ ಆಗಮಿಸಿ “ಡಾ| ಬಿ.ವಿ ಕಾರಂತರು ಹುಟ್ಟಿದ ನಾಡಿನಲ್ಲಿ ಜನಿಸುವುದೇ ಹೆಮ್ಮೆ. ಮಂಚಿಯ ಮಕ್ಕಳಾಗಿ ಕಾರಂತರು ಬಿಟ್ಟು ಹೋದ ಕಾರ್ಯವನ್ನು ಮುಂದುವರಿಸುವುದು ಅಗತ್ಯವಾಗಿದ್ದು ಈ ನಿಟ್ಟಿನಲ್ಲಿ ಇಲ್ಲಿನ ಪುಟಾಣಿಗಳಿಗೆ ಜಾಗೃತಿ ಮೂಡಿಸುವ ಈ ಪ್ರಯತ್ನ ಶ್ಲಾಘನೀಯ” ಎಂದರು. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ಶ್ರೀಮತಿ. ಶಾರದಾ ಎಸ್.ರಾವ್ ಮಾತನಾಡಿ “ಡಾ| ಬಿ.ವಿ ಕಾರಂತರ ಕನಸಿನ ಫಲವನ್ನು ನಾವೆಲ್ಲ ಪಡೆಯುತ್ತಿದ್ದೇವೆ. ಮುಂದಿನ ಜನಾಂಗವು ಇದನ್ನೆಲ್ಲಾ ಅರಿತು ಸಾಗಿ ವಾಸ್ತವ ಇತಿಹಾಸ ಮಣ್ಣಗಾದಂತೆ ಕಾರಂತರ ಋಣವನ್ನು ತೀರಿಸಲು ಕಟಿಬದ್ದರಾಗಬೇಕು” ಎಂದು ತಿಳಿಸಿದರು.
ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಕೊಳ್ನಾಡು ಪ್ರೌಢಶಾಲಾ ಮುಖ್ಯೋಪಾಧ್ಯಾಯರಾದ ಶ್ರೀ.ವಿ.ಶ್ರೀರಾಮಮೂರ್ತಿ “ ಡಾ| ಬಿ.ವಿ ಕಾರಂತರಿಗೊಂದು ನಮನ ಕಾರ್ಯಕ್ರಮದಡಿ ಕಾರಂತರ ಆಶಯಗಳನ್ನು ಎಲ್ಲಾ ವಿದ್ಯಾರ್ಥಿಗಳಿಗೆ ತಿಳಿಸುವ ಅಭಿಯಾನವನ್ನು ಈ ಶೈಕ್ಷಣಿಕ ವರ್ಷದಿಂದ ಆರಂಭಿಸಿದ್ದೇವೆ. ಪ್ರತೀ ವರ್ಷ ಕಾರಂತರ ನಾಟಕವನ್ನು ಮಕ್ಕಳಿಂದ ಸಾದರ ಪಡಿಸುವ ಮೂಲಕ ಆ ಮಹಾನ್ ನಾಟಕಕಾರನ ನೆನಪನ್ನು ಹಸಿರಾಗಿಸುವ ಪ್ರಯತ್ನದಲ್ಲಿದ್ದೇವೆ” ಎಂದರು .
ಇದೇ ಸಂದರ್ಭದಲ್ಲಿ ನೀನಾಸಂ ಕಲಾವಿದರಾದ ಮೋಹನ್ ಶೇಣಿ ಹಾಗೂ ಬಿಂದು ರಕ್ಷಿದಿ ನಿರ್ದೇಶಿಸಿದ ಕಾರಂತರ “ನೀಲಿಕುದುರೆ” ನಾಟಕವನ್ನು ಪ್ರೌಢಶಾಲಾ ವಿದ್ಯಾರ್ಥಿಗಳು ರಂಗದಲ್ಲಿ ಪ್ರದರ್ಶಿಸಿದರು. ನಂತರ ನಿರ್ದೇಶಕರಿಬ್ಬರನ್ನೂ ಶಾಲಾ ಪರವಾಗಿ ಸನ್ಮಾನಿಸಲಾಯಿತು.
ತಾರಾನಾಥ ಕೈರಂಗಳ್ ಸಂಯೋಜಿಸಿದ ಈ ಕಾರ್ಯಕ್ರಮದಲ್ಲಿ ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಶ್ರೀ ದಿವಾಕರ ನಾಯಕ್ ಕುಂಟೂರು ಉಪಸ್ಥಿತರಿದ್ದರು. ಕನ್ನಡ ಶಿಕ್ಷಕರಾದ ಶ್ರೀ. ಶಿವಕುಮಾರ ಎಂ.ಜಿ, ಬಿ.ವಿ.ಕಾರಂತರ ನಮನವನ್ನು ನಡೆಸಿಕೊಟ್ಟರು. ಕಲಾಶಿಕ್ಷಕರಾದ ಶ್ರೀ. ಜಗನ್ನಾಥ ಪುರುಷ ಸ್ವಾಗತಿಸಿ ಆಂಗ್ಲಭಾಷಾ ಶಿಕ್ಷಕಿ ಶ್ರೀಮತಿ. ಗೀತಾ .ಕೆ ವಂದಿಸಿದರು. ಹಿಂದಿ ಶಿಕ್ಷಕರಾದ ಶ್ರೀ ವೆಂಕಟೇಶ ಕಲ್ಯಾಣತ್ತಾಯ ಕಾರ್ಯಕ್ರಮ ನಿರ್ವಹಿಸಿದರು.



