ಹರೇಕಳ: ಮರಳು ಹೊತ್ತು ವಾಪಸ್ಸಾಗುತ್ತಿದ್ದ ದೋಣಿಯೊಂದು ಮಗುಚಿಬಿದ್ದು ಒಂದೇ ಕುಟುಂಬದ ಓರ್ವ ನಾಪತ್ತೆಯಾಗಿ, ನಾಲ್ವರು ರಕ್ಷಣೆಗೊಳಗಾಗಿರುವ ಘಟನೆ ಪಾವೂರು ಕಡವಿನ ಬಳಿಯ ನೇತ್ರಾವತಿ ನದಿಯ ಮಧ್ಯಭಾಗದಲ್ಲಿ ಬುಧವಾರ ಮಧ್ಯಾಹ್ನ ವೇಳೆ ಸಂಭವಿಸಿದೆ.
ಹರೇಕಳ ರಾಜಗುಡ್ಡೆ ನಿವಾಸಿ ಲುಕ್ ಮೋನ್ (21) ನಾಪತ್ತೆಯಾದವರು. ಇವರ ಜತೆಗಿದ್ದ ತಂಝೀಲ್, ಅಝೀಜ್, ಬದ್ರುದ್ದೀನ್ , ಸಲೀಂ ಎಂಬವರನ್ನು ರಕ್ಷಿಸಲಾಗಿದೆ.


ಮಧ್ಯಾಹ್ನ 1.45 ರ ವೇಳೆಗೆ ದೋಣಿಯಲ್ಲಿ ನಾಲ್ವರು ಮರಳು ತರಲೆಂದು ಅಡ್ಯಾರು ಸಹ್ಯಾದ್ರಿ ಕಾಲೇಜು ಸಮೀಪ ನದಿಯ ಮಧ್ಯಭಾಗಕ್ಕೆ ತೆರಳಿದ್ದರು. ಮರಳು ತುಂಬಿಸಿ ವಾಪಸ್ಸಾಗುತ್ತಿದ್ದ ವೇಳೆ ಮಧ್ಯೆ ಜೋರಾಗಿ ಬೀಸಿದ ಗಾಳಿಯಿಂದಾಗಿ ದೋಣಿ ಮಗುಚಿಬಿದ್ದಿದೆ. ಈ ವೇಳೆ ತಂಝೀಲ್, ಬದ್ರುದ್ದೀನ್ ಎಂಬವರನ್ನು ಪಾವೂರು ಕಡವಿನ ಬಳಿಯಿದ್ದ ರಿಕ್ಷಾ ಚಾಲಕ ಇಕ್ಬಾಲ್ ಎಂಬವರು ದೋಣಿ ಮೂಲಕ ತೆರಳಿ ರಕ್ಷಿಸಿ ಮೇಲಕ್ಕೆತ್ತಿದ್ದಾರೆ. ಅಝೀಜ್ ಮತ್ತು ಸಲೀಂ ಎಂಬವರು ಈಜಿ ದಡ ಸೇರಿದರೆ, ಲುಕ್ಮೋನು ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದಾರೆ.
ಒಂದೇ ಕುಟುಂಬದವರು : ದೋಣಿ ಮೂಲಕ ಮರಳುಗಾರಿಕೆಗೆ ತೆರಳಿದ ಐವರು ಒಂದೇ ಕುಟುಂಬದವರು. ತಂಝೀಲ್, ಅಝೀಜ್, ಬದ್ರುದ್ದೀನ್ ಮೂವರೂ ಸಹೋದರರಾಗಿದ್ದು, ಸಲೀಂ ಅವರ ಭಾವನಾಗಿದ್ದು, ನಾಪತ್ತೆಯಾಗಿರುವ ಲುಕ್ ಮೋನು ಅವರ ಸಹೋದರಿ ಪುತ್ರನಾಗಿದ್ದನು. ಕಳೆದ 7 ವರ್ಷಗಳಿಂದ ಇಡೀ ಕುಟುಂಬ ಮಂಗಳೂರಿನ ಆಸೀಫ್ ಎಂಬವರಿಗೆ ಸೇರಿದ ದೋಣಿಯಲ್ಲಿ ನದಿಯಿಂದ ಮರಳು ತೆಗೆದು ದಡಕ್ಕೆ ಸಾಗಿಸುತ್ತಿದ್ದರು.






