ಬಂಟ್ವಾಳ: ಯುವವಾಹಿನಿ (ರಿ) ಕೇಂದ್ರ ಸಮಿತಿಯು ವಿಶುಕುಮಾರ ದತ್ತಿನಿಧಿ ಸಂಚಾಲನಾ ಸಮಿತಿ ಮೂಲಕ ಕೊಡಮಾಡುತ್ತಿರುವ ವಿಶುಕುಮಾರ್ ಪ್ರಶಸ್ತಿಗೆ ಹಿರಿಯ ಕಥೆಗಾರ, ಕಾದಂಬರಿಕಾರ, ನಾಟಕಕಾರ, ಪ್ರಶಸ್ತಿಗಳ ಸರದಾರ ‘ಬೊಳುವಾರು ಮಹಮದ್ ಕುಂಞ ಇವರು ಆಯ್ಕೆಯಾಗಿದ್ದಾರೆ.
ಕನ್ನಡ ಗದ್ಯಸಾಹಿತ್ಯಕ್ಕೆ ಮುಸ್ಲಿಮ್ ಬದುಕನ್ನು ಮೊತ್ತಮೊದಲ ಬಾರಿಗೆ ಪರಿಚಯಿಸಿದ ಬೊಳುವಾರು ಮಹಮದ್ ಕುಂಞ ಪುತ್ತೂರಿನವರು, ಮೈಸೂರು ವಿಶ್ವವಿದ್ಯಾಲಯದಿಂದ, ಕುವೆಂಪು ಬಂಗಾರದ ಪದಕದೊಂದಿಗೆ ಕನ್ನಡ ಸ್ನಾತಕೋತ್ತರ ಪದವಿ ಪಡೆದವರು. ಸುಮಾರು 250ರಷ್ಟು ಸಣ್ಣಕತೆಗಳನ್ನು ಬರೆದು ಕನ್ನಡದ ಪ್ರಮುಖ ಸಣ್ಣ ಕತೆಗಾರರಲ್ಲಿ ಓರ್ವರೆಂದು ಗುರುತಿಸಲ್ಪಟ್ಟವರು. ‘ಅತ್ತ ಇತ್ತಗಳ ಸುತ್ತಮುತ್ತ’, ‘ದೇವರುಗಳ ರಾಜ್ಯದಲ್ಲಿ’, ‘ಅಂಕ’, ‘ಆಕಾಶಕ್ಕೆ ನೀಲಿ ಪರದೆ’, ‘ಒಂದು ತುಂಡು ಗೋಡೆ’, ‘ರುಖಿಯಾ’, ‘ರೊಟ್ಟಿ ಪಾತುಮ್ಮ’, ‘ಆಯ್ದ ಕತೆಗಳು’ ಎನ್ನುವ ಎಂಟು ಕಥಾ ಸಂಕಲನಗಳು, ‘ಜೆಹಾದ್’ ಮತ್ತು ‘ಸ್ವಾತಂತ್ರ್ಯದ ಓಟ’ ಕಾದಂಬರಿಗಳು, ‘ಪುನ್ನಪ್ರ ವಯಲಾರ್ ಸಮರ’ ಎಂಬ ಚಾರಿತ್ರಿಕ ನೀಲ್ಗತೆ, ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ಎನ್ನುವ ಮಕ್ಕಳ ಕಾದಂಬರಿ ಬರೆದಿರುವರು.

