ಬಂಟ್ವಾಳ, ಪಾಣೆಮಂಗಳೂರು, ಬಡ್ಡಕಟ್ಟೆ, ಕೊಟ್ರಮ್ಮನ ಗುಂಡಿ, ನಂದವಾರ..ಹೀಗೆ ಎಲ್ಲಿ ನೋಡಿದರೂ ಕಸ, ತ್ಯಾಜ್ಯ, ಕೆಸರು. ವಾಸನೆಯಿಂದ ಜನ ವಾಸ ಮಾಡಲು ಸಾಧ್ಯವಾಗದ ಪರಿಸ್ಥಿತಿ. ಕೆಲೆವೆಡೆ ದುರ್ವಾಸನೆಯುಕ್ತ ಮಲಿನ ನೀರು ಕಸದ ರಾಶಿಯಿಂದ ಹರಿದು ಹೋಗುತ್ತಿದ್ದು ಸುತ್ತಮುತ್ತಲ ಮನೆಯ ಬಾವಿಗೆ ಇಂಗುತ್ತಿದೆ. ಈ ಎಲ್ಲದರ ಕಾರಣದಿಂದಾಗಿ ಮಾರಕ ಸಾಂಕ್ರಮಿಕ ರೋಗದ ಭೀತಿ ಯಲ್ಲಿ ಜನ ನಲುಗಿ ಹೋಗಿದ್ದಾರೆ. ಡೆಂಗ್ಯೂ ಜ್ವರ ಬಂಟ್ವಾಳದ ಸುತ್ತ ಮುತ್ತ ಕಾಣಿಸಿಕೊಂಡಿದೆ. ಆರೋಗ್ಯ ಕೆಡುತ್ತಿರುವುದಕ್ಕೆ ಕಾರಣವಾಗುತ್ತಿರುವ ತ್ಯಾಜ್ಯ ಸಮಸ್ಯೆಗೆ ಪೂರ್ಣವಾದ ಪರಿಹಾರ ಕಂಡುಕೊಳ್ಳುವಲ್ಲಿ ಆರೋಗ್ಯ ಇಲಾಖೆ ಮತ್ತು ಪುರಸಭೆ ಎಡವಿದೆ ಎಂಬ ಆರೋಪ ವ್ಯಕ್ತವಾಗಿದೆ.
ಕಸದ ಸಮಸ್ಯೆಯನ್ನು ಶಾಶ್ವತವಾಗಿ ನಿವಾರಣೆ ಮಾಡುವ ನಿಟ್ಟಿನಲ್ಲಿ ಕಂಚಿನಡ್ಕ ಪದವಿನಲ್ಲಿ ತ್ಯಾಜ್ಯ ಸಂಸ್ಕರಣಾ ಘಟಕ ಸ್ಥಾಪನೆ ಮಾಡಲು ಪುರಸಭೆಯ ಆಡಳಿತ ಯೋಜನೆ ರೂಪಿಸಿತ್ತು. ಸಾಕಷ್ಟು ವಿರೋಧದ ಮಧ್ಯೆಯೂ ಸರಕಾರದ ಅನುಮತಿ ದೊರೆತು ಬಹುಪಾಲು ಕಾಮಗಾರಿಯೂ ಮುಗಿದಿದೆ. ಸ್ಥಳೀಯವಾಗಿ ಮನೆ, ಶಾಲೆ ಹಾಗೂ ಅಂಗನವಾಡಿ ಇರುವುದರಿಂದ ಸ್ಥಳೀಯರ ಮತ್ತೆ ವಿರೋಧದ ಹಿನ್ನೆಲೆಯಲ್ಲಿ ಕಾಮಗಾರಿ ಅರ್ದಕ್ಕೆ ನಿಂತಿದೆ.
ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕವನ್ನು ಮರು ಟೆಂಡರ್ ಕರೆಯಲಾಗಿದೆ,ಆದರೆ ಅಲ್ಲಿನ ಸಮಸ್ಯೆಯ ಬಗ್ಗೆ ಯಾವ ನಿರ್ದಾರ ತೆಗೆದುಕೊಂಡಿದ್ದಿರಿ ಎಂದು ಉಸ್ತುವಾರಿ ಸಚಿವರು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರಲ್ಲಿ ಮಂಗಳವಾರ ಸಚಿವರ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಕೇಳಿದಾಗ ಸ್ಥಳಿಯರಿಗೆ ನಿವೇಶನದ ವ್ಯವಸ್ಥೆ ಕಲ್ಪಸುವ ಬಗ್ಗೆ ಯೋಚನೆ ಮಾಡಲಾಗುತ್ತಿದೆ ಎಂದು ತಿಳಿಸಿದರು. ಬಳಿಕ ನೆಡದ ಆರೋಗ್ಯ ಸಚಿವರ ಸಭೆಯಲ್ಲಿ ತ್ಯಾಜ್ಯ ದ ಬಗ್ಗೆ ಪ್ರಸ್ತಾಪವಾಗಿ ಕಂಚಿನಡ್ಕ ಪದವು ಸಂಸ್ಕರಣಾ ಘಟಕಕ್ಕೆ ಕಸವನ್ನು ಕೊಂಡು ಹೋಗುವ ಬಗ್ಗೆ ಕೇಳಿದಾಗ ಆರೋಗ್ಯ ಸಚಿವರು ಕಂಚಿನಡ್ಕ ವಿಷಯ ಬಿಟ್ಟು ಬಿಡಿ. ಕಸವನ್ನು ಮಂಗಳೂರಿಗೆ ಕಳುಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಉಸ್ತುವಾರಿ ಸಚಿವರು ಕಂಚಿನಡ್ಕ ಪದವು ತ್ಯಾಜ್ಯ ಸಂಸ್ಕರಣಾ ಘಟಕ ಶೀಘ್ರವಾಗಿ ಆದರೆ ಇಲ್ಲಿನ ನಿರ್ಮಲ ಬಂಟ್ವಾಳದ ಕನಸು ನನಸಾಗುತ್ತದೆ ಎಂದು ಕನಸು ಕಂಡರೆ, ಆರೋಗ್ಯ ಸಚಿವರು ಮಾತ್ರ ಕಂಚಿನಡ್ಕ ಪದವು ತ್ಯಾಜ್ಯ ವಿಲೇವಾರಿ ಘಟಕದ ನಿರ್ಮಾಣಕ್ಕೆ ಬಿಡೆನು ಎಂಬಂತ್ತಿತ್ತು ಅಲ್ಲಿನ ಸ್ಥಿತಿ. ಪಾಪ ಪುರಸಭೆಗೆ ಧರ್ಮಸಂಕಟ. ತಾತ್ಕಾಲಿಕ ಕಸ ವಿಲೇವಾರಿ ಮಾಡಲು ಗುತ್ತಿಗೆದಾರರ ಸಮಸ್ಯೆಯಾದರೆ ಶಾಶ್ವತವಾದ ಪರಿಹಾರಕ್ಕೆ ಇಲ್ಲಿನ ರಾಜಕೀಯ ವ್ಯವಸ್ಥೆಯ ಅಡ್ಡಿ. ಒಟ್ಟಿನಲ್ಲಿ ಬಂಟ್ವಾಳದ ತ್ಯಾಜ್ಯ ರಸ್ತೆಯ ಬದಿಯಲ್ಲಿ ಬಿದ್ದು ಕೊಳೆತು ನಾರುತ್ತಿರುವ ದೃಶ್ಯ ಇವರಿಗೆ ಶೋಭೆ ಎನಿಸುತ್ತದೋ ಏನೊ?.

By suddi9

Leave a Reply

Your email address will not be published. Required fields are marked *