ದೆಹಲಿ: 1993ರ ಮುಂಬೈ ಸ್ಫೋಟ ಪ್ರಕರಣದಲ್ಲಿ ಅಪರಾಧಿ ಎಂದು ಸಾಬೀತಾಗಿ ಗಲ್ಲುಶಿಕ್ಷೆಗೆ ಒಳಗಾಗಿದ್ದ ಯಾಕೂಬ್ ಮೆಮನ್ನನ್ನು ಇಂದು ಮುಂಜಾನೆ ಏಳು ಗಂಟೆಯ ಹೊತ್ತಿಗೆ ನಾಗ್ಪುರ ಕೇಂದ್ರ ಕಾರಾಗೃಹದಲ್ಲಿ ನೇಣು ಕುಣಿಕೆಗೆ ಹಾಕಲಾಯಿತು. ಈ ಹಿನ್ನೆಲೆಯಲ್ಲಿ ನಾಗ್ಪುರ ಜೈಲಿನ ಸುತ್ತ ಹಾಗೂ ಮಹಾರಾಷ್ಟ್ರದ ಎಲ್ಲಾ ಪೊಲೀಸ್ ಠಾಣೆಗಳಿಗೆ ಬಿಗಿಭದ್ರತೆ ವಹಿಸಲಾಗಿತ್ತು.
yakuba
ತನ್ನ ಮರಣಶಿಕ್ಷೆಯನ್ನು ತಡೆದು ಕ್ಷಮಾದಾನ ನೀಡಬೇಕೆಂದು ಯಾಕೂಬ್ ರಾಷ್ಟ್ರಪತಿಯಲ್ಲಿ ಮನವಿ ಮಾಡಿಕೊಂಡಿದ್ದ. ಈ ಮನವಿಯನ್ನು ರಾಷ್ಟ್ರಪತಿ ಪ್ರಣಬ್ ಮುಖರ್ಜಿ  ತಿರಸ್ಕರಿಸುವ ಮೂಲಕ ಯಾಕೂಬ್ ಮುಂದಿದ್ದ ಎಲ್ಲಾ ಬಾಗಿಲುಗಳು ಮುಚ್ಚಿದ್ದವು. ಬಳಿಕ ತಡರಾತ್ರಿ ವೇಳೆ ಮತ್ತೊಂದು ಹೈಡ್ರಾಮಾ ನಡೆಯಿತು. ಯಾಕೂಬ್ ಪರ ವಕೀಲರು ರಾಷ್ರಪತಿ ಪ್ರಣಬ್ ನಿರ್ಣಯವನ್ನು ಪ್ರಶ್ನಿಸಿ ಹಾಗೂ ಆತನಿಗೆ ಕ್ಷಮಾದಾನ ನೀಡಬೇಕೆಂದು ಆಗ್ರಹಿಸಿ ಸುಪ್ರೀಂಕೋರ್ಟ್ ಗೆ ಮತ್ತೊಂದು ಅರ್ಜಿಯನ್ನು ಸಲ್ಲಿಸಿದರು.
ಈ ಅರ್ಜಿಯನ್ನು ರಾತ್ರಿ ಸುಮಾರು 3.30ಕ್ಕೆ ಕೈಗೆತ್ತಿಕೊಂಡ ಸುಪ್ರೀಂಕೋರ್ಟ್ ನ ದೀಪಕ್ ಮಿಶ್ರಾ ತ್ರಿಸದಸ್ಯ ಪೀಠ, ಯಾಕೂಬ್ನ ಮನವಿಯನ್ನು ಪುರಸ್ಕರಿಸಿದರೆ ಅದು ನ್ಯಾಯಾಂಗ ನಿರಾಕರಣೆ ಆಗುತ್ತದೆ ಎಂದು ಅರ್ಜಿಯನ್ನು ತಿರಸ್ಕರಿಸಿ ಗಲ್ಲು ಖಾಯಂಗೊಳಿಸಿದ್ದಾರೆ. ಇದಾದ ಬಳಿಕ ಯಾಕೂಬ್ಗೆ ಗುಪ್ತಪತ್ರದ ಮೂಲಕ ಗಲ್ಲಿಗೇರಿಸುವ ಕುರಿತು ಮಾಹಿತಿ ನೀಡಲಾಯಿತು. ಈ ವೇಳೆ ಆತ ನಿರ್ವಿಕಾರವಾಗಿ ಕಂಡುಬಂದ ಎಂದು ಜೈಲಿನ ಮೂಲಗಳು ತಿಳಿಸಿವೆ.