ಬೊಳುವಾರರು ಮಕ್ಕಳ ಸಾಹಿತ್ಯಲೋಕಕ್ಕೆ ಕಾಲಿಟ್ಟು, ದಶಕಗಳ ಹಿಂದೆ ಎಲ್ಲರ ನಾಲಗೆಯಲ್ಲಿ ನಲಿದು ಹೃದಯದಲ್ಲಿ ಅನುರಣಿಸುತ್ತಿದ್ದ ‘ಬೆಕ್ಕೇ ಬೆಕ್ಕೇ ಮುದ್ದಿನ ಸೊಕ್ಕೇ’, ‘ಚಂದಿರನೇತಕೆ ಓಡುವನಮ್ಮಾ’, ‘ಗಂಟೆಯ ನೆಂಟನೆ ಓ ಗಡಿಯಾರ’, ‘ನಾಯಿ ಮರಿ ನಾಯಿ ಮರಿ’ ಮುಂತಾದ ನೂರಾರು ಮಕ್ಕಳ ಹಾಡುಗಳನ್ನು ಸಂಪಾದಿಸಿ, ‘ತಟ್ಟು ಚಪ್ಪಾಳೆ ಪುಟ್ಟ ಮಗು’ ಎನ್ನುವುದಾಗಿ ಪ್ರಕಟಿಸಿ ತಲೆಮಾರಿನ ಪರಂಪರೆ ಮೆಚ್ಚುವ ಕೆಲಸ ಮಾಡಿದವರು. ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದ ‘ಪಾಪು ಗಾಂಧಿ ಗಾಂಧಿ ಬಾಪು ಆದ ಕತೆ’ ಕೃತಿಯ ಇಂಗ್ಲೀಷ್ ಅನುವಾದವನ್ನು ಲಂಡನ್ನಿನ ಪ್ರತಿಷ್ಠಿತ ‘ಪೀಕ್ ಪಬ್ಲಿಷಿಂಗ್ ಹೌಸ್’ ಪ್ರಕಟಿಸಿದೆ.
ಅನುವಾದಕರಾಗಿ ಬೊಳುವಾರರು ಕುರಾತುಲೀನ್ ಹೈದರ್ ಅವರ ಉರ್ದು ಕೃತಿಯನ್ನು ‘ಸಂತಫ್ಲೋರಾಳ ತಪ್ಪೊಪ್ಪಿಗೆ’ ಎಂಬುದಾಗಿ ಕನ್ನಡಕ್ಕೆ ತಂದಿರುವುದಲ್ಲದೆ, ಕೇಂದ್ರ ಸಾಹಿತ್ಯ ಅಕಾಡೆಮಿಗಾಗಿ ‘ಮಾದುವಾದ ಮಾನವ’ ಎಂಬ ಕೃತಿ ಅನುವಾದಿಸಿದ್ದಾರೆ.
ಅವರ ಸಂಪಾದಿತ ಕೃತಿಗಳು ‘ತಟ್ಟು ಚಪ್ಪಾಳೆ ಪುಟ್ಟ ಮಗು’, ಸಂತಮ್ಮಣ್ಣ, ಶತಮಾನಗಳ ಕತೆಗಳು, ದೆಹಲಿ ಕನ್ನಡ ಸಾಹಿತ್ಯ, ಮಕ್ಕಳ ನಾಟಕಗಳು, ಕಲಾಂ ಮೇಷ್ಟ್ರು.
ಅವರ ಕತೆಯನ್ನಾಧರಿಸಿ ‘ಮುನ್ನಡಿ’ ಎಂಬ ಹೆಸರಿನಲ್ಲಿ ಚಲನಚಿತ್ರವಾಗಿದ್ದು ಇದಕ್ಕೆ 2001ರಲ್ಲಿ ರಾಷ್ಟ್ರಪ್ರಶಸ್ತಿ ಲಭಿಸಿದೆ. 2002ರಲ್ಲಿ ‘ಅತಿಥಿ’ ಚಿತ್ರದ ಚಿತ್ರಕತೆ, ಸಂಭಾಷಣೆಗಾಗಿ ಅವರಿಗೆ ರಾಜ್ಯ ಪ್ರಶಸ್ತಿ ಪ್ರಾಪ್ತವಾಗಿದೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯಿಂದ ಗೌರವ ಪ್ರಶಸ್ತಿ ಸಹಿತ ಮೂರು ಬಾರಿ ಪುಸ್ತಕ ಬಹುಮಾನಗಳು, ಕೇಂದ್ರ ಸಾಹಿತ್ಯ ಅಕಾಡೆಮಿಯ ಬಾಲ ಸಾಹಿತ್ಯ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಕಲ್ಕತ್ತಾದ ಭಾರತೀಯ ಭಾಷಾ ಸಂಸ್ಥಾನ ಪ್ರಶಸ್ತಿ, ದೆಹಲಿಯ ಕಥಾ ಪ್ರಶಸ್ತಿ, ಪುತ್ತೂರಿನ ಶಿವರಾಮ ಕಾರಂತ ಬಾಲವನ ಪ್ರಶಸ್ತಿ, ಅಬುದಾಬಿಯ ಒWಈ ಪ್ರಶಸ್ತಿ ಸಹಿತವಾಗಿ ಹಲವು ಪ್ರಶಸ್ತಿಗಳಿಗೆ ಬೊಳುವಾರರು ಪಾತ್ರರಾಗಿದ್ದಾರೆ.
