ಮುಂಬಯಿ: ಒಂದು ಕಾಲದಲ್ಲಿ ಮಾಯಾನಗರಿ ಮುಂಬಯಿಯಲ್ಲಿ ಹತ್ತಾರು ಕನ್ನಡ ಶಾಲೆಗಳು ಉತ್ಸಾಹಭರಿತವಾಗಿ ವಿದ್ಯಾದಾನದಲ್ಲಿ ತೊಡಗಿಸಿ ಕೊಂಡಿದ್ದು, ಇದೀಗ ಇವುಗಳ ಸಂಖ್ಯೆ ಕ್ಷಿಣಿಸುತ್ತಿರುವುದು ದುರದೃಷ್ಟಕರ. ಇದಕ್ಕೆ ಇಂಗ್ಲೀಷ್ ಮಮತೆ ಮತ್ತು ಉಪಾಧ್ಯಾಯರುಗಳ ನೇಮಕಾತಿಯೂ ಮೂಲ ಕಾರಣ. ಕಲಿಕೆಗೆ ಕೀಳರಿಮೆಯ ಭಾಷಾ ವ್ಯಾಮೋಹ ಸಲ್ಲದು. ಕೆಲವರಿಗಂತೂ ಮುನ್ಸಿಪಾಲ್ ಶಾಲೆ ಎನ್ನುವ ಅಂಜಿಕೆ ಕನ್ನಡ ಶಾಲೆಗಳ ಸ್ತಬ್ಧತೆಗೆ ಕಾರಣ. ಆದರೂ ಮುಂಬಯಿಯಲ್ಲಿ ಉತ್ತರ ಕರ್ನಾಟಕದ ಜನತೆ ತಮ್ಮ ಮಕ್ಕಳಿಗೆ ಕನ್ನಡದಲ್ಲಿ ಆದ್ಯತೆ ನೀಡುವುದರಿಂದ ಅಲ್ಪಮಟ್ಟದಲ್ಲಿ ಕನ್ನಡ ಶಾಲೆಗಳು ಸಾಗುತ್ತಿವೆ ಎನ್ನುವುದಂತೂ ಸತ್ಯ. ಕಲಿಯುವವರು ಎಲ್ಲೂ, ಹೇಗೂ ಕಲಿಯುತ್ತಾರೆ ಅವರಿಗೆ ಭಾಷಾ ಮಾದ್ಯಮದ ಪರಿಧಿಯಿಲ್ಲ. ಅರ್ಹ ಮಕ್ಕಳಿಗೆ ಪರಿಕರಗಳ ಜೊತೆಗೆ ಪ್ರೋತ್ಸ್ಸಾಹಕರ ಅಗತ್ಯವೂ ಇದೆ. ಮಕ್ಕಳು ಕೀಳರಿಮೆ ಪರಿಗಣಿಸದೆ ವಿದ್ಯಾರ್ಥಿ ಜೀವನವನ್ನು ಸುವರ್ಣಮಯ ಗೊಳಿಸಬೇಕು. ಶ್ರದ್ಧಾಪೂರ್ವಕವಾಗಿ ಕಲಿತಲ್ಲಿ ಎಲ್ಲವೂ ಒಳಿತಾಗುತ್ತಾದೆ ಎಂದು ಶ್ರೀ ಉಮಾ ಮಹೇಶ್ವರೀ ದೇವಸ್ಥಾನ ಜೆರಿಮೆರಿ ಇದರ ಪ್ರಧಾನ ಆರ್ಚಕ ಶ್ರೀನಿವಾಸ ಎನ್.ಉಡುಪ ಅಭಿಪ್ರಾಯ ಪಟ್ಟರು.