ನ್ಯಾಯಾಲಯದ ಆದೇಶದಂತೆ ಇಂದು ನಾಗ್ಪುರ ಜೈಲಿನ ತೆರೆದ ಬಯಲಿನಲ್ಲಿ ಯಾಕೂಬ್ಗೆ ಗಲ್ಲು ವಿಧಿಸಲಾಯಿತು. ನಿನ್ನೆ ರಾತ್ರಿ ಆತನ ಕುಟುಂಬಸ್ಥರಿಗೆ ಜೈಲಿನಲ್ಲಿ ಆತನ ಜೊತೆ ಮಾತನಾಡುವ ಕೊನೆಯ ಅವಕಾಶವನ್ನು ಕಲ್ಪಿಸಲಾಗಿತ್ತು.
ಇಂದು ಮುಂಜಾನೆ 3.30ರ ಸುಮಾರಿಗೆ ಯಾಕೂಬ್ನನ್ನು ಎಬ್ಬಿಸಿದ ಅಧಿಕಾರಿಗಳು ಆತನಿಗೆ ಹೊಸಬಟ್ಟೆ ನೀಡಿ ಸ್ನಾನ ಮಾಡಲು ತಿಳಿಸಿದರು. ನಂತರ ದೇವರಿಗೆ ಪ್ರಾರ್ಥನೆ ಮಾಡಲು ಅನುಮತಿ ನೀಡಲಾಯಿತು. ವೈದ್ಯರು ಆತನ ದೇಹದ ತಪಾಸಣೆ ನಡೆಸಿ 4.30ಕ್ಕೆ ಆತನಿಗೆ ಉಪಹಾರ ನೀಡಲಾಯಿತು. ಮೂಲಗಳ ಪ್ರಕಾರ ಸೌದಿ ಅರೇಬಿಯಾದಿಂದ ತರಲಾದ ಖರ್ಜೂರವನ್ನು ಉಪಹಾರದಲ್ಲಿ ಹಾಲು ಮತ್ತು ಬಾಳೆಹಣ್ಣಿನ ಜೊತೆ ಯಾಕೂಬ್ಗೆ ನೀಡಲಾಗಿದೆ. ನಂತರ ಹೊರಬಂದ ಅಧಿಕಾರಿಗಳು 5.30ರ ತನಕ ಯಾಕೂಬ್ಗೆ ಆರಾಮ ಮಾಡುವಂತೆ ತಿಳಿಸಿ ತನಗೆ ಬೇಕಾದ ಧಾರ್ಮಿಕ ಪುಸ್ತಕವನ್ನು ಓದುವಂತೆ ತಿಳಿಸಿದ್ದಾರೆ. 7 ಗಂಟೆಯ ಹೊತ್ತಿಗೆ ಎಲ್ಲಾ ವಿಧಿವಿಧಾನಗಳನ್ನು ಮತ್ತು ಕಾನೂನು ನಿಯಮಗಳನ್ನು ಪಾಲಿಸಿದ ನಂತರ ಯಾಕೂಬ್ನನ್ನು ಗಲ್ಲಿಗೇರಿಸಲಾಯಿತು.
ಆತನ ಮೃತದೇಹದ ಮರಣೋತ್ತರ ಪರೀಕ್ಷೆ ಜೈಲಿನೊಳಗಡೆಯೇ ನಡೆದು ನಂತರ ದೇಹವನ್ನು ಆತನ ಕುಟುಂಬಿಕರಿಗೆ ಹಸ್ತಾಂತರಿಸಲಾಗಿದೆ.

By Suddi9

Leave a Reply

Your email address will not be published. Required fields are marked *