ಬಂಟ್ವಾಳ :ನಮ್ಮ ಜೀವನವು ಚದುರಂಗದ ಆಟದಂತೆ. ಎಲ್ಲರೂ ರಾಜನ ಸ್ಥಾನಕ್ಕೆ ಹಂಬಲಿಸುವವರೇ. ರಾಜನ ಸ್ಥಾನ ಸುರಕ್ಷಿತವಾಗಿರಲು ಕಾಲಾಳುಗಳೇ ಕಾರಣ ಆದರೆ ಪ್ರಸ್ತುತ ಸಮಾಜದಲ್ಲಿ ಅಧಿಕಾರಿಗಳು ಕಾಲಾಳುಗಳನ್ನು ಅಂದರೆ ಜನಸಾಮಾನ್ಯರನ್ನು ಕಡೆಗಣಿಸುತ್ತಿದ್ದಾರೆ ಎಂದು ಮಂಗಳೂರು ಇನ್ಫೋಸಿಸ್ನ ವಸಂತ ಕಜೆ ತಿಳಿಸಿದರು.
ಅವರು ಶ್ರೀರಾಮ ಪದವಿ ಪೂರ್ವ ವಿದ್ಯಾಲಯ ಕಲ್ಲಡ್ಕದಲ್ಲಿ ವಿದ್ಯಾಭಾರತಿಯ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಚದುರಂಗ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡಿದರು.
ಶ್ರೀರಾಮ ವಿದ್ಯಾಕೇಂದ್ರದ ಸಂಚಾಲಕರಾದ ಡಾ|| ಪ್ರಭಾಕರ ಭಟ್ ಮಾತನಾಡಿ “ಚದುರಂಗದ ಆಟದ ಮೂಲಕ ಯುದ್ಧ ಕಲೆಯು ತಿಳಿಯುತ್ತದೆ. ದೇಶದ ರಕ್ಷಣೆಯಲ್ಲಿ ಚದುರಂಗದಾಟ ಮಹತ್ವದ್ದಾಗಿದೆ. ಕಾರ್ಗಿಲ್ ಯುದ್ಧಗಳನ್ನು ಗೆಲ್ಲಲು ಪ್ರೇರಣೆ ಚದುರಂಗದಾಟ” ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ (ಉಪಾಧ್ಯಕ್ಷರು,ವಿದ್ಯಾಭಾರತಿ ದ.ಕ. ಜಿಲ್ಲೆ ಹಾಗೂ ಸಂಚಾಲಕರು ಸರಸ್ವತಿ ವಿದ್ಯಾಲಯ ಕಡಬ)ಶ್ರೀ ವೆಂಕಟ್ರಮಣ ರಾವ್ ಮಾತನಾಡಿ “ದೇಶದ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಕಾರ್ಯದಲ್ಲಿ ವಿದ್ಯಾಭಾರತಿ ಕೆಲಸ ಮಾಡುತ್ತದೆ. ಭಾರತವು ಕ್ರೀಡಾಕ್ಷೇತ್ರಗಳಲ್ಲೂ ಇತರ ಎಲ್ಲಾ ಕ್ಷೇತ್ರಗಳಲ್ಲೂ ಮುಂದುವರೆದು ಜಗತ್ತಿನಲ್ಲೇ ಶ್ರೇಷ್ಠ ದೇಶವಾಗಬೇಕು, ನಾವು ಮಾಡುವ ಕೆಲಸ ಭಾರತಮಾತೆಗೋಸ್ಕರ ಎಂಬ ಸಮರ್ಪಣಾ ಮನೋಭಾವದಿಂದ ಕೆಲಸ ಮಾಡಿದರೆ ಭಾರತವು ಶ್ರೇಷ್ಠ ದೇಶವಾಗುತ್ತದೆ ಎಂದರು.
ಶ್ರೀರಾಮ ವಿದ್ಯಾಕೇಂದ್ರದ ಮುಖ್ಯ ಕಾರ್ಯನಿರ್ವಾಹಕ ಶ್ರೀ ವಸಂತ ಮಾಧವ ಇವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶ್ರೀರಾಮ ಪದವಿ ಪೂರ್ವ ವಿದ್ಯಾಲಯದ ಪ್ರಾಚಾರ್ಯ ಶ್ರೀ ವಸಂತ ಬಲ್ಲಾಳ್ ಸ್ವಾಗತಿಸಿ, ಇಂಗ್ಲೀಷ್ ಉಪನ್ಯಸಕಿ ಅಕ್ಷತ ಕಾರ್ಯಕ್ರಮ ನಿರೂಪಿಸಿದರು.
