ಬಂಟ್ವಾಳ : ನರಿಕೊಂಬು ಹಾಗೂ ಶಂಭೂರು ಗ್ರಾಮದ ನೂತನ ಪಂಚಾಯತ್ ಸದಸ್ಯರ ಅಭಿನಂದನೆ ಮತ್ತು ಗ್ರಾಮಾಭಿವೃದ್ಧಿ ಚಿಂತನೆಯು ಶ್ರೀ ಭಯಂಕೇಶ್ವರ ಸದಾಶಿವ ದೇವಸ್ಥಾನ ನರಿಕೊಂಬುನಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷರಾದ ಶ್ರೀ ಗಣಪತಿ ಸೋಮಯಾಜಿಯವರ ನೇತೃತ್ವದಲ್ಲಿ ವೇದಮೂರ್ತಿ ಶ್ರೀ ವೆಂಕಪ್ಪಯ್ಯ ಭಟ್ ಕರ್ಬೆಟ್ಟು ರವರಿಂದ 26ಜನ ನೂತನ ಸದಸ್ಯರುಗಳ ಅಭಿನಂದನೆ ಕಾರ್ಯಕ್ರಮ ನೆರವೇರಿತು.
ಸಭೆಯ ಅಧ್ಯಕ್ಷತೆಯನ್ನು ದೇವಸ್ಥಾನದ ಸಮಿತಿಯ ಅಧ್ಯಕ್ಷರಾದ ಶ್ರೀ ಗಣಪತಿ ಸೋಮಯಾಜಿಯವರು ಪ್ರಾಸ್ತಾವಿಕ ಮಾತನಾಡಿ ಅಧ್ಯಕ್ಷೀಯ ನೆಲೆಯಲ್ಲಿ ನೂತನ ಸದಸ್ಯರಿಗೆ ತಮ್ಮ ಕರ್ತವ್ಯದ ಅರಿವನ್ನು ತಿಳಿಸುತ್ತಾ , ತಮ್ಮ ಕಾರ್ಯಕ್ಷೇತ್ರದ ವ್ಯಾಪ್ತಿಯೊಳಗೆ ಗ್ರಾಮ, ಊರು ಹಾಗೂ ಜನರ ಸಮಸ್ಯೆಗಳತ್ತ ಜಾತಿ , ಮತ , ಧರ್ಮ, ಪಕ್ಷಗಳ ಮರೆತು ಅಭಿವೃದ್ಧಿಯ ಬಗ್ಗೆ ಕೈ ಜೋಡಿಸಬೇಕೆಂದು ವಿನಂತಿಸಿಕೊಂಡರು .
ವೇದಮೂರ್ತಿ ಶ್ರೀ ವೆಂಕಪ್ಪಯ್ಯ ಭಟ್ ದೀಪ ಪ್ರಜ್ವಲಿಸಿ ನೂತನ ಸದಸ್ಯರನ್ನು ಅಭಿನಂದಿಸಿದರು. ನರಿಕೊಂಬು ಗ್ರಾಮ ಪಂ. ಯನ್ನು ದ.ಕ.ಜಿಲ್ಲೆಯಲ್ಲೆ ಮಾದರಿ ಗ್ರಾಮ ಮಾಡುವಲ್ಲಿ ಸದಸ್ಯರು ಪಣ ತೊಟ್ಟು ಜನರ ಸಮಸ್ಯೆಗಳಿಗೆ ಸ್ಪಂದಿಸುವಂತೆ ಆಶೀರ್ವದಿಸಿದರು .

ಮುಖ್ಯ ಅತಿಥಿಗಳಾಗಿ ತಾಲೂಕು ಪಂ.ಸದಸ್ಯರಾದ ಶ್ರೀ ಆನಂದ ಎ. ಇವರು ಪಂ.ಮಟ್ಟದಲ್ಲಿನ ಕಾರ್ಯವ್ಯಾಪ್ತಿಯ ಬಗ್ಗೆ ತಿಳುವಳಿಕೆ ನೀಡಿದರು.
ನೂತನ ಸದಸ್ಯರುಗಳು ಹಾಗೂ ಊರಿನ ಮಹನೀಯರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ದೇವಸ್ಥಾನದ ಟ್ರಸ್ಟಿ ಹಾಗೂ ಸಂಘಸಂಸ್ಥೆಗಳ ಪ್ರತಿನಿದಿ ಗಳು ಮತ್ತು ಊರ ಸಮಸ್ತರು ಉಪಸ್ಥಿತರಿದ್ದರು.
ಶ್ರೀ ಕೃಷ್ಣಪ್ಪ ಗಾಣಿಗ ಮಣಿಮಜಲು ಸ್ವಾಗತಿಸಿದರು. ಪುರುಷೋತ್ತಮ ಸಾಲಿಯಾನ್ ಏಲಬೆ ಕಾರ್ಯಕ್ರಮ ನಿರೂಪಿಸಿದರು. ಕೆ.ಶಂಕರನಾರಾಯಣ ರಾವ್ ವಂದಿಸಿದರು.