ಪುತ್ತೂರಿನ ಬಿ. ಅಬ್ಬಾಸ್ ಬ್ಯಾರಿ ಮತ್ತು ಶ್ರೀಮತಿ ಕುಲ್ಸುಮ್ ದಂಪತಿಯ ಹಿರಿಯ ಮಗನಾಗಿ 22-10-1951ರಂದು ಜನಿಸಿದ ಬೊಳುವಾರು ಮಹಮ್ಮದ್ ಕುಂಞಯವರು ಸಿಂಡಿಕೇಟ್ ಬ್ಯಾಂಕಿನ ಉದ್ಯೋಗಿಯಾಗಿ ದೇಶದ ಹಲವೆಡೆ ದುಡಿದು, ವರಿಷ್ಠಾಧಿಕಾರಿಯಾಗಿ ನಿವೃತ್ತರಾಗಿ, ಬೆಂಗಳೂರಿನ ಕೋರಮಂಗಲದಲ್ಲಿ ಪತ್ನಿ ಜುಬೇದಾ ಮತ್ತು ಮಮ್ತಾಜ್, ಬೇನಜೀರ್ – ಎಂಬ ಇಬ್ಬರು ಹೆಣ್ಣು ಮಕ್ಕಳೊಂದಿಗೆ ನೆಲೆಸಿ ಸಾಹಿತ್ಯ ಸಂಸರ್ಗದಲ್ಲಿ ನಿರತರು. ಖ್ಯಾತ ರಂಗಕರ್ಮಿ ಐ.ಕೆ. ಬೊಳುವಾರು ಇವರ ತಮ್ಮ. ಎಪ್ಪತ್ತರ ದಶಕದ ಆರಂಭದಲ್ಲಿ ತನ್ನಲ್ಲಿ ಸಾಹಿತ್ಯಾಸಕ್ತಿ ಮೊಳೆಯುತ್ತಿರುವ ದಿನಗಳಲ್ಲಿ ಓದಿದ್ದ ವಿಶುಕುಮಾರರ ‘ಕರಾವಳಿ’ (1971)ಯಂತಹ ಕಾದಂಬರಿಗಳು, ಸಾಹಿತ್ಯ ರಚನೆಯಲ್ಲಿ ತನಗೆ ಮೊದಲ ಪ್ರೇರಣೆ ಎನ್ನುವ ಬೊಳುವಾರು ಮಹಮ್ಮದ್ ಕುಂಞ ಅವರು 2015ನೇಯ ಸಾಲಿನ ಪ್ರತಿಷ್ಠಿತ ‘ವಿಶುಕುಮಾರ್ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
ಆಗಸ್ಟ್ 9 ರಂದು ಮಧ್ಯಾಹ್ನ ಬಂಟ್ವಾಳದ ಮೆಲ್ಕಾರ್ ಬಿರ್ವ ಅಡಿಟೋರಿಯಂನಲ್ಲಿ ನಡೆಯಲಿರುವ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ಮುರಳೀಧರ್ ಉಪಾಧ್ಯ ಪ್ರಶಸ್ತಿ ಪ್ರದಾನಿಸುವರು. ಪ್ರಶಸ್ತಿಯು ಹತ್ತು ಸಾವಿರ ನಗದು, ತಾಮ್ರದ ಫಲಕ, ಪ್ರಶಸ್ತಿ ಪತ್ರ, ಒಳಗೊಂಡಿದೆ.
