ಬಂಟ್ವಾಳ; ಹಾಸನ ಬಿ.ಸಿ.ರೋಡು ರಾಷ್ಟ್ರೀಯ ಹೆದ್ದಾರಿಯ ಚತುಷ್ಪಥ ಕಾಮಗಾರಿಗಾಗಿ ಕಲ್ಲಡ್ಕ ದಲ್ಲಿ ಬೈಪಾಸ್ ಬೇಡವೇ ಬೇಡ, ಕಲ್ಲಡ್ಕ ಪೇಟೆಯ ಮೂಲಕವೇ ಮೇಲ್ಸೇತುವೆ ನಿರ್ಮಿಸಿ, ಎಲ್ಲಾ ಸಮಸ್ಯೆಗಳಿಗೆ ಮೇಲ್ಸೇತುವೆಯೊಂದೇ ಪರಿಹಾರ ಎಂದು ಮಾಜಿ ಶಾಸಕ ಎ.ರುಕ್ಮಯ ಪೂಜಾರಿ ಅಭಿಪ್ರಾಯ ಪಟ್ಟಿದ್ದಾರೆ.

ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಸಂಜೆ ಕಲ್ಲಡ್ಕ, ಹಾಗೂ ಬಾಳ್ತಿಲ ಗ್ರಾಮಸ್ಥರ ಪರವಾಗಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಲ್ಲಡ್ಕ ಪೇಟೆಯಲ್ಲಿ ಮಣ್ಣು ಹಾಕಿ ಎತ್ತರಿಸಿ ಅಂಡರ್ ಪಾಸ್ ನಿರ್ಮಿಸುವ ಯೋಜನೆಯನ್ನು ಹಾಗೂ ಬೈಪಾಸ್ ನಿರ್ಮಿ ಸುವ ಯೋಜನೆಯನ್ನು ಹೆದ್ದಾರಿ ಇಲಾಖೆ ತತ್ಕ್ಷಣಕ್ಕೆ ಕೈಬಿಡುವಂತೆ ಆಗ್ರಹಿಸಿದರು. ಪೇಟೆಯಲ್ಲಿ ಮಣ್ಣು ಹಾಕಿ ಎತ್ತರಿಸುವುದು ಅವೈಜ್ಞಾನಿಕ ಎಂದ ಅವರು, ಬೈಪಾಸು ರಸ್ತೆ ನಿರ್ಮಾಣ ಕೂಡ ಅಪ್ರಸ್ತುತ ಎಂದರು.
ಈಗಾಗಲೇ ಗ್ರಾಮಸ್ಥರ ವಿರೋಧದ ನಡುವೆಯೀ 2-3 ಬಾರಿ ಇಲಾಖೆ ಸರ್ವೆ ಕಾರ್ಯ ನಡೆಸಿದೆ, ಒಂದು ವೇಳೆ ಬೈಪಾಸ್ ನಿರ್ಮಾಣಕ್ಕೆ ಮುಂದಾದಲ್ಲಿ ರಾಜಕಿಯೇತರ ಸಂಘಟನೆಯ ಮೂಲಕ ಉಗ್ರ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.ಬೈಪಾಸ್ ರಸ್ತೆ ನಿರ್ಮಾ ಣಕ್ಕೆ ಅಭಿವೃದ್ದಿ ಹೊಂದಿದ ವಿವಿಧ ಜಮೀನುಗಳ ಭೂ ಸ್ವಾಧೀನ ಆಗಬೇಕು ಅಲ್ಲದೆ ತಗ್ಗು ಎತ್ತರದ ಗುಡ್ಡ ಪ್ರದೇಶದಲ್ಲಿ ರಸ್ತೆ ನಿರ್ಮಾಣಕ್ಕೆ ಹಲವಾರು ಪಟ್ಟು ಹೆಚ್ಚು ಹಣ ವೆಚ್ಚವಾಗುತ್ತದೆ.
ಮಾತ್ರವಲ್ಲದೆ ಸದ್ರಿ ಪ್ರದೇಶದಲ್ಲಿ ವಾಸವಾಗಿರುವ ಬಡಕುಟುಂಬಗಳು ನಿರಾಶ್ರಿತರಾಗುವ ಅಪಾಯವಿದೆ ಎಂದರು. ಈ ಹಿನ್ನೆಲೆಯಲ್ಲಿ ಪೇಟೆಯಲ್ಲಿ 35 ಮೀಟರ್ ಅಗಲದ ಸ್ಥಳವನ್ನು ಉಪಯೋಗಿಸಿ ಪಿಲ್ಲರ್ ಸಹಾಯದಿಂದ ಮೇಲ್ಸೇತುವೆ ನಿರ್ಮಿಸಬೇಕು, ಕಾಲುದಾರಿಗೆ ವೈಜ್ಞಾನಿಕವಾಗಿ ರಕ್ಷಣಾ ವ್ಯವಸ್ಥೆ ಕಲ್ಪಿಸಬೇಕು ಎಂಬ ಮನವಿಯನ್ನು ಸಚಿವರು ಹಾಗೂ ಸಂಸದರಿಗೆ ಸಲ್ಲಿಸಲಾಗಿದೆ. ಪೂರಕ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದರು.
ಕಲ್ಲಡ್ಕ ಪೇಟೆ ಮೂಲಕ ಮೇಲ್ಸೇತುವೆಯ ಚತುಷ್ಪಥ ರಸ್ತೆ ನಿರ್ಮಾಣಕ್ಕೆ ಕೆಲವೇ ಕೆಲವು ಜಮೀನು ಒತ್ತುವರಿ ಆಗಬೇಕಿದ್ದು, ಅವರಿಗೆ ಸೂಕ್ತಪರಿಹಾರ ನೀಡಲಿ ಎಂದು ಆಗ್ರಹಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ನಾರಾಯಣ ಸೋಮಯಾಜಿ, ಶ್ರೀಪತಿಭಟ್, ಜಯಾನಂದ ಆಚಾರ್ಯ, ವಿಠಲ್ ನಾಯ್ಕ್, ಮೋಹನ್ ಪಿ.ಎಸ್, ದಿನೇಶ್ ಅಮ್ಟೂರು ಮೊದಲಾದವರು ಉಪಸ್ಥಿತರಿದ್ದರು.
