ಉಳ್ಳಾಲ: ಬೇಕರಿ ಮಾಲೀಕನಿಗೆ ಹಲವು ಪ್ರಕರಣಗಳ ಆರೋಪಿ ಸಹಿತ ಇಬ್ಬರ ತಂಡ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ಉಳ್ಳಾಲದ ಮಾಸ್ತಿಕಟ್ಟೆ ಎಂಬಲ್ಲಿ ನಿನ್ನೆ ತಡರಾತ್ರಿ ವೇಳೆ ಸಂಭವಿಸಿದೆ. ಮಾಸ್ತಿಕಟ್ಟೆ ಸ್ವೀಟ್ ಬೇಕರಿ ಮಾಲೀಕ ಅಬ್ದುಲ್ ಸಲಾಂ(30) ಚೂರಿ ದಾಳಿಗೆ ಒಳಗಾದವರು.

ತಡರಾತ್ರಿ ಅಂಗಡಿಯೊಳಗಿದ್ದ ಸಂದರ್ಭ ನಾಲ್ವರು ಮುಸುಕುಧಾರಿಗಳ ತಂಡ ಏಕಾಏಕಿ ಅಂಗಡಿಯೊಳಗೆ ನುಗ್ಗಿ ಚೂರಿಯಿಂದ ಕುತ್ತಿಗೆ, ಕೈ ಹಾಗೂ ಹೊಟ್ಟೆ ಭಾಗಕ್ಕೆ ಗಂಭೀರವಾಗಿ ಇರಿದು ಪರಾರಿಯಾಗಿದೆ. ಗಂಭೀರ ಗಾಯಗೊಂಡ ಅಬ್ದುಲ್ ಸಲಾಂ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಗಂಭೀರ ಗಾಯಗಳಾಗಿದ್ದ ಹಿನ್ನೆಲೆಯಲ್ಲಿ ಮಂಗಳೂರಿನ ಯುನಿಟಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕುಖ್ಯಾತನಿಂದ ದಾಳಿ: ಕಾಂಚನಾ ಟೆಕ್ಸ್ ಟೈಲ್ಸ್ ಮ್ಯಾನೇಜರ್ ಕೊಲೆ ಸಹಿತ 10ಕ್ಕೂ ಅಧಿಕ ಪ್ರಕರಣಗಳ ಆರೋಪಿಯಾಗಿದ್ದ ಫಯಾಝ್ ಮತ್ತು ಉಳ್ಳಾಲ ನಿವಾಸಿ ಕೋರಿ ಹ್ಯಾರೀಸ್ ಮತ್ತು ಇತರರು ಸೇರಿ ಕೃತ್ಯ ಎಸಗಿರುವುದಾಗಿ ಮೂಲಗಳಿಂದ ತಿಳಿದುಬಂದಿದೆ.

ಪೂರ್ವದ್ವೇಷ: ಫಯಾಝ್ ಮತ್ತು ತಂಡ ಮಾಸ್ತಿಕಟ್ಟೆ ಸಮೀಪ ಗ್ರಾಹಕರು ಸಹಿತ ಅವರಿಗೆ ಕಿರುಕುಳ ನೀಡುತ್ತಿದ್ದುದನ್ನು ವಿರೋಧಿಸಿ ಪೊಲೀಸರಿಗೆ ದೂರು ನೀಡಿದ್ದರು. ಇದರಿಂದ ದ್ವೇಷ ಇಟ್ಟುಕೊಂಡಿದ್ದ ಫಯಾಝ್ ಹಲವು ಬಾರಿ ಎಚ್ಚರಿಕೆಯನ್ನು ನೀಡಿದ್ದನೆನ್ನಲಾಗಿದೆ. ಇದೇ ದ್ವೇಷದ ಹಿನ್ನೆಲೆಯಲ್ಲಿ ತಂಡದ ಜತೆಗೆ ಸೇರಿಕೊಂಡು ದಾಳಿ ನಡೆಸಿದ್ದಾರೆನ್ನಲಾಗಿದೆ.
ಉಳ್ಳಾಲ ಕೊಣಾಜೆ ಠಾಣಾ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಚೂರಿ ಇರಿತ ಪ್ರಕರಣಗಳು ನಿರಂತರ ನಡೆಯುತ್ತಿದ್ದುದರಿಂದ ಮಾಸ್ತಿಕಟ್ಟೆ ಪ್ರಕರಣವು ತುಸು ಕಾಲ ಉದ್ರಿಕ್ತ ವಾತಾವರಣವನ್ನು ನಿರ್ಮಿಸಿತ್ತು. ಆದರೆ ಪೂರ್ವದ್ವೇಷದಿಂದ ದಾಳಿ ನಡೆದಿರುವುದರ ಹಿನ್ನೆಲೆಯಲ್ಲಿ ಪ್ರಕರಣ ಹಿಂದಿನ ಪ್ರಕರಣದಂತೆ ಗಂಭೀರತೆಯನ್ನು ಪಡೆಯಲಿಲ್ಲ. ಸ್ಥಳಕ್ಕೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಉಳ್ಳಾಲ ಪೊಲೀಸರು ಭೇಟಿ ನೀಡಿದ್ದಾರೆ

By Suddi9

Leave a Reply

Your email address will not be published. Required fields are marked *