ಬಂಟ್ವಾಳ: ಇತ್ತೀಚೆಗೆ ನಡೆದ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಗೆದ್ದಿರುವ ಮಂಗಳೂರು ಧರ್ಮ ಪ್ರಾಂತ್ಯದ ಮೊಗರ್ನಾಡು ವಲಯದ 7 ಇಗರ್ಜಿಗಳ ಕ್ರೈಸ್ತ ಸಮುದಾಯದ ಸದಸ್ಯರಿಗೆ ಧರ್ಮಪ್ರಾಂತ್ಯ ವಲಯದ ವತಿಯಿಂದ ಸನ್ಮಾನ ಕಾರ್ಯಕ್ರಮ ಮೊಗರ್ನಾಡು ಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಯಿತು. ಸಮಾರಂಭದ ಅಧ್ಯಕ್ಷತೆ ವಹಿಸಿದ ಮೊಗರ್ನಾಡು ವಲಯದ ಪ್ರಧಾನ ಧರ್ಮಗುರುಗಳಾದ ಅ|ವ| ಮಥಾಯಸ್ ಪಿರೇರಾರವರು ಬಡವರ ಬಗ್ಗೆ ಕಾಳಜಿ ವಹಿಸುವ ಅವಕಾಶ ಸಿಕ್ಕಿರುವ ನೀವು ಸರಕಾರದಿಂದ ಲಭಿಸುವ ಎಲ್ಲಾ ಸೌಕರ್ಯಗಳು ಜನರಿಗೆ ಲಭಿಸಲು ಒಳ್ಳೆಯ ಮನಸ್ಸಿನಿಂದ ಕೆಲಸ ಮಾಡಬೇಕು ಎಂಬ ಸಂದೇಶ ನೀಡಿದರು.
ಮುಖ್ಯ ಅತಿಥಿಗಳಾಗಿ ಬಂಟ್ವಾಳ ಪ್ರಾಧಿಕಾರದ ಅಧ್ಯಕ್ಷ ಪಿಯುಸ್ ರೋಡ್ರಿಗಸ್ ಮತ್ತು ಮೊಗರ್ನಾಡು ವಲಯ ರಾಜಕೀಯ ಸಂಚಾಲಕ ವ|ಫಾ| ಆ್ಯಂಡ್ರು ಡಿ ಕೋಸ್ಟ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿ ಮಂಗಳೂರು ಪದ್ವ ಕಾಲೇಜಿನ ಪ್ರಾಂಶುಪಾಲ ವ|ಫಾ| ಆಲ್ವಿನ್ ಸೆರಾವೊ ವಿಜೇತ ಸದಸ್ಯರಿಗೆ ಒಂದು ಗಂಟೆ ಕಾಲ ತಾವು ಮಾಡಬೇಕಾದ ಜನಪರ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದರು. ವ|ಫಾ| ನೆಲ್ಸನ್ ಪಾಯಿಸ್ ಪ್ರಾರ್ಥಿಸಿದರು. ಮೊಗರ್ನಾಡು ವಲಯ ಪಾಲನಾ ಸಮಿತಿ ಕಾರ್ಯದರ್ಶಿ ಲೂವಿಸ್ ಮಸ್ಕರೇನಸ್ ವಿಟ್ಲ ವಂದಿಸಿದರು. ಬರಿಮಾರ್ ಚರ್ಚ್ ಪಾಲನಾ ಸಮಿತಿ ಉಪಾಧ್ಯಕ್ಷ ರೋಶನ್ ಮಾರ್ಟಿಸ್ ಮಾಣಿ ಸಹಕರಿಸಿದರು. ವಿಟ್ಲ ಚರ್ಚ್ ಪಾಲನಾ ಸಮಿತಿ ಕಾರ್ಯದರ್ಶಿ ಬಿ ವಿ ಮಾಡ್ತಾ ನಿರೂಪಿಸಿದರು. ವಲಯದ ಎಲ್ಲಾ ಚರ್ಚುಗಳ ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಹಾಗೂ ವಲಯದ ಎಲ್ಲಾ ಚರ್ಚುಗಳ ಪಾಲನಾ ಸಮಿತಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