ಸ್ಥಾನೀಯ ಹೆಸರಾಂತ ಸಮಾಜ ಸೇವಕ, ಶಿಕ್ಷಣಪ್ರೇಮಿ ತೋನ್ಸೆ ಸಂಜೀವ ಪೂಜಾರಿ ಮುಂದಾಳುತ್ವದಲ್ಲಿ ಕುರ್ಲಾ ಪಶ್ಚಿಮದ ಜೆರಿಮೆರಿ ಇಲ್ಲಿನ ಗಣೇಶ ಮೈದಾನ ಕಾಜುಪಾಡ ಇಲ್ಲಿನ ಬೃಹನ್ಮುಂಬಯಿ ಮಹಾನಗರಪಾಲಿಕೆಯ ಕನ್ನಡ ಮಾಧ್ಯಮ ಕಲಿಕೆಯ ಮುನ್ಸಿಪಾಲಿಟಿ ಶಾಲಾ ಮಕ್ಕಳಿಗೆ ಇಂಗ್ಲೀಷ್-ಕನ್ನಡ ಕಲಿಕಾ ಪುಸ್ತಕ ಮತ್ತು ಬರಹ ಪುಸ್ತಕಗಳ ವಿತರಣಾ ಕಾರ್ಯಕ್ರಮ ಜು.11ರಂದು ಶನಿವಾರ ಅಪರಾಹ್ನ ಜೆರಿಮೆರಿ ಅಲ್ಲಿನ ಸೋನಿ ಅಪಾರ್ಟ್ ಮೆಂಟ್ ನಲ್ಲಿ ನಡೆಸಲಾಯಿತು. ಈ ಸರಳ ಕಾರ್ಯಕ್ರಮದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಕನ್ನಡ ಕಲಿಕೆಯ ಸರ್ವ ವಿದ್ಯಾರ್ಥಿ ಗಳಿಗೆ ಇಂಗ್ಲೀಷ್-ಕನ್ನಡ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಶಿಕ್ಷಣ ಪ್ರೋತ್ಸಾಹಕ, ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ ಮುಂಬಯಿ ಇದರ ಗೋಪಾಲ ಕೃಷ್ಣ ಪಬ್ಲಿಕ್ ಟ್ರಸ್ಟ್ನ ವಿಶ್ವಸ್ಥ ಸದಸ್ಯ ಪುರೋಹಿತ ಆರ್.ಎಲ್ ಭಟ್ ಮುಖ್ಯ ಅತಿಥಿಯಾಗಿ ಮಾತನಾಡಿದರು ವಿದ್ಯೆಯಲ್ಲಿ ಗುರುಕುಲವಿದ್ದು ಶಿಕ್ಷಣಾರ್ಹತೆಯಿಂದ ಜ್ಞಾನ ವೃದ್ಧಿಯಾಗುತ್ತದೆ. ಆದುದರಿಂದ ವಿದ್ಯೆಬುದ್ಧಿ ಕಲಿಸುವ ಗುರುಗಳೇ ದೇವರು. ಅಧ್ಯಾಪಣದಿಂದ ಮಾತ್ರ ಶಿಸ್ತುಬದ್ಧ ಬಾಳುವುದನ್ನು ಮೈಗೂಡಿಸಲು ಸಾಧ್ಯ. ಅಂತೆಯೇ ಸುಶಿಕ್ಷಿತರಾದಲ್ಲಿ ಸಂಪತ್ತು ಗಳಿಕೆ ಹಸನಾಗುವುದು. ನೀವು ಮಕ್ಕಳೂ ಕೂಡಾ ಕಲಿಕೆಯಲ್ಲಿ ಮಹತ್ತರವಾದ ಧ್ಯಾನವನ್ನೀಡಿ ದೇಶದ ಉನ್ನತ ಪ್ರಜೆಗಳಾಗಬೇಕು. ತಮ್ಮೆಲ್ಲರಿಗೂ ಸದ್ಭುದ್ಧಿ ಪ್ರಾಪ್ತಿಯಾಗಲಿ ಎಂದರು.
