ಮೂಡುಬಿದರೆ: ಮದುವೆಯಾಗುವುದಾಗಿ ನಂಬಿಸಿ ಪಾಲಡ್ಕದ ಯುವತಿಯೊಬ್ಬಳ ಜತೆ ದೈಹಿಕ ಸಂಬಂಧ ಬೆಳೆಸಿ ಬಳಿಕ ಆಕೆಗೆ ಕೈಕೊಟ್ಟ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ.
ಮೂಡುಬಿದರೆ ಪುರಸಭಾ ವ್ಯಾಪ್ತಿಯ ಮಾಸ್ತಿಕಟ್ಟೆಯ ದಲಿತ ಯುವಕ, ವೃತ್ತಿಯಲ್ಲಿ ಕೂಲಿ ಕಾರ್ಮಿಕನಾಗಿರುವ ಸತೀಶ್ ಎಂಬಾತ ಕಡಂದಲೆಯ ಅದೇ ಸಮುದಾಯದ ಯುವತಿಯೊಬ್ಬಳನ್ನು ಮದುವೆಯಾಗುವುದಾಗಿ ನಂಬಿಸಿ ಕಳೆದ ಡಿಸೆಂಬರ್ ತಿಂಗಳಿನಿಂದ ಆಕೆಯೊಂದಿಗೆ ದೈಹಿಕ ಸಂಪರ್ಕವಿರಿಸಿಕೊಂಡಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಈತ ಜೂನ್ನಲ್ಲಿ ಬೇರೊಬ್ಬಳು ಯುವತಿಯನ್ನು ಮದುವೆಯಾದ ಎನ್ನಲಾಗಿದೆ. ಈ ವಿಷಯ ತಿಳಿದು ವಂಚನೆಗೊಳಗಾದ ಯುವತಿ ಶನಿವಾರ ಯುವಕನ ವಿರುದ್ಧ ಅತ್ಯಾಚಾರ ದೂರು ದಾಖಲಿಸಿದ್ದಾಳೆ. ಈ ವಿಷಯ ಗೊತ್ತಾಗಿ ಯುವಕ ತಲೆಮರೆಸಿಕೊಂಡಿದ್ದು ಸೋಮವಾರ ಮೂಡಬಿದರೆ ಪೊಲೀಸರು ಆತನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದಾಗ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