ಶಿಕ್ಷಣ ಪ್ರೋತ್ಸಾಹಕಿ, ಮುಂಬಯಿ ವಿಶ್ವ ವಿದ್ಯಾಲಯದ ಕನ್ನಡ ವಿಭಾಗದ ಸಹಾಯಕಿ ಡಾ| ಪೂರ್ಣಿಮಾ ಸುಧಾಕರ್ ಶೆಟ್ಟಿ ಪ್ರಾಸ್ತವಿಕ ನುಡಿಗಳನ್ನಾಡಿ ಪುಸ್ತಕದ ಪೂಜೆಯೊಂದಿಗೆ ಓದು ರೂಪಿಸಿಕೊಂಡಾಗ ವಿದ್ಯಾರ್ಜನೆ ಸಲೀಸಾಗುವುದು. ಆದರ್ಶ ವಿದ್ಯಾರ್ಥಿಗಳಾದಾಗ ಮಾತ್ರ ಮಕ್ಕಳ ಜೀವನ ಪಾವನ ಆಗುವುದು. ಆ ಮೂಲಕ ವಿದ್ಯೆವುಳ್ಳವರು ಮುದ್ದಾಗಿ ಬಾಳಲು ಸಾಧ್ಯ. ಮಕ್ಕಳು ಬಾಲ್ಯದಿಂದಲೇ ಶಿಸ್ತಿನ ಜೀವನ ಅಳವಡಿಸಿಕೊಂಡು ಧನಾತ್ಮಕ ಚಿಂತನೆಯನ್ನು ಮೈಗೂಡಿಸಿ ಕೊಂಡಾಗ ಶಿಕ್ಷಣವಂತ ಸಮಾಜ ರೂಪುಗೊಳ್ಳುವುದು. ಮಕ್ಕಳಲ್ಲಿ ಇಂಗ್ಲೀಷ್-ಕನ್ನಡದ ಕೀಳರಿಮೆ ದೂರಗೊಂಡಾಗ ಮಾತ್ರ ಭಿನ್ನವಾದಗಳೂ ಮರೆಯಾಗಿ ಸಧೃಢ ರಾಷ್ಟ್ರದ ನಿರ್ಮಾಣ ಸಾಧ್ಯ ಎಂದು ಕಿವಿಮಾತುಗಳನ್ನಾಡಿದರು.
ಪತ್ರಕರ್ತ ರೋನ್ಸ್ ಬಂಟ್ವಾಳ್ ಇಂಗ್ಲೀಷ್-ಕನ್ನಡ ಪುಸ್ತಕಗಳನ್ನು ಖುದ್ಧಾಗಿ ಮಂಗಳೂರುನಿಂದ ಮುಂಬಯಿಗೆ ತಂದಿದ್ದು, ಆರೀಫ್ ದೇರಳಕಟ್ಟೆ ಸಹಕರಿಸಿದ್ದರು. ಅವರ ಸೇವೆಯನ್ನು ಇದೇ ವೇಳೆ ಸ್ಮರಿಸಿ ಅಭಿನಂದಿಸಲಾಯಿತು. ಶಿಕ್ಷಕರುಗಳಾದ ಕಟ್ಟಿಮನೆ ಶ್ರೀಮಂತ ಮತ್ತು ಜಾವೀರ್ ಮಹಾದೇವ್ ಸೇರಿದಂತೆ ವಿದ್ಯಾರ್ಥಿಗಳ ಪಾಲಕರು ಹಾಜರಿದ್ದು, ತೋನ್ಸೆ ಸಂಜೀವ ಪೂಜಾರಿ ಸ್ವಾಗತಿಸಿದರು. ಡಾ| ಪೂರ್ಣಿ ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ರವಿ ಮೆಂಡನ್ ಕುರ್ಕಾಲ್ ಧನ್ಯವಾದವಿತ್ತರು.
ಚಿತ್ರ ವರದಿ : ರೋನ್ಸ್ ಬಂಟ್ವಾಳ್







